ಪ್ರಾಧ್ಯಾಪಕ ಪ್ರೊ.ಬಿ.ಸಿ.ಮೈಲಾರಪ್ಪ ಬಂಧನ

News Desk

ಚಂದ್ರವಳ್ಳಿ ನ್ಯೂ,ಸ್, ಬೆಂಗಳೂರು:
ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ನಿರ್ದೇಶಕ ಹಾಗೂ ಪ್ರಾಧ್ಯಾಪಕ ಪ್ರೊ. ಬಿ.ಸಿ.ಮೈಲಾರಪ್ಪ ಅವರು ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ ಆರೋಪದಡಿ ಅವರನ್ನು ಬಸವೇಶ್ವರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಹಿಳೆ(37)ಯೊಬ್ಬರು ನೀಡಿದ ದೂರು ಆಧರಿಸಿ ಮೈಲಾರಪ್ಪ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

2022ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ನಿರ್ದೇಶಕರಾಗಿದ್ದ ಪ್ರೊ ಬಿ.ಸಿ ಮೈಲಾರಪ್ಪ ನಡೆಸುತ್ತಿದ್ದ ಕರ್ನಾಟಕ ರಾಜ್ಯ ಹರಿಜನ ಸೇವಕ ಸಂಘದಲ್ಲಿ ದೂರುದಾರ ಮಹಿಳೆ ಕೆಲಸಕ್ಕೆ ಸೇರಿದ್ದರು.
ಆ ಮಹಿಳೆ 2 ವರ್ಷ ಕೆಲಸ ಮಾಡಿ 2024ರ ಮೇ ತಿಂಗಳಲ್ಲಿ ಕೆಲಸ ಬಿಟ್ಟಿದ್ದರು. ಆದರೆ 2024ರ ಅಂತ್ಯದಲ್ಲಿ ಮಹಿಳೆಯ ಪತಿ ಅಸಹಜವಾಗಿ ಸಾವನ್ನಪ್ಪಿದ್ದರು.

- Advertisement - 

ಆ ಸಂದರ್ಭದಲ್ಲಿ ಮಗನ ಸಾವಿಗೆ ನೀನೇ ಕಾರಣವೆಂದು ಆರೋಪಿಸಿ ಮಹಿಳೆಯ ಅತ್ತೆ, ಮಾವ ಅವರು ಮಹಾಲಕ್ಷ್ಮಿ ಲೇಔಟ್ ಠಾಣೆಗೆ ತೆರಳಿ ಪೊಲೀಸರಿಗೆ ದೂರು ನೀಡಿದ್ದರು.

ಆಗ ಆಕೆಯ ಪರ ನಿಂತಿದ್ದ ಮೈಲಾರಪ್ಪ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ದಾಖಲಾದ ಪ್ರಕರಣ ಮತ್ತು ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಆಕೆಯ ಪರ ವಾದಿಸಿ, ಸಾಕಷ್ಟು ಓಡಾಟ ನಡೆಸಿದ್ದರು.

- Advertisement - 

ಈ ನಡುವೆ ಮಹಿಳೆಯ ತಂದೆಯ ಆಸ್ತಿ ಹಂಚಿಕೆ ವಿಚಾರವಾಗಿ ಆಕೆಯ ಚಿಕ್ಕಪ್ಪನೊಂದಿಗೆ ಮನಸ್ತಾಪವುಂಟಾಗಿತ್ತು. ಆಗ ತನ್ನ ಸಹೋದರನ ಸಹಾಯದಿಂದ ವಕೀಲರೊಬ್ಬರ ಮೂಲಕ ನ್ಯಾಯಾಲಯದಲ್ಲಿ ಮಹಿಳೆ ಪ್ರಕರಣ ದಾಖಲಿಸಿದ್ದರು. ಅದೇ ವಿಚಾರವಾಗಿ ಆಗಾಗ ತಮ್ಮ ವಕೀಲರನ್ನು ಮಹಿಳೆ ಭೇಟಿ ಮಾಡುತ್ತಿದ್ದರು.

ಆದರೆ ಈ ವಿಷಯ ತಿಳಿದ ಮೈಲಾರಪ್ಪ ಅವರು ಮಾತನಾಡಬೇಕು ಬಾ ಎಂದು ರಾಜಾಜಿನಗರದ ಹೋಟೆಲ್‌ವೊಂದರ ಬಳಿ ಕರೆಸಿ ನಡುರಸ್ತೆಯಲ್ಲಿಯೇ ನಿಂದಿಸಿ, ಜುಟ್ಟನ್ನು ಹಿಡಿದು ಹಲ್ಲೆ ನಡೆಸಿದ್ದಾರೆ.

ಅಲ್ಲದೆ ಮನೆಯ ಬಳಿ ಬಂದು ಬಾಗಿಲು ತೆರೆಯುವಂತೆ ಒತ್ತಾಯಿಸುವುದು, ಕರೆ ಮಾಡಿ ಅಸಭ್ಯವಾಗಿ ಮಾತನಾಡುವುದು ಮಾಡುತ್ತಿದ್ದಾರೆ ಎಂದು ಸಂತ್ರಸ್ತೆ ಮಹಿಳೆ ಆರೋಪಿಸಿ ಬಸವೇಶ್ವರನಗರ ಠಾಣೆಗೆ ಮಹಿಳೆ ದೂರು ನೀಡಿ ಕಾನೂನು ಕ್ರಮ ಜರುಗಿಸಿ ಎಂದು ಒತ್ತಾಯಿಸಿದ್ದರು.

ಬಸವೇಶ್ವರ ನಗರ ಠಾಣೆಯಲ್ಲಿ ಮಹಿಳೆಯ ದೂರಿನ ಆಧಾರ ಮೇಲೆ ಪ್ರಕರಣ ದಾಖಲಾಗಿತ್ತು. ಸಂತ್ರಸ್ತ ಮಹಿಳೆಯ ಪರ ವಕೀಲರ ಸಂಬಂಧಿಕರ ಮನೆ ಬಳಿ ತೆರಳಿ ಗಲಾಟೆ ಮಾಡಿರುವ ಆರೋಪದಡಿ ಕಾಮಾಕ್ಷಿಪಾಳ್ಯ ಠಾಣೆಯಲ್ಲೂ ಒಂದು ಪ್ರಕರಣ ದಾಖಲಾಗಿತ್ತು. ಸದ್ಯ ಆರೋಪಿಯನ್ನ ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.

Share This Article
error: Content is protected !!
";