ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ 16 ಕೆರೆಗಳು ಹಾಗೂ ಗಾಯತ್ರಿ ಜಲಾಶಯಕ್ಕೆ ಕುಡಿಯುವ ನೀರು ತುಂಬಿಸುವ ಯೋಜನೆಗಾಗಿ ಹೆಚ್ಚುವರಿಯಾಗಿ 0.107 ಟಿ.ಎಂ.ಸಿ ನೀರನ್ನು ಮರು ಹಂಚಿಕೆ ಮಾಡಿ, ತಕ್ಷಣ ಅನುದಾನ ಬಿಡುಗಡೆ ಮಾಡುವಂತೆ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಸಚಿವ ಎನ್.ಎಸ್..ಭೋಸರಾಜು ಅವರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಬೆಂಗಳೂರಿನ ವಿಕಾಸಸೌಧದಲ್ಲಿ ಮಂಗಳವಾರ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಸಚಿವರಾದ ಎನ್.ಎಸ್.ಭೋಸರಾಜು ಅವರನ್ನು ಭೇಟಿ ಮಾಡಿ, ಪ್ರಸ್ತಾವನೆ ಸಲ್ಲಿಸಿದರು.
ಜವನಗೊಂಡನಹಳ್ಳಿ ಹೋಬಳಿಯ ಉಡುವಳ್ಳಿ ಕೆರೆ, ಗೌಡನಹಳ್ಳಿ, ಗಾಂಧಿನಗರ ಚಿಕ್ಕಕೆರೆ, ಗಾಂಧಿನಗರ ಕೆರೆ, ಬಗ್ಗನಡು ಕೆರೆ, ವಡನಹಳ್ಳಿ, ಮಾವಿನಮಡು, ದಿಂಡಾವರ, ಮಾಳಗೊಂಡನಹಳ್ಳಿ, ವೀರವ್ವನಾಗತೀಹಳ್ಳಿ, ಪಿಲಾಲಿ, ಜನವಗೊಂಡನಹಳ್ಳಿ, ಕಾಟನಾಯಕನಹಳ್ಳಿ ಕೆರೆ, ಅರಶಿಣಗುಂಡಿ ಕೆರೆ ಹಾಗೂ ಉಳಿವಿನಹಾಳ್, ಯಲ್ಲದಕೆರೆ ಸೇರಿದಂತೆ ಒಟ್ಟು 16 ಕೆರೆಗಳನ್ನು ತುಂಬಿಸಲು ಹಾಗೂ ಗಾಯತ್ರಿ ಜಲಾಶಯವನ್ನು ಕುಡಿಯುವ ನೀರಿಗಾಗಿ ತುಂಬಿಸಲು ಈ ಹಿಂದೆ 0.20 ಟಿ.ಎಂ.ಸಿ ನೀರನ್ನು ಹಂಚಿಕೆ ಮಾಡಲಾಗಿತ್ತು. ಆದರೆ, ಈಗಿರುವ ಜಲಸಂಕಷ್ಟದ ಹಿನ್ನೆಲೆಯಲ್ಲಿ ಈ ಪ್ರಮಾಣವನ್ನು ಹೆಚ್ಚಿಸಿ, ಒಟ್ಟು 0.307 ಟಿ.ಎಂ.ಸಿ (ಹೆಚ್ಚುವರಿ 0.107 ಟಿ.ಎಂ.ಸಿ ಸೇರಿ) ನೀರನ್ನು ಮರು ಹಂಚಿಕೆ ಮಾಡಿ ಆದೇಶ ಹೊರಡಿಸುವಂತೆ ಪತ್ರದಲ್ಲಿ ತಿಳಿಸಿದ್ದಾರೆ.
ಹಿರಿಯೂರು ತಾಲ್ಲೂಕಿನಲ್ಲಿಯೇ ಅತ್ಯಂತ ಹಿಂದುಳಿದ ಮತ್ತು ಬರಪೀಡಿತ ಜವನಗೊಂಡನಹಳ್ಳಿ ಹೋಬಳಿಯ 06 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಸುಮಾರು 100ಕ್ಕೂ ಹೆಚ್ಚು ಜನವಸತಿ ಪ್ರದೇಶಗಳಲ್ಲಿ ಈಗಾಗಲೇ ಮಳೆಯ ಅಭಾವದಿಂದಾಗಿ ಅಂತರ್ಜಲ ಮಟ್ಟ ಸಂಪೂರ್ಣ ಕುಸಿದಿದೆ. ಬರಗಾಲದ ಛಾಯೆ ಆವರಿಸಿರುವುದರಿಂದ ಬೇಸಿಗೆಯ ಅವಧಿಯಲ್ಲಿ ಟ್ಯಾಂಕರ್‍ಗಳ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲು ತಾಲ್ಲೂಕು ಆಡಳಿತದಿಂದ ಈಗಾಗಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಯೋಜಿಸಲಾಗಿರುತ್ತದೆ. ಈ ಭಾಗದ ಕುಡಿಯುವ ನೀರು ಮತ್ತು ಅಂತರ್ಜಲ ವೃದ್ಧಿಪಡಿಸುವ ಸಮಸ್ಯೆ ತುರ್ತಾಗಿ ಬಗೆಹರಿಸುವ ಅನಿವಾರ್ಯತೆ ಇದೆ. ಈ ಹಿನ್ನಲೆಯಲ್ಲಿ ಶಾಶ್ವತ ಪರಿಹಾರಕ್ಕಾಗಿ ಕೆರೆಗಳನ್ನು ತುಂಬಿಸುವುದು ಅತ್ಯಗತ್ಯವಾಗಿದೆ ಎಂದು ಮನವಿ ಮಾಡಿದ್ದಾರೆ.
ಕುಡಿಯುವ ನೀರು ತುಂಬಿಸುವ ಯೋಜನೆಯನ್ನು ಕಾಲಮಿತಿಯಲ್ಲಿ ಜಾರಿಗೊಳಿಸಲು ತಕ್ಷಣವೇ ಪರಿಷ್ಕøತ ಯೋಜನಾ ವರದಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಬೇಕು. ಅಲ್ಲದೆ, ಪ್ರಸಕ್ತ ಸಾಲಿನಲ್ಲಿಯೇ ಅನುದಾನ ನಿಗಧಿಗೊಳಿಸಿ, ಅನುಮೋದನೆ ನೀಡಬೇಕು ಎಂದು ಸಚಿವರು ಕೋರಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರ ಪತ್ರಕ್ಕೆ ಅನುಗಣವಾಗಿ ಡಿಪಿಆರ್ ತಯಾರಿಸಲು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಸಚಿವ ಎನ್.ಎಸ್.ಭೋಸರಾಜು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕಾಂಗ್ರೆಸ್ ಹಿರಿಯ ಮುಖಂಡ ಅಮೃತೇಶ್ವರಸ್ವಾಮಿ ಜೊತೆಗಿದ್ದರು.

