ನನ್ನ ಜೀವಕ್ಕೆ ಯಾವುದೇ ಅಪಾಯ ಸಂಭವಿಸಿದರೆ ಪ್ರಿಯಾಂಕ್ ಖರ್ಗೆ ನೇರ ಕಾರಣ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನನ್ನ ಮೇಲೆ ನಡೆಯುತ್ತಿರುವ ಕುತಂತ್ರದ ರಾಜಕೀಯ ಪಿತೂರಿಗಳಿಗೆ ದಿಕ್ಕಾರವಿರಲಿ! ಎಂದು ಬಿಜೆಪಿ ನಾಯಕ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement - 

ಸಚಿವರಾಗಿ ನಾಡಿನ ಜನತೆಯ, ಶಾಸಕರಾಗಿ ತನ್ನ ಕ್ಷೇತ್ರದ ಅಭಿವೃದ್ಧಿಗೆ ದುಡಿಯಬೇಕಾದ ಚುನಾವಣಾತ್ಮಕ ಪ್ರತಿನಿಧಿ ಇಂದು ಬೀದಿ ಬಸವನಂತೆ ಉದ್ಧಟತನ ಮೆರೆಯುತ್ತಾ ಎಲ್ಲದರಲ್ಲೂ ಮೂಗು ತೂರಿಸುವ ಕೆಲಸದಲ್ಲಿ ತೊಡಗಿದ್ದಾರೆ. ಹಿರಿಯರ ಗೌರವವನ್ನು ಕಳೆಯುವ, ಶಿಷ್ಟಾಚಾರದ ಮಿತಿಗಳನ್ನು ಮೀರಿದ ವರ್ತನೆಯನ್ನೇ ಚಾಳಿ ಮಾಡಿಕೊಂಡಿರುವವರಿಂದ ಮತ್ತೇನು ನಿರೀಕ್ಷಿಸಬಹುದು? ಎಂದು ಅವರು ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

- Advertisement - 

ಚಿತ್ತಾಪುರದಲ್ಲಿ ನನ್ನ ಮೇಲೆ ನಡೆದ ಬೆಳವಣಿಗೆಗಳು ಪೂರ್ವನಿಯೋಜಿತ ಮತ್ತು ರಾಜಕೀಯವಾಗಿ ಪ್ರೇರಿತ ದಾಳಿಗಳಾಗಿವೆ. ನನ್ನ ಮೇಲೆ ನಡೆದ ಹಲ್ಲೆ ಯತ್ನ, ಕಾರಿಗೆ ಬಣ್ಣ ಎರಚಿದ ಘಟನೆ, ಹಾಗೂ ಐಬಿಯಲ್ಲಿ ನನ್ನ ಅಕ್ರಮ ಬಂಧನ.   ಇವರ ಮಾತಿನಿಂದ ಇದು ಸರ್ಕಾರಿ ಪ್ರಾಯೋಜಿತ ಕೃತ್ಯ ಎಂದು ಸಾಬೀತಾಗಿದೆ. ಈ ಘಟನೆಯನ್ನು ಅಧಿಕಾರದಲ್ಲಿರುವ ಯಾರೊಬ್ಬರೂ ಖಂಡಿಸಿಲ್ಲ! ಎಂದು ಛಲವಾದಿ ನಾರಾಯಣಸ್ವಾಮಿ ಕಿಡಿ ಕಾರಿದ್ದಾರೆ.

ಛಲವಾದಿ ನಾರಾಯಣಸ್ವಾಮಿಗೆ ಪದ್ಮಭೂಷಣ ಕೊಡಬೇಕಾ ಅಥವಾ ಭಾರತ ರತ್ನ ಕೊಡಬೇಕಾ? ರಾಜ್ಯೋತ್ಸವ ಪ್ರಶಸ್ತಿ ಕೊಡಿಸಬೇಕಾ? ಎಂಬ ಧಿಕ್ಕಾರಪೂರ್ಣ, ವ್ಯಂಗ್ಯ ಮತ್ತು ದುರಹಂಕಾರದ ಮಾತುಗಳೇ ಇಷ್ಟೆಲ್ಲಾ ಹಲ್ಲೆ ಯತ್ನದ ಪಿತೂರಿ ಹಿಂದೆ ಸಚಿವ ಪ್ರಿಯಾಂಕ್ ಖರ್ಗೆ ಇದ್ದಾರೆ ಎನ್ನುತ್ತಿವೆ.

- Advertisement - 

ನನಗೆ ಪ್ರಾಣ ಬೆದರಿಕೆಯ ಸ್ಥಿತಿ ಇದೆ. ಹಲ್ಲೆ ಯತ್ನದ ಹಿಂದಿನ ವಾಸ್ತವ ಬೇರೆಯೇ ಇದೆ, ಕುಡಿದು ಬಂದಿದ್ದ ಗೂಂಡಾಗಳು, ಹಲ್ಲೆಗೆ ತಯಾರಿ, ಮೊಟ್ಟೆ, ಕಲ್ಲು, ಮಸಿ, ದೊಣ್ಣೆ ಎಲ್ಲವೂ ಸಿದ್ಧವಾಗಿತ್ತು. ನೂರಕ್ಕೂ ಹೆಚ್ಚು ಪೊಲೀಸರು ಇದ್ದರೂ ಗೂಂಡಾಗಳನ್ನು ತಡೆಯುವ ಯತ್ನವೇ ಮಾಡಲಿಲ್ಲ. ಪಕ್ಕದಲ್ಲಿ ನಿಂತ ಪೊಲೀಸ್ ಅಧಿಕಾರಿಗಳೂ ಸಹ ಅಸಾಯಕರಾಗಿ ನಿಂತಿರುವ ದೃಶ್ಯಗಳು ಜನಸಾಮಾನ್ಯರಿಗೆ ಇದು “ರಿಪಬ್ಲಿಕ್ ಆಫ್ ಕಲಬುರಗಿ” ಎಂಬ ವಾಸ್ತವವನ್ನು ಹೇಳುತ್ತವೆ ಎಂದು ಖರ್ಗೆ ವಿರುದ್ಧ ಹರಿಹಾಯ್ದಿದ್ದಾರೆ.

ನನ್ನ ಜೀವಕ್ಕೆ ಯಾವುದೇ ಅಪಾಯ ಸಂಭವಿಸಿದರೆ, ಅದಕ್ಕೆ ನೇರ ಕಾರಣರಾಗುವವರು ಪ್ರಿಯಾಂಕ್ ಖರ್ಗೆ ಮತ್ತು ಅವರ ರಾಜಕೀಯ ಪಿತೂರಿ ಕೇಂದ್ರ. ಈ ಬಗ್ಗೆ ನಾನು ಈಗಾಗಲೇ ಡಿಜಿಪಿ, ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಕಾನೂನು ಕೇವಲ ಜನತೆಯ ಮುಂದೆ ಮಾತ್ರ ಕಾರ್ಯನಿರ್ವಹಿಸುತ್ತದೆಯೇ? ಕಾಂಗ್ರೆಸ್‌ನವರಿಗೆ ಕಾನೂನು ಕೈಗೆತ್ತಿಕೊಳ್ಳುವ ಅಧಿಕಾರವನ್ನು ಯಾರು ನೀಡಿದರು? ಗುಲ್ಬರ್ಗಾದಂತಹ ಸ್ಥಳಗಳಲ್ಲಿ ಇವು ಹೊಸ ಘಟನೆಗಳಲ್ಲ. ಪ್ರತಿದಿನವೂ ನಡೆಯುತ್ತಿರುವ ಈ ಗೂಂಡಾಗಿರಿ, ಕಾಂಗ್ರೆಸ್‌ನ ಸಿದ್ಧ ಪಾಠವಾಗಿದೆ. ಇಷ್ಟೆಲ್ಲಾ ಘಟನೆಗಳು ನಡೆದರೂ ಸಹ ಒಬ್ಬರ ಮೇಲೂ ಕೂಡಾ ದೂರು ದಾಖಲಾಗಿಲ್ಲ, ಯಾರನ್ನೂ ವಿಚಾರಣೆ ನಡೆಸಿಲ್ಲ. ಬದಲಾಗಿ ಘಟನೆ ನಡೆದ ದಿನವೇ ನಮ್ಮ ಕಾರ್ಯಕರ್ತರಾದ ಅಂಬಾರಾಯ ಅಷ್ಟಗಿ ಅವರನ್ನು ತಡರಾತ್ರಿಯವರೆಗೆ ಬಲವಂತವಾಗಿ ಅಕ್ರಮ ಬಂದನದಲ್ಲಿಟ್ಟಿದ್ದುದು ಅಕ್ಷಮ್ಯ ಅಪರಾಧ.

ಇಂತಹ ಪ್ರಚೋದನೆಯ ರಾಜಕೀಯ ನಾಟಕಗಳಿಗೆ ಕಡಿವಾಣ ಹಾಕಬೇಕಾದ ಅಗತ್ಯವಿದೆ. ಅನ್ಯಾಯದ ವಿರುದ್ಧ ನನ್ನ ಹೋರಾಟ ನಿರಂತರ ಇರಲಿದೆ ಎಂದು ಛಲವಾದಿ ನಾರಾಯಣಸ್ವಾಮಿ ಎಚ್ಚರಿಸಿದ್ದಾರೆ.

Share This Article
error: Content is protected !!
";