ಚಿಕ್ಕಜಾಜೂರು-ಚಿತ್ರದುರ್ಗ-ಚಳ್ಳಕೆರೆ-ಬಳ್ಳಾರಿ ರೈಲ್ವೆ ಡಬ್ಲಿಂಗ್ ಯೋಜನೆಗೆ ಪ್ರಸ್ತಾವನೆ:

News Desk

ಚಿಕ್ಕಜಾಜೂರು-ಚಿತ್ರದುರ್ಗ-ಚಳ್ಳಕೆರೆ-ಬಳ್ಳಾರಿ ರೈಲ್ವೆ ಡಬ್ಲಿಂಗ್ ಯೋಜನೆಗೆ ಪ್ರಸ್ತಾವನೆ: ಸಂಸದ ಕಾರಜೋಳ
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರೂ. ೩,೩೪೧ ಕೋಟಿ ವೆಚ್ಚದಲ್ಲಿ ಚಿಕ್ಕಜಾಜೂರು-ಚಿತ್ರದುರ್ಗ-ಚಳ್ಳಕೆರೆ-ಬಳ್ಳಾರಿವರೆಗಿನ ೧೮೫ ಕಿ.ಮೀಟರ್ ಉದ್ದದ ರೈಲ್ವೆ ಮಾರ್ಗವನ್ನು ದ್ವಿಪಥ ರೈಲ್ವೆ ಮಾರ್ಗವನ್ನಾಗಿ (ಡಬ್ಲಿಂಗ್) ನಿರ್ಮಾಣ ಮಾಡಲು ರೈಲ್ವೆ ಮಂಡಳಿಗೆ ಸಲ್ಲಿಸಿರುವ ಪ್ರಸ್ತಾವನೆಗೆ ರೈಲ್ವೆ ಸಚಿವರಿಂದ ಅನುಮೋದನೆ ಕೊಡಿಸಲಾಗುವುದು ಎಂದು ಇಂದು ಬೆಂಗಳೂರಿನ ನೈರುತ್ಯ ರೈಲ್ವೆ ವಲಯದ ಮುಖ್ಯ ಆಡಳಿತಾಧಿಕಾರಿ ಹಾಗೂ ಇತರೆ ರೈಲ್ವೆ ಅಧಿಕಾರಿಗಳೊಂದಿಗೆ ಸಂಸದ ಗೋವಿಂದ ಕಾರಜೋಳರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಸದರು ಅಧಿಕಾರಿಗಳಿಗೆ ತಿಳಿಸಿದರು. ಸದರಿ ಮಾರ್ಗದಲ್ಲಿ ೧೭೪ ಹೆಕ್ಟೇರ್ ಭೂಸ್ವಾಧೀನದ ಅವಶ್ಯಕತೆಯಿದ್ದು, ಚಿತ್ರದುರ್ಗ ಲೋಸಕಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚಿತ್ರದುರ್ಗ ತಾಲ್ಲೂಕು, ಅಮೃತಾಪುರ ರೈಲ್ವೆ ನಿಲ್ದಾಣ ಹೊಸ ರೈಲ್ವೆ ನಿಲ್ದಾಣವಾಗಿ ನಿರ್ಮಾಣವಾಗಲಿದೆ. ಈ ಮಾರ್ಗದಲ್ಲಿ ೨೯ ಪ್ರಮುಖ ಸೇತುವೆಗಳು ೨೩೦ ಸಣ್ಣ ಸೇತುವೆಗಳು ೧೨ ಲೆವೆಲ್ ಕ್ರಾಸಿಂಗ್‌ಗಳು ನಿರ್ಮಾಣವಾಗಲಿವೆ. ಈ ಯೋಜನೆಯನ್ನು ೪ ವರ್ಷಗಳಲ್ಲಿ ಪೂರ್ಣಗೊಳಿಸುವ ಉದ್ದೇಶವನ್ನು ರೈಲ್ವೆ ಇಲಾಖೆ ಹೊಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ದಾವಣಗೆರೆ-ಚಿತ್ರದುರ್ಗ-ತುಮಕೂರು ಹೊಸ ರೈಲು ಮಾರ್ಗದಲ್ಲಿ ಭರಮಸಾಗರದಿಂದ ಚಿತ್ರದುರ್ಗದವರೆಗಿನ ೨೯ ಕಿ.ಮೀಟರ್ ರೈಲ್ವೆ ಮಾರ್ಗ ನಿರ್ಮಾಣಕ್ಕಾಗಿ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರ ಕಾಮಗಾರಿಯನ್ನ ಪ್ರಾರಂಭಿಸಲಾಗುವುದು ಎಂದು ಮುಖ್ಯ ಆಡಳಿತಾಧಿಕಾರಿ ಅಜಯ್ ಶರ್ಮ ಸಂಸದರಿಗೆ ಮಾಹಿತಿ ನೀಡಿದರು.
ಈ ಮಾರ್ಗದಲ್ಲಿ ಭೂಸ್ವಾಧಿನ ಪಡಿಸಿಕೊಂಡಿರುವ ಜಾಗದಲ್ಲಿ ಅಡಿಕೆ ಹಾಗೂ ಮೆಕ್ಕೆಜೋಳದ ಬೆಳೆಗಳು ಕಟಾವಿಗೆ ಬಂದಿದ್ದು, ಆ ಬೆಳಗಳನ್ನು ರೈತರು ತೆಗೆದುಕೊಂಡ ಮೇಲೆ, ಅಂತಹ ಕಡೆ ಕಾಮಗಾರಿಯನ್ನ ಪ್ರಾರಂಭಿಸುವಂತೆ ಸಂಸದರು ಅಧಿಕಾರಿಗಳಿಗೆ ಸೂಚಿಸಿದರು. ಈ ಭಾಗದಲ್ಲಿ ಇನ್ನೂ ಶೇ. ೧೦% ರಷ್ಟು ಭೂಸ್ವಾಧಿನವಾಗಬೇಕಾಗಿದ್ದು, ತ್ವರಿತಗತಿಯಲ್ಲಿ ಭೂಮಿಯನ್ನು ಪಡೆಯುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಚಿತ್ರದುರ್ಗದಿಂದ ಹಿರಿಯೂರುವರೆಗಿನ ೪೫ ಕಿ.ಮೀಟರ್ ಉದ್ದದ ಮಾರ್ಗದಲ್ಲಿ ಶೇ. ೭೮ರಷ್ಟು ಭೂಸ್ವಾಧೀನವಾಗಿದ್ದು, ಶೇ. ೯೦% ರಷ್ಟು ಭೂಸ್ವಾಧೀನವಾದ ನಂತರ ಟೆಂಡರ್ ಕರೆಯಲಾಗುವುದು ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಪಾವಗಡ-ಮಡಕಶಿರಾ ೨೨ ಕಿ.ಮೀಟರ್ ಉದ್ದದ ಹೊಸ ರೈಲು ಮಾರ್ಗಕ್ಕಾಗಿ ಟೆಂಡರ್ ಕರೆಯಲಾಗಿದ್ದು, ಇದೇ ತಿಂಗಳ ೧೧ ರಂದು ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ಚಿತ್ರದುರ್ಗ ನಗರದ ಗೋನೂರು, ಹಿರೇಗುಂಟನೂರು, ಸಿದ್ದಾಪುರ, ಬೆಟ್ಟದ ನಾಗೇನಹಳ್ಳಿ, ಕುರುಬರಹಳ್ಳಿ ಹಾಗೂ ಚಳ್ಳಕೆರೆ ತಾಲ್ಲೂಕಿನ ನಗರಂಗೆರೆ ಮತ್ತು ಸೋಮಗುದ್ದು ಬಳಿ ನಿರ್ಮಾಣವಾಗಿರುವ ಕೆಳಸೇತುವೆಗಳು ಅವೈಜ್ಞಾನಿಕವಾಗಿದ್ದು, ಮಳೆಗಾಲದಲ್ಲಿ ಸೇತುವೆ ಕೆಳಗೆ ನೀರು ತುಂಬಿ ವಾಹಗಳು ಸಂಚರಿಸುವುದೇ ದುಸ್ಥರವಾಗಿದೆ. ಇವುಗಳನ್ನು ಶೀಘ್ರವೇ ಸರಿಪಡಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಚಿತ್ರದುರ್ಗ ನಗರದಲ್ಲಿ ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ನಿರ್ಮಾಣವಾಗುತ್ತಿರುವ ಹೊಸ ರೈಲ್ವೆ ನಿಲ್ದಾಣಕ್ಕೆ ಫೆಬ್ರವರಿ ತಿಂಗಳಲ್ಲಿ ಶಂಕುಸ್ಥಾಪನೆಯಾಗಿದ್ದರೂ ಕೂಡ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಇದಕ್ಕೆ ಕಾರಣವೇನೆಂದು ಸಂಸದರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಕೆಲವು ತಾಂತ್ರಿಕ ಅಡಚಣೆಗಳಿಂದ ಕಾಮಗಾರಿ ವಿಳಂಬವಾಗಿದ್ದು, ಮೇ ೨೦೨೫ಕ್ಕೆ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು. ಚಿತ್ರದುರ್ಗ ನಗರದ ರೈಲ್ವೆ ನಿಲ್ದಾಣಕ್ಕೆ ಪ್ರವೇಶ ಕಲ್ಪಿಸುವ ಸುಮಾರು ೩೦೦ ಮೀಟರ್ ಉದ್ದದ ರಸ್ತೆಯನ್ನ ಸಿಮೆಂಟ್ ಕಾಂಕ್ರೀಟ್ ರಸ್ತೆಯನ್ನಾಗಿ ಮಾಡಲು ಕ್ರಮಕೈಗೊಳ್ಳುವಂತೆ ಸೂಚಿಸಿದರು.

ಚಳ್ಳಕೆರೆಯಲ್ಲಿ ಈ ಮೊದಲು ಕಾರ್ಯನಿರ್ವಹಿಸುತ್ತಿದ್ದ ರಿಸರ್ವೇಷನ್ ಕೌಂಟರನ್ನು ಯಾವ ಕಾರಣದಿಂದ ಮುಚ್ಚಲಾಗಿದೆ ಎಂದು ಸಂಸದರು ಪ್ರಶ್ನಿಸಿದರು. ಪ್ರಯಾಣಿಕರಿಗೆ ಸಾಕಷ್ಟು ಅನಾನುಕೂಲ ಉಂಟಾಗುತ್ತಿದ್ದು, ಶೀಘ್ರವಾಗಿ ರಿಸರ್ವೇಷನ್ ಕೌಂಟರ್ ತೆರೆಯುವಂತೆ ಸೂಚಿಸಿದರು.

ಪ್ರಯಾಣಿಕರ ಅನುಕೂಲಕ್ಕಾಗಿ ಹೊಳಲ್ಕೆರೆ, ರಾಮಗಿರಿ, ಚಳ್ಳಕೆರೆ ಹಾಗೂ ಮೊಳಕಾಲ್ಮೂರು ಮತ್ತು ಅಮೃತಾಪುರ ರೈಲ್ವೆ ನಿಲ್ದಾಣಗಳಲ್ಲಿ ಪ್ರಮುಖ ರೈಲುಗಳಿಗೆ ನಿಲುಗಡೆ ಒದಗಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ಈ ಬಗ್ಗೆ ಸರ್ವೆ ಕಾರ್ಯ ನಡೆಸಿ, ಕೂಲಂಕುಷವಾಗಿ ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಗುಂತಕಲ್ಲು – ಚಿಕ್ಕಜಾಜೂರುವರೆಗೆ ಸಂಚರಿಸುವ ರೈಲನ್ನು ಹುಬ್ಬಳ್ಳಿಯವರೆಗೆ ಹಾಗೂ ಹುಬ್ಬಳ್ಳಿಯಿಂದ ಚಿಕ್ಕಜಾಜೂರುವರೆಗೆ ಸಂಚರಿಸುವ ರೈಲನ್ನು ಚಿತ್ರದುರ್ಗದವರೆಗೆ ವಿಸ್ತರಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಯಿತು.

ಈಗಾಗಲೇ ರೈಲ್ವೆ ಇಲಾಖೆ ಮೋದೀಜಿಯವರ ನೇತೃತ್ವದಲ್ಲಿ ಪ್ರಯಾಣಿಕ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಪ್ರಯಾಣಿಕರ ಬಳಿ ತೆಗೆದುಕೊಂಡು ಹೋಗುವುದು ಅಧಿಕಾರಿಗಳಾದ ತಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಹೆಚ್ಚು ಕಾಳಜಿವಹಿಸಿ, ಪ್ರಯಾಣಿಕರಿಗೆ ಅನುಕೂಲವಾಗುವಂತೆ ಕೆಲಸಗಳನ್ನ ಅತ್ಯಂತ ಕಾಳಜಿಯಿಂದ ನಿರ್ವಹಿಸಿ ಎಂದು ಇದೇ ಸಂದರ್ಭದಲ್ಲಿ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ಸಭೆಯಲ್ಲಿ ನೈರುತ್ಯ ರೈಲ್ವೆ ವಲಯದ ಮುಖ್ಯ ಆಡಳಿತಾಧಿಕಾರಿ (ಕಟ್ಟಡ) ಅಜಯ್ ಶರ್ಮ, ಮೈಸೂರು ವಿಭಾಗದ ಸಹಾಯಕ ರೈಲ್ವೆ ವಿಭಾಗೀಯ ಅಧಿಕಾರಿ ವಿಜಯ, ಮುಖ್ಯ ಇಂಜಿನಿಯರ್ (ಕಟ್ಟಡ) ಪರದೀಪ್ ಪುರಿ, ಮುಖ್ಯ ಇಂಜಿನಿಯರ್ (ಸರ್ವೆ) ವೆಂಕಟೇಶ್ವರಲು, ಮುಖ್ಯ ಇಂಜಿನಿಯರ್ ರೋಹನ್ ಡೋಂಗ್ರೆ, ಡೆಪ್ಯುಟಿ ಚೀಫ್ ಇಂಜಿನಿಯರ್ ರಜತ್ ಸೇರಿದಂತೆ ಹಲವು ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

- Advertisement -  - Advertisement - 
Share This Article
error: Content is protected !!
";