ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಸ ವಿಲೇವಾರಿಗೆ ಬಿಜೆಪಿ ನಾಯಕರು ಬಿಡುವುದು ಬೇಡ. ಬಿಜೆಪಿ ನಾಯಕರೇ ಕಸ ಇಟ್ಟುಕೊಳ್ಳಲಿ. ಯಾರು ಬಿಡುವುದಿಲ್ಲವೋ, ಅಂಥವರ ಕ್ಷೇತ್ರದಲ್ಲಿ ಕಸವನ್ನೇ ತೆಗೆಯುವುದಿಲ್ಲ. ಆಗ ಜನರೇ ಅವರಿಗೆ ಉಗಿಯುತ್ತಾರೆ. ಮೈಕ್ ಹಾಕಿ ಪ್ರಚಾರ ಮಾಡಿಸುತ್ತೇನೆ. ಕಾಲನ್ನು ಕಟ್ಟಿಕೊಳ್ಳಲು ಆಗುತ್ತದೆಯೇ? ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಸದಾಶಿವನಗರದ ನಿವಾಸದ ಬಳಿ ಅಸ್ಸಾಂಗೆ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಸವನ್ನು ಎಲ್ಲಾದರೂ ಒಂದು ಕಡೆ ಹಾಕಬೇಕಲ್ಲವೇ? ಕಸ ಯಾರದ್ದು, ಅದು ಜನರ ಕಸ. ಮೊದಲಿನಿಂದಲೂ ಹೇಗೆ ಸಂಪ್ರದಾಯವಿತ್ತೋ, ಅದೇ ರೀತಿ ಮಾಡಿಕೊಂಡು ಬರುತ್ತಿದ್ದೇವೆ. ಬಿಜೆಪಿ ಹಾಗೂ ನಮ್ಮ ಸಮಯದಲ್ಲಿ ತೀರ್ಮಾನ ಮಾಡಿದ್ದು ಇದೇ ರೀತಿ ಎಂದು ತಿಳಿಸಿದರು.
ಸಾವಿರಾರು ಕೋಟಿ ರೂ.ಗಳನ್ನು ಅಭಿವೃದ್ಧಿಗೆ ಕೊಟ್ಟಿದ್ದೇವೆ. ಎಷ್ಟು ಎಂತ ಕೊಡಲು ಆಗುತ್ತದೆ. 20, 30 ಕೋಟಿ ಸೇರಿದಂತೆ 50-100 ಕೋಟಿ ಹಣವನ್ನು ಅಭಿವೃದ್ಧಿಗೆ ಕೊಡುತ್ತಾ ಬಂದಿದ್ದೇವೆ. ನಾವು ಕೊಡುತ್ತೇವೆ. ಅವರು ಅರ್ಥ ಮಾಡಿಕೊಳ್ಳಬೇಕು. ಮಹದೇವಪುರದಲ್ಲಿ ಕಸ ವಿಲೇವಾರಿ ನಿಲ್ಲಿಸಲಾಗಿದೆ. ನಾವು ಸಹ ಅಲ್ಲಿನ ಕಸ ತೆಗೆಯಬೇಡಿ ಎಂದರೆ ಏನಾಗಬಹುದು. ಕಸ ವಿಲೇವಾರಿಗೆ ನಾಲ್ಕು ಕಡೆ ಜಮೀನುಗಳನ್ನು ನೋಡಿದ್ದೆವು. ಭೂಮಿ ಸಮಸ್ಯೆ ಬಂದ ಕಾರಣಕ್ಕೆ ಎರಡು ಕಡೆ ಅಂತಿಮಮಾಡಿದ್ದೇವೆ. ಟೆಂಡರ್ ಕೂಡ ಕರೆಯಲಾಗಿದೆ. ನಮ್ಮ ಕೆಲಸ ನಾವು ಮಾಡುತ್ತಿದ್ದೇವೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.
ಸಾರಿಗೆ ನೌಕರರ ಹಿಂಬಾಕಿ ನೀಡಿದ್ದೇವೆ: ರಾಜ್ಯ ರಸ್ತೆ ಸಾರಿಗೆ ನೌಕರರ ಬೇಡಿಕೆಗಿಂತ ಕಡಿಮೆ ಹಿಂಬಾಕಿ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ, ಸದ್ಯ ಅಷ್ಟು ಕೊಟ್ಟಿರುವುದಕ್ಕೆ ಸಂತೋಷ ಪಡಬೇಕು. ಸರ್ಕಾರದ ಪರಿಸ್ಥಿತಿಯನ್ನು ಅವರು ಅರ್ಥ ಮಾಡಿಕೊಳ್ಳಬೇಕು. ದಯವಿಟ್ಟು ಸಾರಿಗೆ ನೌಕರರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಪ್ರಿಯಾಂಕಾ ಗಾಂಧಿ ಭೇಟಿ:
ಅಸ್ಸಾಂ ಚುನಾವಣೆ ಹಿನ್ನೆಲೆಯಲ್ಲಿ ಪ್ರಿಯಾಂಕಾ ಗಾಂಧಿ, ನಾನು, ಭೂಪೇಶ್ ಬಘೇಲ ಅವರು ಹಾಗೂ ತಂಡ ತೆರಳುತ್ತಿದ್ದೇವೆ. ಹಲವು ವಿಚಾರಗಳ ಕುರಿತು ಸರಣಿ ಸಭೆಗಳನ್ನು ನಡೆಸುತ್ತೇವೆ. ಅಸ್ಸಾಂ ಚುನಾವಣೆ ವಿಚಾರವಾಗಿ ದೆಹಲಿಯಲ್ಲಿ 3-4 ಸಭೆ ನಡೆಸಿದ್ದೇವೆ. ಬೇಕಾದ ಮಾಹಿತಿ ಪಡೆದುಕೊಂಡಿದ್ದೇವೆ. ತಂತ್ರಗಾರಿಕೆ ಸೇರಿದಂತೆ ಇನ್ನಿತರೆ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ಬಾರಿ ಅಸ್ಸಾಂನಲ್ಲಿ ಬದಲಾವಣೆ ಆಗುತ್ತದೆ ಎನ್ನುವ ಭರವಸೆಯಿದೆ ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಕಾಮಾಕ್ಯ ದೇವಿ ದೇವಾಲಯಕ್ಕೂ ಭೇಟಿ ನೀಡುತ್ತೇನೆ. ಎರಡು ದಿನಗಳ ಪ್ರವಾಸ ಇದಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಾಹಿತಿ ನೀಡಿದರು.

