ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಾಗನಾಯಕನ ಹಟ್ಟಿ ಹಿರಿಯೂರು ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ದಿನಾಚರಣೆ ಮಾಡಿ ರಾಷ್ಟ್ರೀಯ ಕಾರ್ಯಕ್ರಮಗಳು, ಕುಟುಂಬ ಯೋಜನೆಗಳು ಹಾಗೂ ಹೆಚ್ಚುತ್ತಿರುವ ಬಾಲ್ಯ ವಿವಾಹ ಬಗ್ಗೆ ತಾಯಂದಿರಿಗೆ ಅರಿವು ಮೂಡಿಸಲಾಯಿತು.
ಜಿಲ್ಲಾ ಪೌಷ್ಟಿಕ ಅಧಿಕಾರಿ ಸಣ್ಣ ರಂಗಮ್ಮ ಮಾತನಾಡಿ ಮಕ್ಕಳಿಗೆ ಕಾಲ ಕಾಲಕ್ಕೆ ಲಸಿಕೆ ಕೊಡಿಸುವ ಮೂಲಕ ಮಕ್ಕಳಿಗೆ ಬರುವ ಹನ್ನೆರಡು ಮಾರಕ ರೋಗಗಳಿಂದ ದೂರ ಉಳಿಯಬೇಕು ಎಂದು ಹೇಳಿದರು.
ಒಂದು ಮಗುವಿನಿಂದ ಮತ್ತೊಂದು ಮಗುವಿಗೆ ಕನಿಷ್ಠ ಮೂರು ವರ್ಷ ಅಂತರವಿರಲಿ ಎಂದು ತಾಯಂದಿರಿಗೆ ಸಣ್ಣರಂಗಮ್ಮ ಮನದಟ್ಟು ಮಾಡಿದರು. ಪ್ರತಿಯೊಬ್ಬ ಮಹಿಳೆಯರು 30 ವರ್ಷ ದಾಟಿದ ನಂತರ ರಕ್ತದ ಒತ್ತಡ ಮತ್ತು ಸಕ್ಕರೆ ಕಾಯಿಲೆಗಳು ಸೇರಿದಂತೆ ಇತರೆ ಕಾಯಿಲೆಗಳ ತಪಾಸಣೆ ಮಾಡಿಸಿಕೊಳ್ಳಲು ವೈದ್ಯರ ಸಲಹೆ ಪಡೆಯಬೇಕು ಎಂದು ಅವರು ತಿಳಿಸಿದರು.
ಹನ್ನೆರಡು ವರ್ಷದೊಳಗಿನ ಎಲ್ಲ ಮಕ್ಕಳಿಗೆ ಕಾಲ ಕಾಲಕ್ಕೆ ಯಾವ್ಯಾವ ಲಸಿಕೆ ಹಾಕಿಸಬೇಕು ಎನ್ನುವ ಸ್ಥಳೀಯ ಅಂಗನವಾಡಿ ಕೇಂದ್ರಗಳು ಸೇರಿದಂತೆ ವೈದ್ಯರ ಬಳಿ ಮಾಹಿತಿ ಪಡೆದು ಮಕ್ಕಳಿಗೆ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಹೇಳಿದರು.
ಮಕ್ಕಳಿಗೆ ನೀಡಬೇಕಾದ ಲಸಿಕೆ ಹಾಕಿಸುವ ಮೂಲಕ ಮಕ್ಕಳ ಸಾವು, ಮಕ್ಕಳ ಅಂಗ ವೈಕಲ್ಯ ತಡೆಯುವುದು ಇದರ ಮುಖ್ಯ ಗುರಿಯಾಗಿದೆ. ಮಕ್ಕಳಿಗೆ ಲಸಿಕೆ ಕೊಡಿಸುವ ವಿಚಾರದಲ್ಲಿ ವೈದ್ಯರ ಬಳಿಗೆ ತೆರಳಲು ಮರೆಯಬೇಡಿ. ಹೆತ್ತವರು ತಮ್ಮ ಮಕ್ಕಳಿಗೆ ನೀಡಬೇಕಾದ ಲಸಿಕೆ ಕೊಡಿಸಲು ಮರೆಯುವುದೇ ಹೆಚ್ಚು. ಕ್ಯಾಲೆಂಡರ್, ಡೈರಿ, ರಿಮೈಂಡರ್ ಶಿಸ್ತು ಪಾಲಿಸುತ್ತಿಲ್ಲ. ಯಾವ ಲಸಿಕೆ, ಯಾವಾಗ ಕೊಡಬೇಕೆನ್ನುವ ಅರಿವೂ ಹೆತ್ತವರಿಗಿಲ್ಲ ಎಂದು ಅವರು ತಿಳಿಸಿ ಬೇಸರ ವ್ಯಕ್ತ ಪಡಿಸಿದರು.
ಸುರಕ್ಷಣಾಧಿಕಾರಿ ಶೈಲಾ ಮತ್ತು ಬಾನು ಡೆಂಗ್ಯೂ, ಮಲೇರಿಯಾ ಇತರೆ ಸಾಂಕ್ರಾಮಿಕ ರೋಗಗಳ ಬಗ್ಗೆ ಮಾಹಿತಿ ನೀಡಿದರು.
ಅಂಗನವಾಡಿ ಕಾರ್ಯಕರ್ತೆ ಹೇಮಲತಾ ಅವರು ಅಂಗನವಾಡಿಯಲ್ಲಿ ಲಭ್ಯವಿರುವ ಧಾನ್ಯಗಳ ಮಾಹಿತಿ ನೀಡಿದರು.