ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ದಾವಣಗೆರೆ ವಿಶ್ವವಿದ್ಯಾನಿಲಯದ ಪ್ರಸಾರಾಂಗದ ವತಿಯಿಂದ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಲು ಮತ್ತು ಜಾಗತಿಕ ಮಟ್ಟದಲ್ಲಿ ಅವುಗಳ ಮೂಲಕ ಸಂಶೋಧನಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಆದ್ಯತೆ ನೀಡಲಾಗುವುದು ಎಂದು ಕುಲಪತಿ ಪ್ರೊ.ಬಿ.ಡಿ.ಕುಂಬಾರ ತಿಳಿಸಿದರು.
ವಿಶ್ವವಿದ್ಯಾನಿಲಯದ ಆವರಣದಲ್ಲಿ ಬುಧವಾರ ಪ್ರಸಾರಾಂಗ ಕಚೇರಿ ಉದ್ಘಾಟಿಸಿ ಮಾತನಾಡಿದರು. ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು ನಡೆಸುವ ಸಂಶೋಧನೆಗಳನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡುವ ಉದ್ದೇಶದಿಂದ ಸಂಶೋಧನಾ ಜರ್ನಲ್ ಆರಂಭಿಸಿ ಪ್ರಕಟಿಸಲು ಆದ್ಯತೆ ನೀಡಲಾಗುವುದು. ಇದಕ್ಕೆ ಪೂರಕವಾದ ಸಿದ್ಧತೆಗಳು ನಡೆಯುತ್ತಿವೆ ಎಂದು ಹೇಳಿದರು.
ವಿಜ್ಞಾನ, ವಾಣಿಜ್ಯ ಮತ್ತು ವ್ಯವಹಾರ ನಿರ್ವಹಣೆ, ಭಾಷೆ ಮತ್ತು ಸಮಾಜ ವಿಜ್ಞಾನ ಕ್ಷೇತ್ರಗಳ ಆಧ್ಯಯನ ಮತ್ತು ಮೌಲ್ಯಯುತ ಸಂಶೋಧನೆಗಳನ್ನು ಗುರುತಿಸಲು ಜರ್ನಲ್‌ಗಳು ಸಹಕಾರಿ ಆಗಲಿವೆ. ವಿದ್ವತ್‌ಪೂರ್ಣ ಸಂಶೋಧನೆಗಳಿಗೆ ಆದ್ಯತೆ ನೀಡುವ ಜೊತೆಗೆ ಅಧ್ಯಯನಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಅಲ್ಲದೆ ಇತಿಹಾಸ, ರಾಜಕೀಯ, ಅರ್ಥಶಾಸ್ತç, ಮಾಧ್ಯಮ, ವಾಣಿಜ್ಯ ನಿರ್ವಹಣೆಯ ವಿಷಯಗಳ ಪುಸ್ತಕ ಪ್ರಕಟಣೆಗೂ ಗಮನ ನೀಡಲಾಗುವುದು ಎಂದರು.
ದಾವಣಗೆರೆ ವಿಶ್ವವಿದ್ಯಾನಿಲಯವು ಸಂಶೋಧನಾ ಕ್ಷೇತ್ರದಲ್ಲಿ ಸಾಧನೆಯ ಹಾದಿಯಲ್ಲಿ ಸಾಗುತ್ತಿದೆ. ಸಂಶೋಧನೆಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ವಿಶ್ವವಿದ್ಯಾನಿಲಯ ಪ್ರಾಧ್ಯಾಪಕರು ವಿದೇಶಿ ವಿಶ್ವವಿದ್ಯಾನಿಲಯಗಳ ಜೊತೆಗೂಡಿ ಸಂಶೋಧನೆ ಕೈಗೊಳ್ಳುತ್ತಿದ್ದಾರೆ. ಅತ್ಯಂತ ಕಡಿಮೆ ಅವಧಿಯಲ್ಲಿ ವಿಶ್ವವಿದ್ಯಾನಿಲಯದ ಬೆಳವಣಿಗೆ ಗಮನಾರ್ಹ ಸಾಧನೆಯಾಗಿದೆ ಎಂದು ನುಡಿದರು.
ಸಿಂಡಿಕೇಟ್ ಸದಸ್ಯೆ ಮತ್ತು ಪ್ರಸಾರಾಂಗ ಸಲಹಾ ಸಮಿತಿ ಸದಸ್ಯರಾದ ಡಾ.ಜಿ.ಕೆ.ಪ್ರೇಮಾ ಮಾತನಾಡಿ, ವಿಶ್ವವಿದ್ಯಾನಿಲಯದಲ್ಲಿ ಪ್ರಕಟಿಸುವ ಸಂಶೋಧನಾ ಪ್ರಬಂಧಗಳು ಇತರರಿಗೆ ಮಾದರಿಯಾಗಿ, ಆಕರವಾಗಬೇಕು. ಸಂಶೋಧನಾ ಪ್ರಬಂಧಗಳನ್ನು ಒಟ್ಟುಗೂಡಿಸಿ ಪುಸ್ತಕ ರೂಪದಲ್ಲಿ ಹೊರ ತರುವುದೂ ಮುಖ್ಯವಾಗಿದೆ. ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಸಂಶೋಧಕರು, ಸಂಶೋಧನಾರ್ಥಿಗಳಿಗೆ ಸುಲಭವಾಗಿ ಲಭ್ಯವಾಗುವಂತೆ ಯೋಜನೆ ರೂಪಿಸುವುದು ಅಗತ್ಯ ಎಂದು ಸಲಹೆ ನೀಡಿದರು.
ಕುಲಸಚಿವ ಎಸ್.ಬಿ.ಗಂಟಿ, ಪರೀಕ್ಷಾಂಗ ಕುಲಸಚಿವ ಪ್ರೊ.ಸಿ.ಕೆ.ರಮೇಶ್, ಸಿಂಡಿಕೇಟ್ ಸದಸ್ಯರಾದ ಶಾರದಾ ಪಾಟೀಲ, ಡಾ.ಬಿ.ಎನ್.ಉಮೇಶ್, ದ್ಯಾಮಪ್ಪ, ಶಬ್ಬೀರ್ ಅಲಿಖಾನ್, ಡಾ.ಎನ್.ಸಿ.ಪ್ರಶಾಂತ್, ಎಚ್.ತಿಪ್ಪೇಸ್ವಾಮಿ, ಎಸ್.ಆರ್.ಉಷಾ, ಡಾ.ಕೆ.ಟಿ.ನಾಗರಾಜ ನಾಯ್ಕ್, ಡಾ. ಟಿ. ಗಿರೀಶ, ಓ.ಬಾಬುಕುಮಾರ್, ಪ್ರೊ.ರವಿಕುಮಾರ ಪಾಟೀಲ, ಪ್ರೊ.ಲೋಕೇಶ್ ಎಂ.ಯು., ಡೀನ್‌ಗಳಾದ ಪ್ರೊ.ಕೆ.ವೆಂಕಟೇಶ್, ಪ್ರೊ.ಎಂ.ಗೋವಿAದಪ್ಪ, ಪ್ರೊ.ಕೆ.ಟಿ.ಶ್ರೀನಿವಾಸ್ ಉಪಸ್ಥಿತರಿದ್ದರು. ಪ್ರಸಾರಾಂಗ ನಿರ್ದೇಶಕ ಶಿವಕುಮಾರ ಕಣಸೋಗಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

