ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಇಲ್ಲಿನ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದ ಕ್ರೀಡಾಂಗಣದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ -ವಿಟಿಯು ರಾಜ್ಯ ಮಟ್ಟದ ಮಹಿಳಾ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ 2026-27ಗೆ ಸೋಮವಾರ ಚಾಲನೆ ನೀಡಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ದೇವರಾಜ ಅರಸ್ ಶಿಕ್ಷಣ ಸಂಸ್ಥೆ ಟ್ರಸ್ಟ್ನ ಉಪಾಧ್ಯಕ್ಷ ಜೆ.ರಾಜೇಂದ್ರ ಮಾತನಾಡಿ, ಭಾರತೀಯ ನೆಲಮೂಲದ ಕ್ರೀಡೆಗಳಲ್ಲಿ ಒಂದಾಗಿರುವ ಬಾಲ್ಬ್ಯಾಡ್ಮಿಂಟನ್ ಕೌಶಲ್ಯಾಧಾರಿತ ಕ್ರೀಡೆಯಾಗಿದ್ದು, ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ವೃದ್ದಿಗೆ ಸಹಕಾರಿಯಾಗಿದೆ. ವಿಟಿಯು ರಾಜ್ಯ ಮಟ್ಟದ ಅಂತರ ಕಾಲೇಜು ಕ್ರೀಡಾಕೂಟದಲ್ಲಿ ರಾಜ್ಯದ ವಿವಿದೆಡೆಗಳಿಂದ 11 ತಂಡಗಳು ಆಗಮಿಸಿದ್ದು, ಉತ್ತಮ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಕ್ರೀಡಾಪಟುಗಳು ಸೋಲು-ಗೆಲವುಗಳನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡಾಸ್ಪೂರ್ತಿಯೊಂದಿಗೆ ಆಟವಾಡಬೇಕು. ಕ್ರೀಡೆ ಎಲ್ಲರನ್ನು ಬೆಸೆಯುವ ವೇದಿಕೆಯಾಗಬೇಕು ಎಂದು ತಿಳಿಸಿದರು.
ಬೆಂಗಳೂರು ಉತ್ತರ ವಿಭಾಗದ ದೈಹಿಕ ಶಿಕ್ಷಣ ನಿರ್ದೇಶಕ ಮಲ್ಲಿಕಾರ್ಜುನಗೌಡ ಬಿ.ಪಾಟೀಲ್ ಮಾತನಾಡಿ, ಆಟದ ನಿಯಮಾವಳಿಗಳನ್ನು ಪಾಲನೆ ಮಾಡುವುದು ಎಲ್ಲ ಕ್ರೀಡಾಪಟುಗಳ ಮೊದಲ ಆದ್ಯತೆಯಾಗಬೇಕು. ಶಿಸ್ತು ಮತ್ತು ಕ್ರೀಡಾಸ್ಪೂರ್ತಿಯೊಂದಿಗೆ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಕೆ.ಜಿ.ಹನುಮಂತರಾಜು, ಪ್ರಾಂಶುಪಾಲ ಡಾ.ಪಿ.ವಿಜಯಕಾರ್ತಿಕ್, ಉಪಪ್ರಾಂಶುಪಾಲ ಡಾ.ಶಿವಪ್ರಸಾದ್, ಡೀನ್ ಡಾ.ಶ್ರೀನಿವಾಸರೆಡ್ಡಿ, ಮಾನವ ಸಂಪನ್ಮೂಲ ನಿರ್ದೇಶಕ ಬಾಬುರೆಡ್ಡಿ, ದೈಹಿಕ ಶಿಕ್ಷಣ ನಿರ್ದೇಶಕ ದಾದಾಫೀರ್, ಸಲಹೆಗಾರ ಯೋಗೀಶ್, ವಿವಿಧ ವಿಭಾಗಗಳ ಮುಖ್ಯಸ್ಥರು, ಪಾಲ್ಗೊಂಡಿದ್ದರು.

