ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕಬ್ಬು ಬೆಳೆಗಾರ ರೈತರ ಬೇಡಿಕೆಯಂತೆ ಪ್ರತಿ ಟನ್ ಕಬ್ಬಿಗೆ ನ್ಯಾಯಯುತವಾದ 3500 ರೂ.ಗಳನ್ನು ನಿಗದಿ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ರೈತರು ತಾವು ಬೆಳೆದ ಕಬ್ಬಿನ ಬೆಳೆಗೆ ಒಂದು ಟನ್‌ಗೆ ೩,೫೦೦ ರೂ. ಗಳನ್ನು ಕೊಡಬೇಕೆಂದು 7 ದಿನಗಳಿಂದ ಬೆಳಗಾಂ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಗುರ್ಲಾಪುರದಲ್ಲಿ ಸಾವಿರಾರು ಸಂಖ್ಯೆಯ ರೈತರು ಅಹೋರಾತ್ರಿ ಧರಣಿ ಮಾಡುತ್ತಿದ್ದು ನ್ಯಾಯಯುತವಾದ ಬೆಲೆಯಾಗಿದ್ದು, ಅದನ್ನು ತಕ್ಷಣ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ರೈತರಿತರು ಖರೀದಿಸುವ ರಸಗೊಬ್ಬರ, ಪೆಟ್ರೋಲ್, ಡಿಸೇಲ್ ಮತ್ತು ವ್ಯವಸಾಯದ ಕೃಷಿ ಸಲಕರಣೆಗಳ ಬೆಲೆಗಳು ಹೆಚ್ಚಾಗಿದ್ದು ರೈತರು ಬೆಳೆದಂತಹ ಬೆಳೆಗಳಿಗೆ ಬೆಲೆ ಇಲ್ಲದಂತಾಗಿ ರೈತರು ಸಾಲಗಾರರಾಗಿ ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆಂದು ನೋವು ತೋಡಿಕೊಂಡರು.
ಕಬ್ಬಿನ ಫ್ಯಾಕ್ಟರಿ ಮಾಲೀಕರ ಒತ್ತಡಕ್ಕೆ ಸರ್ಕಾರ ಮಡಿದಿದೆ. ರೈತರು ಸುಮಾರು ೭ ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದರು ಸಹ ಕಬ್ಬಿಗೆ ಬೆಲೆ ನಿಗದಿಪಡಿಸದೇ ರೈತರ ಹೋರಾಟವನ್ನು ನಿರ್ಲಕ್ಷ್ಯ ಮಾಡಲಾಗಿದೆ. ಚಿತ್ರದುರ್ಗ ಜಿಲ್ಲೆಯ ರೈತರು ಧರಣಿ ನಿರತ ರೈತರಿಗೆ ಬೆಂಬಲ ಸೂಚಿಸುತ್ತಿದ್ದು, ಸರ್ಕಾರ ನಿರ್ಲಕ್ಷ್ಯ ಧೋರಣೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ರೈತರು ಬೆಳೆದಂತಹ ಯಾವುದೇ ಬೆಳೆಗಳು ಬೆಲೆ ಕುಸಿತವಾದಾಗ ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಎಂದು ರೈತರು ಆಗ್ರಹ ಮಾಡಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಮೆಕ್ಕೆಜೋಳದ ಬೆಲೆಯು ಸಹ ಕುಸಿದಿರುವುದರಿಂದ ಕೂಡಲೇ ಸರ್ಕಾರ ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರಗಳನ್ನು ತೆರೆದು ಮೆಕ್ಕೆಜೋಳ ಖರೀದಿ ಮಾಡಿ ರೈತರ ನೆರವಿಗೆ ಬರಬೇಕೆಂದು ಒತ್ತಾಯಿಸಿದರು. ಜಿಲ್ಲಾಧ್ಯಕ್ಷ ಡಿಎಸ್ ಹಳ್ಳಿ ಮಲ್ಲಿಕಾರ್ಜುನ್,
ಕಾರ್ಯದರ್ಶಿ ರಾಮರೆಡ್ಡಿ, ಅಳಿಯೂರ್ ಸಿದ್ದಣ್ಣ, ತಾಲೂಕ್ ಅಧ್ಯಕ್ಷ ಕಾಂತರಾಜ್, ರವಿಕುಮಾರ್, ಈರಣ್ಣ, ದಂಡಿನ ಕುರುಬರಟ್ಟಿ ಅಂಜಿನಪ್ಪ, ಮುದ್ದಾಪುರ ಮಂಜುನಾಥ್, ನಾಗಣ್ಣ, ಅಂಜಿನಪ್ಪ, ಸಂಜೀವಪ್ಪ, ಗುರುಸಿದ್ದಪ್ಪ, ನಾರಪ್ಪ, ಬಾಬುರೆಡ್ಡಿ, ಮಾರುತಿ, ಕಲ್ಲೇಶ್, ಮಂಜುನಾಥ, ಚೇತನ, ಬಸವರಾಜ, ಕೃಷ್ಣಮೂರ್ತಿ, ಸದಾಶಿವ, ಇಸ್ಮಾಯಿಲ್, ಲೋಕಜ್ಜ, ಲಕ್ಷ್ಮಣ ಇನ್ನು ಮುಂತಾದವರಿದ್ದರು.

