ಶಿಕ್ಷಣ ಮತ್ತು ಉದ್ಯೋಗ ನೀಡಲು 371 (ಜೆ) ಸಮರ್ಪಕ ಜಾರಿ-ಸಚಿವ ಪ್ರಿಯಾಂಕ್ ಖರ್ಗೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಲ್ಯಾಣ ಕರ್ನಾಟಕ ಭಾಗದ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಸಂವಿಧಾನದ ಅನುಚ್ಚೇದ 371(ಜೆ) ಅಡಿ ಶಿಕ್ಷಣ ಮತ್ತು ಉದ್ಯೋಗಕ್ಕೆ ಕಲ್ಪಿಸಿರುವ ಮೀಸಲಾತಿ ನಿಯಮಗಳ ಸಮರ್ಪಕ ಜಾರಿ ಮತ್ತು ಅನುಷ್ಠಾನಕ್ಕೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹೆಚ್ಚು ಆಸಕ್ತಿ ವಹಿಸಬೇಕು. ಈ ವಿಷಯದಲ್ಲಿ ಅನಾದರ
, ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ವಹಿಸಲಾಗುವುದು. ಪ್ರಗತಿ ಪರಿಶೀಲನಾ ಸಭೆಗಳಿಗೆ ಇಲಾಖಾ ಮುಖ್ಯಸ್ಥರು ಹಾಗೂ ಕಾರ್ಯದರ್ಶಿಗಳಿಗಿಂತ ಮೇಲ್ಪಟ್ಟ ಜವಾಬ್ದಾರಿಯುತ ಅಧಿಕಾರಿಗಳು ಖುದ್ದಾಗಿ ಹಾಜರಾಗಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು 371(ಜೆ) ಅಡಿ ಹೊರಡಿಸಲಾಗಿರುವ ಆದೇಶಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ಮತ್ತು ಸಚಿವ ಸಂಪುಟ ಉಪಸಮಿತಿಯ ವರದಿಗಳ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಭಿವೃದ್ಧಿಯಲ್ಲಿ ತಾರತಮ್ಯ ಹೋಗಲಾಡಿಸುವ ಮಹತ್ವಾಕಾಂಕ್ಷೆಯೊಂದಿಗೆ ಸಂವಿಧಾನದ 371(ಜೆ) ಅನುಚ್ಚೇದಕ್ಕೆ ತಿದ್ದುಪಡಿ ತಂದು ಕಲ್ಪಿಸಲಾಗಿರುವ ಸಂವಿಧಾನಾತ್ಮಕ ಹಕ್ಕು ಮತ್ತು ಸೌಕರ್ಯಗಳ ಜಾರಿಗೆ ಅಧಿಕಾರಿಗಳು ಅನಾಸಕ್ತಿ ತೋರುತ್ತಿರುವುದನ್ನು ಗಮನಿಸಲಾಗುತ್ತಿದೆ. ಅನೇಕ ಬಾರಿ ನೆನಪೋಲೆ, ಸುತ್ತೋಲೆ ಕಳುಹಿಸಿದರೂ ಕೆಲ ಇಲಾಖೆಗಳ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸದೇ ನಿರ್ಲಕ್ಷಿಸುತ್ತಿರುವುದನ್ನು ಸಚಿವ ಸಂಪುಟ ಉಪಸಮಿತಿ ಗಂಭೀರವಾಗಿ ಪರಿಗಣಿಸಿದೆ.

ಇನ್ನು ಮುಂದೆ ಪ್ರತಿ 15 ದಿನಗಳಿಗೊಮ್ಮೆ ಪ್ರಗತಿ ಪರಿಶೀಲನೆ ಸಭೆಗಳನ್ನು ಆಯ್ದ ಇಲಾಖೆಗಳೊಂದಿಗೆ ನಡೆಸಲಾಗುವುದು. ಸಭೆಗೆ ಕಡ್ಡಾಯವಾಗಿ ಸರ್ಕಾರದ ಕಾರ್ಯದರ್ಶಿಗಳು ಮತ್ತು ಇಲಾಖಾ ಮುಖ್ಯಸ್ಥರ ಹಂತದ ಅಧಿಕಾರಿಗಳು ಭಾಗವಹಿಸಬೇಕು. ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿರುವ ಪೊಲೀಸ್ ಮತ್ತು ಇತರೆ ಇಲಾಖೆಗಳು ಕೂಡಲೇ ನೇಮಕಾತಿ ಆದೇಶಗಳನ್ನು ಅಭ್ಯರ್ಥಿಗಳಿಗೆ ನೀಡಿ ಸೇವೆಗೆ ಹಾಜರುಪಡಿಸಿಕೊಳ್ಳಬೇಕು. ಸ್ಥಳೀಯ ಮತ್ತು ಉಳಿಕೆ ಮಾತೃವೃಂದದ ಸಂಯುಕ್ತ ಜೇಷ್ಠತಾ ಪಟ್ಟಿಯನ್ನು ಎಲ್ಲಾ ಇಲಾಖೆಗಳು ಹೊರಡಿಸಬೇಕು. ಈ ವಿಷಯದಲ್ಲಿ ನ್ಯಾಯಲಯದ ಆದೇಶ ಸ್ಪಷ್ಟವಾಗಿದೆ. ಮಾಸಾಂತ್ಯದೊಳಗೆ ಆದೇಶ ಹೊರಡಿಸಿ ಗೊಂದಲ ನಿವಾರಿಸಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಸೂಚಿಸಿದರು.

ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಹುದ್ದೆಗಳ ನೇಮಕಾತಿ ಹಾಗೂ ಮುಂಬಡ್ತಿಗೆ ಸಂಬಂಧಿಸಿದಂತೆ 2023 ರ ಸುತ್ತೋಲೆ ಮಾತ್ರ ಜಾರಿಯಲ್ಲಿದೆ. ಅದಕ್ಕೂ ಹಿಂದಿನ ಎಲ್ಲಾ ಹಳೆಯ ಆದೇಶಗಳನ್ನು ಹಿಂಪಡೆಯಲಾಗಿದೆ. ಅನಗತ್ಯವಾಗಿ ಸ್ಪಷ್ಟೀಕರಣ, ಮಾರ್ಗದರ್ಶನ ಕೋರಿ ಪತ್ರ ಬರೆದು ಕಾಲಹರಣ ಮಾಡಬಾರದು. ಶಾಲಾಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯೊಂದರಲ್ಲಿಯೇ ನೇರ ನೇಮಕಾತಿಗೆ ಸೇರಿದ ಸುಮಾರು 12 ಸಾವಿರ ಹಾಗೂ ಮುಂಬಡ್ತಿಗೆ ಮೀಸಲಿಟ್ಟ ಸುಮಾರು 9 ಸಾವಿರ ಹುದ್ದೆಗಳು ಖಾಲಿ ಇವೆ. ಈಗಾಗಲೇ 5267 ಶಿಕ್ಷಕರ ನೇಮಕಾತಿಗೆ ಕ್ರಮವಹಿಸಲಾಗುತ್ತಿದೆ. ಉಳಿದ 6 ಸಾವಿರ ಹುದ್ದೆಗಳಿಗೂ ನೇರ ನೇಮಕಾತಿ ಮಾಡಿಕೊಳ್ಳಬೇಕು.

ಯಾವುದೇ ಇಲಾಖೆಯು ಕಲ್ಯಾಣ ಕರ್ನಾಟಕ ಭಾಗದ ಖಾಲಿ ಹುದ್ದೆಗಳ ನೇಮಕಾತಿಗೆ ಮುನ್ನ ಆರ್ಥಿಕ ಇಲಾಖೆಯ ಸಹಮತಿ ಪಡೆಯುವ ಅಗತ್ಯವಿಲ್ಲ. ಇದಕ್ಕೆ ಸಂಬAಧಿಸಿದAತೆ ಸರ್ಕಾರದ ಆದೇಶವೂ ಕೂಡ ಇದೆ. ಶಿಕ್ಷಣ, ಆರೋಗ್ಯ, ಪೊಲೀಸ್, ಸಾರಿಗೆ, ಇಂಧನ ಸೇರಿದಂತೆ ಅಧಿಕ ಸಂಖ್ಯೆಯಲ್ಲಿ ಖಾಲಿ ಹುದ್ದೆಗಳನ್ನು ಹೊಂದಿರುವ ಇಲಾಖೆಗಳು ನೇಮಕಾತಿಗೆ ತ್ವರಿತ ಕ್ರಮ ವಹಿಸಬೇಕು. ಕಲ್ಯಾಣ ಕರ್ನಾಟಕ ಭಾಗದ ನೇಮಕಾತಿ, ಮುಂಬಡ್ತಿಗೆ ಸಂಬAಧಿಸಿದ ನ್ಯಾಯಾಲಯ ಪ್ರಕರಣಗಳು ತ್ವರಿತ ವಿಲೇವಾರಿಗೆ ಕಾನೂನು ಸಚಿವರು ಹಾಗೂ ಅಡ್ವೋಕೇಟ್ ಜನರಲ್ ಅವರೊಂದಿಗೆ ಪ್ರತ್ಯೇಕ ಸಭೆ ನಡೆಸಲಾಗುವುದು ಎಂದರು.

ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ಸರ್ಕಾರವು ಕಲ್ಯಾಣ ಕರ್ನಾಟಕ ಭಾಗಕ್ಕೆ ಹೊಸ ಇಂಜಿನಿಯರಿಂಗ್ ಕಾಲೇಜುಗಳು, ವಸತಿ ಶಾಲೆ, ಹಾಸ್ಟೆಲ್‌ಗಳನ್ನು ಮಂಜೂರು ಮಾಡಿದೆ. ಅದಕ್ಕನುಗುಣವಾಗಿ ಹುದ್ದೆಗಳನ್ನು ಸೃಜಿಸಿ ನೇಮಕಾತಿಗೆ ಕ್ರಮವಹಿಸಬೇಕು. ಕಾಲಮಿತಿಯೊಳಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಅಗತ್ಯವಿರುವ ಎಲ್ಲಾ ಇಲಾಖೆಗಳಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿಗೆ ಕ್ರಮವಹಿಸಬೇಕು. 371(ಜೆ) ಅಡಿ ಹೊರಡಿಸಿರುವ ಆದೇಶಗಳ ಜಾರಿ ಮತ್ತು ಸಚಿವ ಸಂಪುಟ ಉಪಸಮಿತಿ ಸಭೆಗೆ ಗೈರು ಹಾಜರಾಗುವ ಇಲಾಖೆಗಳ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದರು.

ಪೌರಾಡಳಿತ ಮತ್ತು ಹಜ್ ಸಚಿವ ರಹೀಂಖಾನ್ ಸೇರಿದಂತೆ ಯೋಜನೆ, ಕಾರ್ಯಕ್ರಮ, ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಅಧಿಕಾರಿಗಳು, ಸರ್ಕಾರದ ವಿವಿಧ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಇಲಾಖಾ ಮುಖ್ಯಸ್ಥರು ಮತ್ತಿತರರು ಸಭೆಯಲ್ಲಿ ಹಾಜರಿದ್ದರು.

 

 

 

Share This Article
error: Content is protected !!
";