ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗಿರುವುದರಿಂದ ಕೆ.ಪಿ.ಸಿ.ಸಿ ಸೂಚನೆ ಮೇರೆಗೆ ಸರ್ಕಾರದ ನಡೆ ಕಾರ್ಯಕರ್ತರ ಕಡೆ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಕೆ.ಸಿ.ವೀರೇಂದ್ರಪಪ್ಪಿ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶನಿವಾರ ಮಧ್ಯಾಹ್ನ ೨-೩೦ ಕ್ಕೆ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕರುಗಳಾದ ಎನ್.ವೈ.ಗೋಪಾಲಕೃಷ್ಣ, ಟಿ.ರಘುಮೂರ್ತಿ, ಬಿ.ಜಿ.ಗೋವಿಂದಪ್ಪ, ಮಾಜಿ ಸಚಿವ ಹೆಚ್.ಆಂಜನೇಯ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಮುರಳೀಧರ ಹಾಲಪ್ಪ ಹಾಗೂ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಸರ್ಕಾರದ ಐದು ಗ್ಯಾರೆಂಟಿಗಳ ಬಗ್ಗೆ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡುವುದರ ಜೊತೆ ಸಣ್ಣಪುಟ್ಟ ಲೋಪಗಳಿದ್ದಲ್ಲಿ ಸರಿಪಡಿಸಿಕೊಳ್ಳಲಾಗುವುದೆಂದು ಹೇಳಿದರು.
ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಗಳು ಎದುರಾಗುವುದರಿಂದ ಕಾರ್ಯಕರ್ತರು ಸಂಘಟಿತರಾಗುವ ಕುರಿತು ಚರ್ಚಿಸಲಾಗುವುದು. ಹಾಲು, ಮೊಸರು, ಉಪ್ಪಿಗೂ ಕೇಂದ್ರ ಸರ್ಕಾರ ಜಿ.ಎಸ್.ಟಿ.ವಿಧಿಸಿದೆ. ಅಡುಗೆ ಅನಿಲ ಜಾಸ್ತಿಯಾಗಿದೆ.
ನೀರಿನ ಸಮಸ್ಯೆಯಾಗದಂತೆ ೧೪೬ ಹಳ್ಳಿಗಳಲ್ಲಿ ಪೈಪ್‌ಲೈನ್ ಅಳವಡಿಕೆಯಾಗಿದ್ದು, ಓವರ್ ಹೆಡ್ ಟ್ಯಾಂಕ್‌ಗಳನ್ನು ಕಟ್ಟಿಸಿ ಹಿರಿಯೂರಿನ ವಾಣಿವಿಲಾಸಸಾಗರದಿಂದ ನೀರು ಕೊಡುತ್ತೇವೆ. ಚಿತ್ರದುರ್ಗದಲ್ಲಿ ೨೩ ಮೀಟರ್‌ನಷ್ಟು ರಸ್ತೆ ಅಗಲೀಕರಣಗೊಳಿಸುವ ಕುರಿತು ನಗರಸಭೆ ಸಾಮಾನ್ಯ ಸಭೆಯಲ್ಲಿ ರೆಸಲೂಷನ್ ಆಗಿದೆ. ಈಗಾಗಲೆ ಎರಡು ಬಾರಿ ಡಿವೈಡರ್‌ಗಳನ್ನು ತೆರವುಗೊಳಿಸಿದ್ದು, ಮೂರನೆ ಹಂತದಲ್ಲಿಯೂ ಅವೈಜ್ಞಾನಿಕ ಡಿವೈಡರ್‌ಗಳನ್ನು ತೆಗೆಸಲಾಗುವುದೆಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗಿರುವುದರಿಂದ ಮೊಳಕಾಲ್ಮುರು, ಚಳ್ಳಕೆರೆ, ಹೊಸದುರ್ಗ, ಹಿರಿಯೂರಿನಲ್ಲಿ ಪಕ್ಷದ ನಡೆ ಕಾರ್ಯಕರ್ತರ ಕಡೆ ವಿಶೇಷ ಕಾರ್ಯಕ್ರಮಗಳಾಗಿದ್ದು, ಶನಿವಾರ ಬೆಳಿಗ್ಗೆ ಹೊಳಲ್ಕೆರೆ ಹಾಗೂ ಮಧ್ಯಾಹ್ನ ಚಿತ್ರದುರ್ಗದಲ್ಲಿ ಕಾರ್ಯಕ್ರಮ ನಡೆಯಲಿದೆ. ಸರ್ಕಾರದ ಯೋಜನೆಗಳು ಜನತೆಗೆ ಮುಟ್ಟಿದೆಯೋ ಇಲ್ಲವೋ ಎನ್ನುವ ಕುರಿತು ಚರ್ಚಿಸಲಾಗುವುದು. ಮುಂದೆ ನಡೆಯುವ ಎಲ್ಲಾ ಚುನಾವಣೆಗಳಲ್ಲಿಯೂ ಪಕ್ಷ ಗೆಲ್ಲಬೇಕಾಗಿರುವುದರಿಂದ ಕಾರ್ಯಕರ್ತರಲ್ಲಿ ಹುರುಪು ಮೂಡಿಸಲಾಗುವುದೆಂದರು.
ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಸಂಪತ್, ಡಿ.ಎನ್.ಮೈಲಾರಪ್ಪ, ಉಪಾಧ್ಯಕ್ಷರುಗಳಾದ ಡಿ.ಟಿ.ವೆಂಕಟೇಶ್, ಎಸ್.ಎನ್.ರವಿಕುಮಾರ್, ಜಿಲ್ಲಾ ಕಾಂಗ್ರೆಸ್ ಕಾನೂನು, ಮಾನವ ಹಕ್ಕು, ಮಾಹಿತಿ ಹಕ್ಕು ವಿಭಾಗದ ಅಧ್ಯಕ್ಷ ಸುದರ್ಶನ್, ಕೆ.ಡಿ.ಪಿ.ಸದಸ್ಯ ಕೆ.ಸಿ.ನಾಗರಾಜ್, ನಗರಸಭೆ ಮಾಜಿ ಅಧ್ಯಕ್ಷರುಗಳಾದ ಸಿ.ಟಿ.ಕೃಷ್ಣಮೂರ್ತಿ, ಹೆಚ್.ಮಂಜಪ್ಪ, ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ವರ್ಗ ವಿಭಾಗದ ಅಧ್ಯಕ್ಷ ಮಂಜುನಾಥ್, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಸೈಯದ್ ಖುದ್ದುಸ್, ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್.ಡಿ.ಕುಮಾರ್, ಜಿ.ವಿ.ಮಧುಗೌಡ, ಇಂದಿರಾ, ಸ್ವಾಮಿ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.