ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಆರ್ಥಿಕ ತಜ್ಞರೂ ಆಗಿರುವ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಅಧ್ಯಕ್ಷ ಪ್ರೊ. ಎಂ. ಗೋವಿಂದರಾವ್ ಅವರು ಮಾತನಾಡಿ, 23 ವರ್ಷಗಳ ಹಿಂದೆ ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ರಾಜ್ಯದ 175 ತಾಲ್ಲೂಕುಗಳನ್ನು ಅಧ್ಯಯನ ಮಾಡಿ ಡಾ. ಡಿ.ಎಂ. ನಂಜುಂಡಪ್ಪ ಅವರು 39 ಅತ್ಯಂತ ಹಿಂದುಳಿದ ತಾಲ್ಲೂಕುಗಳು, 0 ಅತಿ ಹಿಂದುಳಿದ ತಾಲ್ಲೂಕುಗಳು ಹಾಗೂ 35 ಹಿಂದುಳಿದ ತಾಲ್ಲೂಕುಗಳು ಎಂದು ಹಿಂದುಳಿದಿರುವಿಕೆಯನ್ನು ಗುರುತಿಸಿದ್ದರು.
ಇದರಲ್ಲಿ ಉತ್ತರ ಕರ್ನಾಟಕ ಭಾಗದ 26 ಅತ್ಯಂತ ಹಿಂದುಳಿದ ತಾಲ್ಲೂಕುಗಳಾಗಿದ್ದರೆ, ದಕ್ಷಿಣ ಕರ್ನಾಟಕದ 13 ತಾಲ್ಲೂಕುಗಳು ಇದ್ದವು. ಇದರ ನಿವಾರಣೆಗಾಗಿ ಮಾಡಿದ ಶಿಫಾರಸ್ಸಿನ ಅನ್ವಯ, ಸರ್ಕಾರ 2007-08 ರಿಂದ 2023-24 ರವರೆಗೆ 45,789 ಕೋಟಿ ರೂ. ಗಳ ಹಂಚಿಕೆಯಾಗಿ, 37,661 ಕೋಟಿ ರೂ. ಬಿಡುಗಡೆಯಾಗಿದ್ದು, ಈ ಪೈಕಿ 34,381 ಕೋಟಿ ರೂ. ಖರ್ಚಾಗಿದೆ. ಪ್ರಸ್ತುತ ತಾಲ್ಲೂಕುಗಳ ಸಂಖ್ಯೆ 240 ಆಗಿದೆ. ಇಷ್ಟೊಂದು ಹಣ ಖರ್ಚು ಮಾಡಿದ ಬಳಿಕ, ತಾಲ್ಲೂಕುಗಳ ಹಿಂದುಳಿದಿರುವಿಕೆ ಕಡಿಮೆ ಆಗಿದೆಯೇ, ಯಾವೆಲ್ಲಾ ಕ್ಷೇತ್ರದಲ್ಲಿ ಏನೇನು ಅಭಿವೃದ್ಧಿಯಾಗಿದೆ.
ಹಣ ನೀಡಿದರೂ ಅಭಿವೃದ್ಧಿ ಆಗಲಿಲ್ಲವೆಂದರೆ ಅದಕ್ಕೆ ಕಾರಣಗಳೇನು, ಎಂಬುದನ್ನು ಕೂಲಂಕಷವಾಗಿ ಪರಿಶೀಲಿಸಿ, ರಾಜ್ಯದಲ್ಲಿನ ಅಸಮತೋಲನ ಸರಿಪಡಿಸಿ, ಸಮಗ್ರ ಕರ್ನಾಟಕ ಅಭಿವೃದ್ಧಿಗೊಳ್ಳಲು ಏನೆಲ್ಲ ಕ್ರಮ ವಹಿಸಬೇಕು ಎನ್ನುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯನ್ನು ರಚಿಸಿದ್ದಾರೆ. ಸಮಿತಿಯನ್ನು ಮಾರ್ಚ್–2024ರಲ್ಲಿ ರಚಿಸಲಾಗಿದ್ದರೂ, ಸೆಪ್ಟೆಂಬರ್–2024 ರ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು.
ರಾಜ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಮತ್ತು ಬೆಂಗಳೂರು ನಗರ ಜಿಲ್ಲೆಗಳು ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ದಿಯ ವೇಗ ಹೊಂದಿದ್ದು, ಉಳಿದ ಜಿಲ್ಲೆಗಳಲ್ಲಿ ಅಭಿವೃದ್ಧಿ ವೇಗ ಪಡೆದಿಲ್ಲ. ಮೂಲಭೂತ ಸೌಕರ್ಯ, ವಿದ್ಯುತ್, ರಸ್ತೆ, ಹಣಕಾಸು, ಶಿಕ್ಷಕರು ಮತ್ತು ವಿದ್ಯಾರ್ಥಿ ಅನುಪಾತ, ಸಾಕ್ಷರತೆ, ವೈದ್ಯಕೀಯ ವ್ಯವಸ್ಥೆ, ಕೈಗಾರಿಕೆ, ನೀರಾವರಿ, ಕೃಷಿ, ಸೇವಾ ವಲಯ ಮುಂತಾದ 32 ಸೂಚ್ಯಂಕಗಳನ್ನು ಆಧರಿಸಿ ಸಮಿತಿಯು ವರದಿ ಸಂಗ್ರಹಿಸಲಿದೆ.
ಸಮಿತಿಯು ಪ್ರತಿ ಜಿಲ್ಲೆಗೆ ಭೇಟಿ ನೀಡಿ, ಅಲ್ಲಿನ ಜನರ ಅನುಭವ, ಅಭಿಪ್ರಾಯಗಳನ್ನು ಪಡೆದು, ಸಂಗ್ರಹಿಸಿದ ಮಾಹಿತಿ, ಅಧ್ಯಯನದ ವರದಿಗಳ ಆಧಾರದಲ್ಲಿ ಅಸಮತೋಲನ ನಿವಾರಣೆ ಹಾಗೂ ಸಮಗ್ರ ಕರ್ನಾಟಕದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಶಿಫಾರಸ್ಸುಗಳ ವರದಿಯನ್ನು ಮುಂಬರುವ ಸೆಪ್ಟೆಂಬರ್ ವೇಳೆಗೆ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಿದೆ ಎಂದರು.