ಸ್ವಚ್ಛ ಸ್ವಭಾವ, ಸ್ವಚ್ಛ ಸಂಸ್ಕಾರದೊಂದಿಗೆ ಆರೋಗ್ಯ ರಕ್ಷಿಸಿಕೊಳ್ಳಿ: ಡಾ.ಬಿ.ವಿ.ಗಿರೀಶ್

News Desk

ಸ್ವಚ್ಛ ಸ್ವಭಾವ, ಸ್ವಚ್ಛ ಸಂಸ್ಕಾರದೊಂದಿಗೆ ಆರೋಗ್ಯ ರಕ್ಷಿಸಿಕೊಳ್ಳಿ: ಡಾ.ಬಿ.ವಿ.ಗಿರೀಶ್
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸ್ವಚ್ಛ ಸ್ವಭಾವ, ಸ್ವಚ್ಛ ಸಂಸ್ಕಾರ ಬೆಳೆಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.

ಇಲ್ಲಿನ ನಗರಸಭೆ ಸಭಾಂಗಣದಲ್ಲಿ ಮಂಗಳವಾರ ಆರೋಗ್ಯ ಇಲಾಖೆ ಸಹಯೋಗದಲ್ಲಿ ಪೌರ ಕಾರ್ಮಿಕರ, ಸಫಾಯಿ ಕರ್ಮಚಾರಿಗಳವರ ಆರೋಗ್ಯ ತಪಾಸಣೆ, ಆರೋಗ್ಯ ಮಾಹಿತಿ ಶಿಕ್ಷಣ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ಹೆಚ್ಚು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ವರ್ಗಗಳಲ್ಲಿ ಪೌರ ಕಾರ್ಮಿಕರು ಮೊದಲಿಗರು. ನಗರದ ಸ್ವಚ್ಛತೆ ಕಾಪಾಡಿ ನಾಗರೀಕರಿಗೆ ಸಾಂಕ್ರಾಮಿಕ ರೋಗಗಳು ಹರಡದಂತೆ ಕಾಪಾಡುವ ತಾವುಗಳು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲೇಬೇಕು ಎಂದು ಹೇಳಿದರು.

ಕಸ ಕಡ್ಡಿ ಚರಂಡಿ ಸ್ವಚ್ಛತೆ, ಶುದ್ಧ ಕುಡಿಯುವ ನೀರು ಒದಗಿಸುವಲ್ಲಿ, ಗಲೀಜುಗಳನ್ನು ಮುಟ್ಟುವ ಸಂದರ್ಭಗಳಲ್ಲಿ ಕಸ ವಿಲೇವಾರಿ ಮಾಡುವಾಗ ಇಲಾಖೆ ಒದಗಿಸಿದ ಗ್ಲೌಸ್, ಬೂಟು, ಮಾಸ್ಕ್ ಇತರೆ ರಕ್ಷಣಾ ಪರಿಕರಗಳನ್ನು ತಪ್ಪದೇ ಉಪಯೋಗಿಸಿ. ಇಲ್ಲವಾದಲ್ಲಿ ಬೇಗನೇ ರೋಗಗಳಿಗೆ ತುತ್ತಾಗುತ್ತಿರಾ ಎಂದು ತಿಳಿಸಿದ ಅವರು, ಸ್ವಚ್ಛ ಸ್ವಭಾವ, ಸ್ವಚ್ಛ ಸಂಸ್ಕಾರ ಬೆಳೆಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಿ ಎಂದರು.

ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ಎಲ್ಲಾ ಕಾರ್ಮಿಕರು ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಕಾರ್ಡ್ ಮಾಡಿಸಿಕೊಳ್ಳಿ. ರೂ.5 ಲಕ್ಷದವರೆಗೆ ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯ ಸಮಸ್ಯೆ ಗಂಭೀರ ಸ್ವರೂಪದ ಕಾಯಿಲೆಗಳಿಗೆ ಉಚಿತ ಉನ್ನತ ಮಟ್ಟದ ಚಿಕಿತ್ಸೆ ಪಡೆದುಕೊಳ್ಳಲು ಸಹಕಾರಿಯಾಗಿದೆ ಎಂದರು.

ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಯೋಜನೆಯಡಿ ನಿಮ್ಮ ಕುಟುಂಬದ 1 ವರ್ಷದಿಂದ 19 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಹುಟ್ಟಿನ ನ್ಯೂನ್ಯತೆ, ಕುಂಠಿತ ಬೆಳವಣಿಗೆ, ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಿಗೆ ಉನ್ನತ ಮಟ್ಟದ ಉಚಿತ ಚಿಕಿತ್ಸೆ ತಪಾಸಣೆಗೆ ಸಹಕಾರಿಯಾಗಿದೆ. ಧೂಮಪಾನ, ಮದ್ಯಪಾನ, ತಂಬಾಕು ಸೇವನೆಯಿಂದ ದೂರವಿರಿ. ಶುದ್ಧವಾದ ನೀರು, ಶುದ್ಧವಾದ ಆಹಾರ ಸೇವನೆ, ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಿ ಎಂದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಬಿ.ಮೂಗಪ್ಪ ಅವರು ಕೈ ತೊಳೆದುಕೊಳ್ಳುವ ವಿಧಾನದ ಪ್ರಾತ್ಯಕ್ಷಿಕೆ ನೀಡಿದರು. ಬಿ.ಜಾನಕಿ ಅವರು ಪೌಷ್ಟಿಕಾಹಾರದ ಬಗ್ಗೆ ತಿಳಿಸಿದರು.

ನಗರಸಭೆ ಅಧ್ಯಕ್ಷೆ ಸುಮಿತಾ ರಾಘವೇಂದ್ರ ಮಾತನಾಡಿ, ಪ್ರತಿ ಎರಡು ತಿಂಗಳಿಗೆ ಒಮ್ಮೆಯಾದರೂ ಪೌರ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಿ ಎಂದು ಆರೋಗ್ಯ ಇಲಾಖೆಗೆ ತಿಳಿಸಿದರು.

ಆರೋಗ್ಯ ತಪಾಸಣಾ ಶಿಬಿರದಲ್ಲಿ ಡಾ.ಬಿಲಾಲ್, ಡಾ.ವಾಣಿ, ಸಂಚಾರಿ ಆರೋಗ್ಯ ಘಟಕದ ತ್ರಿವೇಣಿ, ಲಕ್ಷ್ಮೀದೇವಿ, ರೆಹಮಾನ್, ಶಂಕರಮೂರ್ತಿ, ನಗರಸಭೆ ವ್ಯವಸ್ಥಾಪಕಿ ಬಿ.ಆರ್.ಮಂಜುಳಾ, ನಗರಸಭೆ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ನಾಗರಾಜ್, ಬಾಬುರೆಡ್ಡಿ, ಭಾರತಿ, ರುಕ್ಮಿಣಿ, ಪರಿಸರ ಇಂಜಿನಿಯರ್ ಜಾಫರ್ ಹಾಗೂ 98 ಜನ ಸಫಾಯಿ ಕರ್ಮಚಾರಿಗಳು ಇದ್ದರು.

- Advertisement -  - Advertisement - 
Share This Article
error: Content is protected !!
";