ಚಂದ್ರವಳ್ಳಿ ನ್ಯೂಸ್ ಹಿರಿಯೂರು :
ಆಸ್ತಿ ನಗರಸಭೆಗೆ ಸೇರಿದ್ದು ಆದರೆ ಬಾಡಿಗೆ ವಸೂಲಿ ಮಾಡುತ್ತಿರುವ ರೋಟರಿ ಸಂಸ್ಥೆಗೆ ಏನು ಹಕ್ಕಿದೆ, ದಾಖಲಾತಿಗಳನ್ನು ಒದಗಿಸಲಿ ಎಂದು ಬಿಸಿ ಬಿಸಿ ಚರ್ಚೆ ಆಯಿತು.
ನಗರದ ನೆಹರೂ ಮೈದಾನದ ವಿಸ್ತೀರ್ಣ 8 ಎಕರೆ 10 ಗುಂಟೆ ಇದೆ. ಇದರಲ್ಲಿ ರೋಟರಿ ಭವನ ಕೂಡ ಇದೆ. ಅಲ್ಲದೆ ರೋಟರಿ ಭವನದ ಜಾಗವು ನಗರಸಭೆಗೆ ಸೇರಿದ ಸ್ವತ್ತಾಗಿದೆ. ರೋಟರಿಯವರೇ ಇಷ್ಟು ದಿನ ಬಾಡಿಗೆ ವಸೂಲಿ ಮಾಡುತ್ತಿದ್ದು ನಗರಸಭೆ ಸ್ವತ್ತಿನ ಬಾಡಿಗೆ ವಸೂಲು ಮಾಡಲು ಅವರು ಯಾರು ಎಂದು ನಗರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಅಜಯ್ ಕುಮಾರ್ ತೀಕ್ಷ್ಣವಾಗಿ ಪ್ರಶ್ನಿಸಿ ಇದನ್ನ ನಗರಸಭೆ ವಶಕ್ಕೆ ಪಡೆಯಬೇಕು ಎಂದರು.
ನಗರದ ನಗರಸಭೆಯ ಕೌನ್ಸಿಲ್ ಸಭಾಂಗಣದಲ್ಲಿ ಶುಕ್ರವಾರ ಅಧ್ಯಕ್ಷ ಬಾಲಕೃಷ್ಣ ರವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಜಯ್ ಕುಮಾರ್ ಹೇಳಿದ ಮಾತಿಗೆ ಇತರೆ ಸದಸ್ಯರು ಧ್ವನಿಗೂಡಿಸಿ ನಗರಸಭೆ ಆಸ್ತಿ ವಶಕ್ಕೆ ಪಡೆಯಬೇಕು ಎಂದರು.
ಕೂಡಲೇ ರೋಟರಿ ಕಟ್ಟಡಗಳನ್ನು ನಗರಸಭೆ ಸುಪರ್ದಿಗೆ ಪಡೆಯಬೇಕು. ನಗರಸಭೆಯಿಂದಲೇ ಅನುಮತಿ ಪಡೆದು ಕಾರ್ಯಕ್ರಮಗಳನ್ನು ನಡೆಸಬೇಕು. ಈ ಬಗ್ಗೆ ರೋಟರಿಯವರ ದಾಖಲಾತಿಗಳನ್ನು ತರಿಸಿಕೊಂಡು ಪರಿಶೀಲಿಸಿ ಆದಷ್ಟು ಬೇಗ ರೋಟರಿ ಕಟ್ಟಡವನ್ನು ನಗರಸಭೆಗೆ ಪಡೆಯಬೇಕು. ಜೊತೆಗೆ ನನ್ನ ವಾರ್ಡ್ ನಲ್ಲಿ ಬೀದಿ ದೀಪಗಳ ಸಮಸ್ಯೆ ಇದ್ದು ವಿದ್ಯುತ್ ದೀಪಗಳ ನಿರ್ವಹಣೆಯ ಗುತ್ತಿಗೆ ಬಗ್ಗೆ ಮಾಹಿತಿ ಕೇಳಿದರೆ ಎಇಇ ಅವರು ಕಾಂಗ್ರೆಸ್ ನವರು ಮಾಡುತ್ತಿದ್ದಾರೆ ಎಂದು ಹೇಳುತ್ತಾರೆ. ನಗರಸಭೆಯನ್ನು ಕಾಂಗ್ರೆಸ್ ಆಫೀಸ್ ನಡೆಸುತ್ತಿದೆಯಾ ಎಂದು ಎಇಇ ವಿರುದ್ಧ ಅಜ್ಜಪ್ಪ ಕಿಡಿಕಾರಿದರು.
ನಗರಸಭೆ ಸದಸ್ಯ ಜಿಎಸ್ ತಿಪ್ಪೇಸ್ವಾಮಿ ಮಾತನಾಡಿ ಬೀದಿ ದೀಪ ಕಾಮಗಾರಿ ಗುತ್ತಿಗೆ ಪಡೆದಿರುವ ಗುತ್ತಿಗೆದಾರ ನಾಗರಾಜ್ ಮೇಲೆ ವ್ಯಾಪಕ ದೂರುಗಳಿವೆ. ಆದರೂ ಸಹ ಬಿಲ್ ಪಾವತಿಗೆ ಸಭೆಗೆ ವಿಷಯ ತರುತ್ತೀರಾ ಎಂದರೆ ಹೇಗೆ ಹೇಳಿ. ಬೀದಿ ದೀಪವನ್ನೇ ಹಾಕಿಲ್ಲ ಅವನಿಗೆ ಹೇಗೆ ಬಿಲ್ ಪಾವತಿ ಮಾಡುತ್ತೀರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಮತ್ತೊಬ್ಬ ಸದಸ್ಯೆ ಶಿವರಂಜನಿ ಅವರ ಮಾತಿಗೆ ಧ್ವನಿಗೂಡಿಸಿ ತಿಂಗಳುಗಳು ಕಳೆದರೂ ಬೀದಿ ದೀಪಗಳಿಲ್ಲ. ಜನರಿಗೆ ನಾವು ಏನು ಉತ್ತರ ಕೊಡಬೇಕು. ಹೇಗೆ ಮುಖ ತೋರಿಸಬೇಕು, ಯಾವುದೇ ಕಾರಣಕ್ಕೂ ಬಿಲ್ ಪಾವತಿ ಮಾಡಬೇಡಿ ಎಂದು ಹಟ ಹಿಡಿದರು.
ಸದಸ್ಯರ ಬೀದಿದೀಪದ ಸಮಸ್ಯೆಗೆ ಉತ್ತರಿಸಿದ ಅಧ್ಯಕ್ಷ ವೆಂಕಟೇಶ್ ಹಾಗೂ ಪೌರಾಯುಕ್ತ ವಾಸೀಂ ಅವರು ವಿದ್ಯುತ್ ಕಾಮಗಾರಿಗೆ ಸಂಬಂಧಪಟ್ಟಂತೆ 3 ಪ್ಯಾಕೇಜ್ ಮಾಡಿದ್ದು ಇನ್ನು ಮುಂದೆ ನಗರದಲ್ಲಿ ಬೀದಿ ದೀಪದ ಸಮಸ್ಯೆ ಇರುವುದಿಲ್ಲ. ಹಾಗೆಯೇ ಗುತ್ತಿಗೆದಾರರ ಬಿಲ್ ಬಗ್ಗೆ ಮತ್ತೊಮ್ಮೆ ಪರಿಶೀಲನೆ ನಡೆಸಲಾಗುವುದು ಎಂದರು.
ಹಿರಿಯ ಸದಸ್ಯ ಈ ಮಂಜುನಾಥ್ ಮಾತನಾಡಿ ಸಾರ್ವಜನಿಕರ ಕೆಲಸಗಳಲ್ಲಿ ರಾಜಿ ಆಗಬೇಡಿ. ಯಾವುದೇ ಪಕ್ಷದವರ ಮುಲಾಜಿಗೂ ಒಳಗಾಗಬೇಡಿ ಎಂದು ತಾಂತ್ರಿಕ ಶಾಖೆಗೆ ಕಿವಿಮಾತು ಹೇಳಿದರು.
ನಗರದ ಜನಸಂಖ್ಯೆ ಹೆಚ್ಚುತ್ತಿದ್ದು ನಗರ ವಿಸ್ತರಣೆಯಾಗುತ್ತಿದೆ. ಇಲ್ಲಿಯವರೆಗೆ ಎಷ್ಟು ಸರ್ವೆ ನಂಬರ್ ನಗರ ವ್ಯಾಪ್ತಿಗೆ ಬರುತ್ತವೆ ಎಂದು ಸದಸ್ಯರಾದ ಬಿಎನ್. ಪ್ರಕಾಶ್, ಜಿಎಸ್ ತಿಪ್ಪೇಸ್ವಾಮಿ, ಈ ಮಂಜುನಾಥ್, ಮಹೇಶ್ ಪಲ್ಲವ, ಶಂಷುನ್ನಿಸಾ ಸೇರಿದಂತೆ
ಹಲವು ಸದಸ್ಯರು ಪ್ರಶ್ನಿಸಿದರು. ಸದಸ್ಯರ ಮಾತಿಗೆ ಇಂಜಿನಿಯರ್ ಮಂಜುನಾಥ್ ಉತ್ತರಿಸಿ ನಗರ ಹೆಚ್ಚುವರಿಯ ದಾಖಲಾತಿಯನ್ನು ತಯಾರು ಮಾಡಲಾಗುತ್ತಿದೆ ಎಂದರು. ಸದಸ್ಯ ಚಿತ್ರಜಿತ್ ಯಾದವ್ ಮಾತನಾಡಿ ಈಗಾಗಲೇ ಕೆಲವು ಸರ್ವೆ ನಂಬರ್ ನಗರಸಭೆ ವ್ಯಾಪ್ತಿಗೆ ಬಂದಿದ್ದು ಕಂದಾಯವನ್ನು ಬಬ್ಬೂರು ಗ್ರಾಮ ಪಂಚಾಯ್ತಿಗೆ ಕಟ್ಟಲಾಗುತ್ತಿದೆ. ಈ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಿ ಎಂದರು .
ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳನ್ನು ನಿಲ್ಲಿಸಿ ಇಂಜೆಕ್ಷನ್ ಕೊಡಲಾಗುವ ಜೊತೆಗೆ ರಾತ್ರಿ ವೇಳೆ ಡ್ಯೂಟಿ ಡಾಕ್ಟರ್ ಗಳು ಕರ್ತವ್ಯದ ಕೊಠಡಿಯಲ್ಲಿ ಇರುವುದಿಲ್ಲ. ಚಿಕ್ಕ ಮಕ್ಕಳಿಗೆ ತುರ್ತು ರಕ್ತ ಹಾಕದೇ ಚಿತ್ರದುರ್ಗಕ್ಕೆ ಕಳಿಸುತ್ತಾರೆ ಎಂದು ನಗರಸಭೆ ನಾಮ ನಿರ್ದೇಶಿತ ಸದಸ್ಯ ಅಜೀಂ ಪಾಷಾ ಆರೋಪಿಸಿದರು.
ಅವರ ಆರೋಪಕ್ಕೆ ಉತ್ತರಿಸಿದ ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ವಿಜಯ ಕುಮಾರ್ ನಾನು ಈ ಹಿಂದೆ ಇದೇ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಕಟ್ಟಡ ಸೋರದಂತೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ಈಗ ಸೋಲಾರ್ ಅಳವಡಿಸಿ ರುವುದರಿಂದ ಬಿಲ್ಡಿಂಗ್ ಸೋರುತ್ತಿದೆ. ರೋಗಿಗಳಿಗೆ ಮಲಗಿಸಿ ಇಂಜೆಕ್ಷನ್ ಕೊಡಲು ಸೂಚಿಸಲಾಗುವುದು. ಐಸಿಯು ನಲ್ಲಿ ಅಡ್ಮಿಟ್ ಮಾಡಲ್ಲ ಎಂಬ ಆರೋಪ ಮಾಡಲಾಗುತ್ತಿದೆ. ಆದರೆ ಅಲ್ಲಿ ಎಲೆಕ್ಟ್ರಿಕಲ್ ಪ್ರಾಬ್ಲಮ್ ಇದೆ. ಸ್ವಲ್ಪ ಹೆಚ್ಚು ಕಡಿಮೆ ಆದರೂ ಜೀವ ಹೋಗುವ ಅಪಾಯವಿದೆ. ಹೊಸ ಆಸ್ಪತ್ರೆಯಲ್ಲಿ ಹೆರಿಗೆ ಸೌಲಭ್ಯ ಇಲ್ಲ. ಚಿತ್ರದುರ್ಗದಲ್ಲಿ ವೈದ್ಯರ ಸಂಖ್ಯೆ ಹೆಚ್ಚಿದೆ ಎಂದು ಕಳಿಸಲಾಗುತ್ತದೆ ಎಂದರು.
ನಗರಸಭೆ ವ್ಯಾಪ್ತಿಯ ಬೀಡಾಡಿ ನಾಯಿಗಳಿಗೆ ಎಬಿಸಿ ನಿಯಮಗಳನ್ವಯ ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆಯನ್ನು ನಡೆಸಲು ಈಗಾಗಲೇ ಹಲವಾರು ಬಾರಿ ಚರ್ಚಿಸಲಾಗಿದ್ದು ಆದಷ್ಟು ಬೇಗ ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು. ಹಲವು ಸಾರ್ವಜನಿಕರಿಗೆ ಸೇರಿದಂತೆ ಚಿಕ್ಕ ಚಿಕ್ಕ ಮಕ್ಕಳಿಗೂ ನಾಯಿಗಳು ಕಚ್ಚುತ್ತಿದ್ದು ಬೀಡಾಡಿ ನಾಯಿಗಳ ನಿಯಂತ್ರಣಕ್ಕೆ ಕ್ರಮವಹಿಸಿ ಎಂದು ಹಲವು ಸದಸ್ಯರು ಒತ್ತಾಯಿಸಿದರು.
ಸದಸ್ಯರ ಮಾತಿಗೆ ಉತ್ತರಿಸಿದ ಪೌರಾಯುಕ್ತ ಎ.ವಾಸೀಂ ಅವರು ನಾಯಿಗಳ ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆ ಬಗ್ಗೆ ಮೂರು ಬಾರಿ ಟೆಂಡರ್ ಕರೆಯಲಾಗಿತ್ತು. ಯಾರೂ ಟೆಂಡರ್ ನಲ್ಲಿ ಭಾಗಿಯಾಗಿರಲಿಲ್ಲ. ಈಗ ಮತ್ತೆ ಟೆಂಡರ್ ಕರೆಯಲಾಗಿದೆ. ಬಜೆಟ್ ನಲ್ಲಿ 15 ಲಕ್ಷ ಹಣ ಇದೆ. ಶೀಘ್ರ ನಾಯಿಗಳ ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆಯ ಮೂಲಕ ನಾಯಿಗಳ ಹಾವಳಿಗೆ ಕಡಿವಾಣ ಹಾಕಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಬಾಲಕೃಷ್ಣ, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಎಂಡಿ ಸಣ್ಣಪ್ಪ, ಮಮತಾ, ವಿಠ್ಠಲ್ ಪಾಂಡುರಂಗ, ರತ್ನಮ್ಮ, ಸದಸ್ಯರಾದ ಬಿಎನ್ ಪ್ರಕಾಶ್, ಜಿ ಎಸ್ ತಿಪ್ಪೇಸ್ವಾಮಿ, ಈ ಮಂಜುನಾಥ್, ಈರಲಿಂಗೇ ಗೌಡ,ಜಗದೀಶ್, ಅಂಬಿಕಾ ಆರಾಧ್ಯ, ಮೊದಲ ಮರಿಯಾ, ಕವಿತಾ ಲೋಕೇಶ್, ಶಂಷುನ್ನೀಸಾ, ಅನಿಲ್ ಕುಮಾರ್,ಸಮೀವುಲ್ಲ, ವೈಪಿಡಿ ದಾದಾಪೀರ್,ಗುಂಡೇಶ್ ಕುಮಾರ್,ಬೆಸ್ಕಾo ಎಇಇ ಪೀರ್ ಸಾಬ್, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ವಿಜಯ್ ಕುಮಾರ್, ನಾಮ ನಿರ್ದೇಶಿತ ಸದಸ್ಯರಾದ ಗಿರೀಶ್, ಶಿವಕುಮಾರ್, ಶಿವಣ್ಣ, ಅಜಿಂ ಪಾಷ ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದರು.

