ಸಂಬಳ ಕೊಡಲು ವಿಳಂಬ ನೀತಿ ಅನುಸರಿಸಿದ ಜೀನ್ಸ್ ಕಾರ್ಖಾನೆ ವಿರುದ್ಧ ಪ್ರತಿಭಟನೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕಾರ್ಮಿಕರಿಂದ ಪ್ರತಿ ತಿಂಗಳು ಕೆಲಸ ಮಾಡಿಸಿಕೊಂಡು ಸಂಬಳ ಕೊಡದೆ  ಸತಾಯಿಸುತ್ತಿದ್ದ ವಿಧಾನ ಪರಿಷತ್ ಸದಸ್ಯ  ನಜೀರ್ ಅಹಮದ್ ಒಡೆತನದ ವಯಾ ಜೀನ್ಸ್  ಖಾಸಗಿ ಕಾರ್ಖಾನೆ ವಿರುದ್ಧ  ಕೆ ಎಸ್ ಎಂಟರ್ಪ್ರೈಸಸ್ ನ ಗುತ್ತಿಗೆದಾರ ಏನ್. ಸಿ ಸುರೇಶ್ ಕಾರ್ಖಾನೆ ಮುಂಭಾಗ ಸಂಬಳ ನೀಡುವಂತೆ ಆಗ್ರಹಿಸಿ   ಪ್ರತಿಭಟನೆ ನಡೆಸಿದರು.

  ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡರ ಬಣ)ಯ ಜಿಲ್ಲಾ ಘಟಕ ಅಧ್ಯಕ್ಷ ಪುರುಷೋತ್ತಮ್ ಗೌಡ ಹಾಗೂ ತಾಲ್ಲೂಕು ಅಧ್ಯಕ್ಷ  ಮಂಜುನಾಥ್ ನಾಯಕ ಪಾಲ್ಗೊಂಡು ಕಾರ್ಮಿಕರಿಗೆ ಸಂಬಳ ಕೊಡುವಂತೆ ಅಗ್ರಹಿಸಿದರು.

 ಕೆ ಎಸ್ ಎಂಟರ್ಪ್ರೈಸಸ್ ನ ಗುತ್ತಿಗೆದಾರ ಏನ್. ಸಿ ಸುರೇಶ್ ಮಾತನಾಡಿ ಒಂದುವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಕಳೆದ 8 ತಿಂಗಳುಗಳಿಂದ  ಸಂಬಳ ಕೊಡದೆ ಸತಾಯಿಸುತ್ತಿದ್ದಾರೆ. ಸಂಬಳ ಕೇಳಲು ಹೋದರೆ ನಾಳೆ ಕೊಡುತ್ತೇನೆ ನಾಡಿದ್ದು ಕೊಡುತ್ತೇನೆ ಎಂದು ಸಬೂಬು ಹೇಳುತ್ತಾರೆ. ಸಂಬಳ ಪಡೆಯದ ಕಾರ್ಮಿಕರು ಮನೆಯ ಬಳಿ ಬಂದು ಗಲಾಟೆ ಮಾಡುತ್ತಿದ್ದು, ಸಂಬಳ ಕೊಡಿಸುವಂತೆ ಕೋರಿ ಕಾರ್ಮಿಕ ಇಲಾಖೆಗೂ ಮನವಿ ಮಾಡಿದ್ದೇನೆ ಆದರೆ ಯಾವುದೇ ರೀತಿ ಪ್ರಯೋಜನವಾಗಿಲ್ಲ, ಕಾರ್ಮಿಕರ ಹಿತ ಕಾಯದ ಕಾರ್ಖಾನೆ ಮಾಲೀಕ ವರ್ತನೆ ನಮಗೆ ಬೇಸರ ತಂದಿದೆ. ಈ ಕೂಡದೆ ಬಾಕಿ ಇರುವ ವೇತನವನ್ನು  ನೀಡುವಂತೆ ಕಾರ್ಖಾನೆಯ ಆಡಳಿತ ಮಂಡಳಿಗೆ ಹಾಗೂ ಮಾಲೀಕರಿಗೆ ಅಗ್ರಹಿಸಿ ಈ ಕಾರ್ಮಿಕರ ಪರ ಈ ಪ್ರತಿಭಟನೆ ಹಮ್ಮಿಕೊಂಡಿದ್ದೇನೆ ಎಂದರು.

 ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡರ ಬಣ ) ಜಿಲ್ಲಾಧ್ಯಕ್ಷ ಪುರುಷೋತ್ತಮ್ ಗೌಡ ಮಾತನಾಡಿ  ಕನ್ನಡಿಗರ ನೆಲ ಜಲ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಕಾರ್ಖಾನೆಗಳು ಸ್ಥಳೀಯವಾಗಿರುವ ಕನ್ನಡ ಕಾರ್ಮಿಕರಿಗೆ  ಸಂಬಳ ಕೊಡದೆ ವಂಚಿಸುತ್ತಿರುವುದು ಅಕ್ಷಮ್ಯ ಅಪರಾಧ ನಮ್ಮ ಕರವೇ ಕನ್ನಡಿಗರ ಪರ ಸದಾ ಧ್ವನಿಯಾಗಿರುತ್ತದೆ. ಕಾರ್ಖಾನೆಯ ಈ ಹುಚ್ಚಾಟದಿಂದ 40ಕ್ಕೂ ಅಧಿಕ ಕುಟುಂಬಗಳು ಬೀದಿ ಪಾಲಾಗಿವೆ . ಜೀವನೋಪಾಯಕ್ಕೆಂದು ಕೆಲಸಕ್ಕೆ ಬರುವ ಕಾರ್ಮಿಕರಿಗೆ ಈ ಕಾರ್ಖಾನೆಯು ವೇತನ ಕೊಡದೆ  ಮೋಸ ಮಾಡಿದೆ . ಕಾರ್ಖಾನೆ ಆಡಳಿತ ಮಂಡಳಿ ಹಾಗೂ ಮಾಲೀಕರು  ಈ ಕೂಡಲೇ ಈ ಕುರಿತು  ಸಕಾರಾತ್ಮಕ ಸ್ಪಂದಿಸಿ ಕಾರ್ಮಿಕರಿಗೆ ಬಾಕಿ ಇರುವ ವೇತನವನ್ನು ವಿತರಣೆ ಮಾಡಬೇಕಿದೆ , ಇಲ್ಲವಾದಲ್ಲಿ ಇದು ಕೇವಲ ಸಾಂಕೇತಿಕ  ಪ್ರತಿಭಟನೆಯಾಗಿದ್ದು, ಮುಂದೆ ಕಾರ್ಖಾನೆ ವಿರುದ್ಧ ಉಗ್ರ ಹೋರಾಟ ರೂಪಿಸಲಾಗುವುದು ಎಂದರು. 

 ಈ ಸಂದರ್ಭದಲ್ಲಿ  ವಂಚನೆ ಒಳಪಟ್ಟ ಕಾರ್ಮಿಕರು, ಕರ್ನಾಟಕ ರಕ್ಷಣಾ ವೇದಿಕೆಯ  ಪದಾಧಿಕಾರಿಗಳು,ಸದಸ್ಯರು ಉಪಸ್ಥಿತರಿದ್ದರು.

 

 

 

Share This Article
error: Content is protected !!
";