ಪರಿಸರ ಮಾಲಿನ್ಯ ನಿಯಂತ್ರಣ ಮಂಡಲಿ ದೌರ್ಜನ್ಯದ ವಿರುದ್ಧ ಪ್ರತಿಭಟನೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರದ ಪ್ರಮುಖ ಉದ್ಯಮವಾದ ನೇಕಾರಿಕೆಗೆ ಸಂಬಂಧ ಪಟ್ಟ ರೇಷ್ಮೆ ಹಾಗೂ ಕೃತಕ ರೇಷ್ಮೆಗೆ ಬಣ್ಣ ಹಚ್ಚುವ ಘಟಕಗಳ ಮೇಲೆ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ನಡೆಸಿರುವ ದೌರ್ಜನ್ಯವನ್ನು ಖಂಡಿಸಿ ನೇಕಾರ ಹೋರಾಟ ಸಮಿತಿ ವತಿಯಿಂದ ಪ್ರವಾಸಿ ಮಂದಿರ ಬಳಿ ಇರುವ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಕಚೇರಿ ಮುಂದೆ ಭಾರಿ ಪ್ರತಿಭಟನೆಯನ್ನು ನಡೆಸಲಾಯಿತು.

     ಪ್ರತಿಭಟನೆಯಲ್ಲಿ ನೇಕಾರ ಹೋರಾಟ ಸಮಿತಿಯ ಅಧ್ಯಕ್ಷ ಬಿ. ಜಿ. ಹೇಮಂತರಾಜ್ ಮಾತನಾಡಿ ಇತ್ತೀಚೆಗೆ ದೊಡ್ಡಬಳ್ಳಾಪುರ ನಗರದ ಬಣ್ಣದ ಘಟಕಗಳ ಮೇಲೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಲಿ ಅಧಿಕಾರಿಗಳು ಗದಾ ಪ್ರಹಾರ ಮಾಡಿ ಪರಿಸರ ಮಾಲಿನ್ಯದ ನೆಪ ಒಡ್ಡಿ ಘಟಕಗಳನ್ನು ಮುಚ್ಚುವಂತೆ ಒತ್ತಡ ಹೇರುತ್ತಿದ್ದಾರೆ. ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಲಿಂಗರಾಜು ಎಂಬುವರು ನಗರದ ಹೊರವಲಯದಲ್ಲಿ ಜಾಗದ ಮಾಲೀಕರಿಂದ ಜಾಗವನ್ನು ಬಾಡಿಗೆಗೆ ಪಡೆದು ಸಾಲ ಮಾಡಿ ಸುಮಾರು ಮೂರು ಲಕ್ಷದ ವೆಚ್ಚದಲ್ಲಿ ಬಣ್ಣದ ಘಟಕವನ್ನು ಪ್ರಾರಂಭಿಸಿದ್ದರು.

- Advertisement - 

ನಿಯಮಾನುಸಾರ ಘಟಕವನ್ನು ನಡೆಸುತ್ತಿದ್ದರೂ ಸಹಾ ಕೆಲವು ಕಿಡಿಗೇಡಿಗಳ ಮಾತು ಕೇಳಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಶಿವಕುಮಾರ್ ಜಾಗದ ಮಾಲೀಕರಿಗೆ ಬೆದರಿಸಿ ಏಕಾ ಏಕಿ ಒಂದೆರಡು ದಿನಗಳಲ್ಲಿ ಲಿಂಗರಾಜು ರವರ ಬಣ್ಣದ ಘಟಕವನ್ನು ಜೆಸಿಬಿ ಮೂಲಕ ದ್ವಂಸ ಗೊಳಿಸಿದ್ದಾರೆ. ಸಾಲ ಮಾಡಿ ಘಟಕ ಸ್ಥಾಪಿಸಿದ್ದ ಲಿಂಗರಾಜು ಕುಟುಂಬ ಇದರಿಂದ ಬೀದಿಗೆ ಬೀಳುವಂತಾಗಿದೆ.

ಈ ಬಗ್ಗೆ ಅಧಿಕಾರಿ ಶಿವಕುಮಾರರವರನ್ನು ಕೇಳಿದರೆ ಮಾಲಿನ್ಯ ನೀರಿನ ನೆಪ ಹೇಳುತ್ತಿದ್ದಾರೆ. ವಾಸ್ತವವೆಂದರೆ ಬಣ್ಣದ ಘಟಕದ ತ್ಯಾಜ್ಯ ನೀರು ಯಾವುದೇ ಕೆರೆ ಕುಂಟೆಗಳಿಗೆ ಬಿಡದೆ ಹೊಂಡ ನಿರ್ಮಿಸಿ ಶೇಕರಿಸಲಾಗಿತ್ತು. ಇದನ್ನು ಗಮನಿಸಿಯು ಸಹಾ ಅಧಿಕಾರಿ ಘಟಕವನ್ನು ದ್ವಂಸ ದೌರ್ಜನ್ಯ ಎಸಗಿದ್ದಾರೆ ಎಂದ ಹೇಮಂತ್ ರಾಜ್ ಸ್ವತಂತ್ರ ಪೂರ್ವದಿಂದಲೂ ನೇಕಾರಿಕೆಗೆ ಸಂಬಂಧ ಪಟ್ಟ ಬಣ್ಣದ ಘಟಕಗಳು ದೊಡ್ಡಬಳ್ಳಾಪುರದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಸುಮಾರು ನಲ್ವತ್ತು ಘಟಕಗಳು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಬೇಜವಾಬ್ದಾರಿ ಕ್ರಮದಿಂದಾಗಿ ಕಳೆದ ವರ್ಷಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಘಟಕಗಳು ಮುಚ್ಚಿವೆ. ಇದರಿಂದ ನಗರದ ನೇಕಾರಿಕೆಗೆ ಸಾಕಷ್ಟು ತೊಂದರೆ ಯಾಗುತ್ತಿದೆ.

- Advertisement - 

ಅಸಲಿ ವಿಷಯವೆಂದರೆ ಈಗಾಗಲೇ ಸುಮಾರು ವರ್ಷಗಳಿಂದ ಭಾಷೆಟ್ಟಿ ಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಡೆಯುತ್ತಿರುವ ಸಾಕಷ್ಟು ಕಾರ್ಖಾನೆಗಳಿಂದ ರಾಸಾಯನಿಕ ಯುಕ್ತ ಅಲ್ಲಿನ ಕೆರೆ ಕುಂಟೆಗಳಿಗೆ ಹರಿದು ಇಡೀ ಕೈಗಾರಿಕಾ ಪ್ರದೇಶದ ಸುತ್ತಲಿನ ಜಲ ಮೂಲಗಳು ಮಾಲಿನ್ಯದಿಂದ ವಿಷಯುಕ್ತವಾಗಿವೆ.

ಕಾರ್ಖಾನೆಗಳು ವಿಷಯುಕ್ತ ನೀರನ್ನು ರಾಜಾರೋಷವಾಗಿ ಕೆರೆ ಕುಂಟೆಗಳಿಗೆ ಹರಿಸುತ್ತಿದ್ದರೂ ಇದುವರೆವಿಗೆ ಒಂದೂ ಕಾರ್ಖಾನೆಯ ಮೇಲೆ ಕ್ರಮ ಕೈಗೊಂಡು ಕಾರ್ಖಾನೆಗಳನ್ನು ಮುಚ್ಚಿಸದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಲಿ ಅಧಿಕಾರಿಗಳು ಅಷ್ಟೇನೂ ಅಪಾಯಕಾರಿಯಲ್ಲದ ಬಣ್ಣದ ಘಟಕ ನೀರು ಪರಿಸರವನ್ನು ಹಾಳು ಮಾಡುತ್ತಿವೆ ಎಂಬ ಕಾರಣ ನೀಡಿ ಬಡ ಬಣ್ಣದ ಘಟಕಗಳವರಿಗೆ ವಿನಾಕಾರಣ ಅಧಿಕಾರಿಗಳು ತೊಂದರೆ ಕೊಡುತ್ತಿದ್ದಾರೆ. 

ಇದರಿಂದ ನೇಕಾರಿಕೆಯನ್ನು ನಂಬಿ ಬದುಕು ನಡೆಸುತ್ತಿರುವ ಬಡ ನೇಕಾರರ ಬದುಕು ದುಸ್ತರ ವಾಗುತ್ತಿದೆ. ಈಗಾಗಲೇ ಜವಳಿ ಸಚಿವರಿಗೆ ಮನವಿ ನೀಡಿದ್ದೇವೆ. ಸಚಿವರು ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆದರೆ ದೊಡ್ಡ ದೊಡ್ಡ ಕಾರ್ಖಾನೆಗಳ ಮರ್ಜಿಗೆ ಬಿದ್ದ ಅಧಿಕಾರಿಗಳು ವಿನಾಕಾರಣ ತೊಂದರೆ ಕೊಡುವಲ್ಲಿ ನಿರತರಾಗಿದ್ದಾರೆ. ಇದನ್ನು ಹೀಗೆ ಮುಂದುವರೆಸಿದರೆ ಮಂಡಳಿಯ ವಿರುದ್ಧ ಉಗ್ರವಾದ ಹೋರಾಟವನ್ನು ನೇಕಾರ ಸಮಿತಿ ಹಮ್ಮಿಕೊಳ್ಳುತ್ತದೆ ಎಂದು ಹೇಮಂತ್ ರಾಜ್ ಹೇಳಿದರು.     

 ಪ್ರತಿಭಟನೆಯಲ್ಲಿ ನೇಕಾರ ಹೋರಾಟ ಸಮಿತಿ ಪದಾಧಿಕಾರಿಗಳು, ಸದಸ್ಯರು, ಬಣ್ಣದ ಘಟಕಗಳ ಮಾಲೀಕರು, ನೇಕಾರ ಮುಖಂಡರು ಸೇರಿದಂತೆ ಹಲವಾರು ನೇಕಾರರು ಭಾಗವಹಿಸಿದ್ದರು.

Share This Article
error: Content is protected !!
";