ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗ್ಯಾರಂಟಿ ಅನುಷ್ಠಾನ ಸಮಿತಿಗೆ ಕಾಂಗ್ರೆಸ್ ಕಾರ್ಯಕರ್ತರನ್ನು ಬಳಸಿಕೊಂಡು, ರಾಜ್ಯದ ಜನರ ತೆರಿಗೆ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ಖಂಡಿಸಿ ಕಾಂಗ್ರೆಸ್‌ಸರ್ಕಾರದ ವಿರುದ್ಧ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಶಾಸಕರುಗಳು ವಿಧಾನ ಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಧರಣಿ ನಡೆಸಿದರು.
ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ ಪ್ರತಿಪಕ್ಷದ ಉಭಯ ಸದನ ಸದಸ್ಯರು, ಸರ್ಕಾರ ತೆರಿಗೆ ಹಣ ದುರುಪಯೋಗ ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ಸರ್ಕಾರದ ದುಡ್ಡನ್ನು ಕಾಂಗ್ರೆಸ್ ಕಾರ್ಯಕರ್ತರಿಗೆ ನೀಡಲಾಗುತ್ತಿದೆ. ಸರ್ಕಾರದ ಹಣವನ್ನು ಖರ್ಚು ಮಾಡುವ ಬದಲಾಗಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮನೆಯ ಮುಂದೆ ಭಿಕ್ಷೆ ಬೇಡಲಿ. ಕಾಂಗ್ರೆಸ್ ಹಗಲು ದರೋಡೆ ಮಾಡುತ್ತಿದೆ. ಗ್ಯಾರಂಟಿ ಅನುಷ್ಠಾನ ಸಮಿತಿಯ ಹೆಸರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಕಚೇರಿ, ವೇತನ ನೀಡಲಾಗುತ್ತಿದೆ. ಸರ್ಕಾರದ ಯೋಜನೆಗಳನ್ನು ಜಾರಿಗೆ ತರಲು ಅಧಿಕಾರಿಗಳಿಗೆ ಸಂಬಳ ಕೊಡಲಾಗುತ್ತಿದೆ. ಹೀಗಿರುವಾಗ ಗ್ಯಾರಂಟಿ ಸಮಿತಿಗೆ ಕಾಂಗ್ರೆಸ್ ಕಾರ್ಯಕರ್ತರ ನೇಮಕ ಏಕೆ ಎಂದು ಪ್ರಶ್ನಿಸಿದರು.
ಕಾರ್ಯಕರ್ತರಿಗೆ ವೇತನ: ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಅಂಗನವಾಡಿ ಕಾರ್ಯಕರ್ತರರು, ಶಿಕ್ಷಕರಿಗೆ ಗೌರವ ಧನ ಹೆಚ್ಚಳ ಮಾಡಲಾಗುತ್ತಿಲ್ಲ. ಆಶಾ ಕಾರ್ಯಕರ್ತೆಯರಿಗೂ ಗೌರವ ಧನ ಹೆಚ್ಚಳ ಮಾಡುತ್ತಿಲ್ಲ. ಹೀಗಿರುವಾಗ, ಗ್ಯಾರಂಟಿ ಅನುಷ್ಠಾನ ಸಮಿತಿ ಮಾಡಿ ಕಾಂಗ್ರೆಸ್ ಕಾರ್ಯಕರ್ತರಿಗೆ ವೇತನ ನೀಡುತ್ತಿದೆ. ಜನರ ತೆರಿಗೆ ಹಣ ಪೋಲು ಮಾಡಿ ಕಾಂಗ್ರೆಸ್ ಪುಡಾರಿಗಳಿಗೆ ಹಣ ನೀಡಲಾಗುತ್ತಿದೆ” ಎಂದು ಕಿಡಿಕಾರಿದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಮಾತನಾಡಿ, ಸಮಿತಿ ರದ್ದು ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದರೂ ಹಿಂದಕ್ಕೆ ಪಡೆಯುವ ಪ್ರಶ್ನೆ ಇಲ್ಲ ಎಂದು ಹೇಳುತ್ತಿದೆ. ಜನರ ತೆರಿಗೆ ಹಣವನ್ನು ಕಾರ್ಯಕರ್ತರಿಗೆ ಕೊಡುವ ಅಗತ್ಯತೆ ಏನಿದೆ?. ಸರ್ಕಾರಿ ನೌಕರರಿಗೆ ವೇತನ ಕೊಡಲು ಹಣ ಇಲ್ಲ, ಹೀಗಿರುವಾಗ ಕಾರ್ಯಕರ್ತರಿಗೆ ಹಣ ಕೊಡಲಾಗುತ್ತಿದೆ. ಕೂಡಲೇ ಸಮಿತಿ ರದ್ದು ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯಪಾಲರಿಗೆ ದೂರು: ಪ್ರತಿಭಟನೆ ಬಳಿಕ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಕಾಲ್ನಡಿಗೆ ಮೂಲಕ ರಾಜಭವನಕ್ಕೆ ತೆರಳಿದರು. ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಸೇರಿ ಬಿಜೆಪಿ ಮತ್ತುಜೆಡಿಎಸ್ ಸದಸ್ಯರು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ದೂರು ನೀಡಿದರು.
ಈ ಸಂದರ್ಭದಲ್ಲಿ ವಿಧಾನಸಭೆಯ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಸಿ.ಬಿ, ವಿಧಾನ ಪರಿಷತ್ ನಾಯಕ ಎಸ್.ಎಲ್.ಭೋಜೇಗೌಡ, ಶಾಸಕರಾದ ಕರೆಮ್ಮ ಜಿ. ನಾಯಕ್, ಬಿ.ಎನ್.ರವಿ, ಹೆಚ್.ಟಿ ಮಂಜು, ಶಾಸಕ ಜಿ.ಡಿ ಹರೀಶ್ ಗೌಡ, ವಿಧಾನ ಪರಿಷತ್‌ಸದಸ್ಯರಾದ ಶರವಣ್, ಟಿ.ಎನ್. ಜವರಾಯಿಗೌಡ, ಪ್ರತಿಪಕ್ಷ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕರಾದ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ ವಿಜಯೇಂದ್ರ ಸೇರಿದಂತೆ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಶಾಸಕರುಗಳು, ವಿಧಾನ ಪರಿಷತ್ ಸದಸ್ಯರುಭಾಗವಹಿಸಿದ್ದರು.