ಒಳ ಮೀಸಲಾತಿ ಜಾರಿ ವಿಫಲ, ಸರ್ಕಾರದ ವಿರುದ್ಧ ಪ್ರತಿಭಟನೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಒಳ ಮೀಸಲಾತಿ ಜಾರಿಗೊಳಿಸುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರದ ವಿರುದ್ದ ಸಾಮಾಜಿಕ ಸಂಘರ್ಷ ಸಮಿತಿಯಿಂದ ಒನಕ್ಕೆ ಓಬವ್ವ ವೃತ್ತದ ಸಮೀಪ ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ನಾಗಮೋಹನ್‌ದಾಸ್‌ರವರಿಗೆ ಮನವಿ ಸಲ್ಲಿಸಲಾಯಿತು.

ಕರ್ನಾಟಕ ರಾಜ್ಯ ಮಾದಿಗರ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಪ್ರೊ.ಸಿ.ಕೆ.ಮಹೇಶ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಅವಧಿ ಮೀರಿದ್ದರೂ ಒಳ ಮೀಸಲಾತಿ ಬಗ್ಗೆ ಸಂಗ್ರಹಿಸಿರುವ ವರದಿ ಇನ್ನು ಸಲ್ಲಿಕೆಯಾಗದಿರುವುದರಿಂದ ಮಾದಿಗರಿಗೆ ದೊಡ್ಡ ಪೆಟ್ಟು ನೀಡಿದೆ. ಇಷ್ಟೊತ್ತಿಗಾಗಲೆ ಸರ್ವೆ ಮುಗಿಸಬಹುದಿತ್ತು. ೩೦ ದಿನಗಳ ಕಾಲ ಮಾದಿಗರಿಂದ ಅಹವಾಲುಗಳನ್ನು ಸ್ವೀಕರಿಸಿದ್ದಾರೆ. ನಾವುಗಳು ೬೯ ಪುಟಗಳ ವರದಿ ಕೊಟ್ಟಿದ್ದೇವೆ. ಒಳ ಮೀಸಲಾತಿ ಹೋರಾಟದ ಜೊತೆಯಲ್ಲಿಯೇ ಕೆಲವು ಮಾದಿಗ ಸಂಘಟನೆಗಳು ಬಿಜೆಪಿ. ಆರ್‌ಎಸ್‌ಎಸ್. ಜೊತೆ ಹೋಗುತ್ತಿರುವುದು ಅಪಾಯಕಾರಿ. ಇದರಿಂದ ಮುಂದೊಂದು ದಿನ ಸಾಂಸ್ಕೃತಿಕ ಬೇರುಗಳನ್ನು ಕಳೆದುಕೊಳ್ಳಬೇಕಾಗುತ್ತದೆಂದು ಎಚ್ಚರಿಸಿದರು.

ಒಲೆಯ ಜನಾಂಗ ನಮ್ಮಲ್ಲಿ ಪ್ರತಿಭೆಯಿರುವುದರಿಂದ ಮೀಸಲಾತಿಯನ್ನು ಹೆಚ್ಚು ಬಳಸಿಕೊಂಡಿದ್ದೇವೆ. ಅದೇ ಮಾದಿಗರು ಮೀಸಲಾತಿಯನ್ನು ಬಳಸಿಕೊಳ್ಳುತ್ತಿರುವುದು ಕಡಿಮೆ ಎಂದು ಹೇಳುತ್ತಿರುವುದು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸಿದ್ದಾಂತಕ್ಕೆ ವಿರುದ್ದವಾಗಿದೆ. ಒಳ ಮೀಸಲಾತಿ ವಿಳಂಭವಾಗಲು ಮಾದಿಗ ರಾಜಕಾರಣಿಗಳ ಜೊತೆ ಕೆಲವು ಮಾದಿಗ ಸಂಘಟನೆಗಳು ನಿಂತಿರುವುದೇ ಮೂಲ ಕಾರಣ ಎಂದು ಪ್ರೊ.ಸಿ.ಕೆ.ಮಹೇಶ್ ಆಪಾದಿಸಿದರು.

ಕರ್ನಾಟಕ ರಾಜ್ಯ ಮಾದಿಗರ ಸಾಂಸ್ಕೃತಿಕ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಹಿರೇಹಳ್ಳಿ ಮಾತನಾಡಿ ಇಲ್ಲಿಯವರೆಗೂ ಆಡಳಿತ ನಡೆಸಿದ ಜೆಡಿಎಸ್. ಬಿಜೆಪಿ. ಈಗಿನ ಕಾಂಗ್ರೆಸ್ ಸರ್ಕಾರ ಕಳೆದ ಮೂವತ್ತು ವರ್ಷಗಳಿಂದಲೂ ಒಳ ಮೀಸಲಾತಿಯನ್ನು ಅನುಷ್ಟಾನಗೊಳಿಸದೆ ದಲಿತರನ್ನು ವಂಚಿಸುತ್ತಲೆ ಬರುತ್ತಿವೆ. ಅಧಿಕಾರದಲ್ಲಿದ್ದಾಗ ಒಳ ಮೀಸಲಾತಿಗೆ ಪೂರಕವಾಗಿ ಕೆಲಸ ಮಾಡದವರು ಅಧಿಕಾರ ಕಳೆದುಕೊಂಡಾಗ ಒಳ ಮೀಸಲಾತಿ ಪರ ಮಾತನಾಡುವುದು ಯಾವ ನ್ಯಾಯ? ರಾಜಕೀಯ ಪಕ್ಷಗಳನ್ನು ಓಲೈಕೆ ಮಾಡುವ ಹೋರಾಟಗಾರರನ್ನು, ಸಂಘಟನೆಗಳನ್ನು ತಿರಸ್ಕರಿಸಿ ಸ್ವತಂತ್ರವಾಗಿ ಒಳ ಮೀಸಲಾತಿಗೆ ಹೋರಾಡುವುದು ನಮ್ಮ ಗುರಿ ಎಂದು ಎಚ್ಚರಿಸಿದರು.

ಸಾಮಾಜಿಕ ಸಂಘರ್ಷ ಸಮಿತಿ ಗೌರವಾಧ್ಯಕ್ಷ ಡಿ.ದುರುಗೇಶಪ್ಪ, ಜಿಲ್ಲಾಧ್ಯಕ್ಷ ಕೆ.ಕುಮಾರ್, ಪ್ರಧಾನ ಕಾರ್ಯದರ್ಶಿ ಸಿ.ಎ.ಚಿಕ್ಕಣ್ಣ, ಉಪಾಧ್ಯಕ್ಷ ಎಂ.ಡಿ.ರವಿ, ಆರ್.ರಾಮಲಿಂಗಪ್ಪ, ಪ್ರಭಾಕರ್, ಸುಧಾಕರ್, ತಮ್ಮಣ್ಣ, ಹನುಮಂತರಾಯ, ರಾಜಣ್ಣ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

 

 

- Advertisement -  - Advertisement - 
Share This Article
error: Content is protected !!
";