ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲೆಯಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭ ಮತ್ತು ವಾಣಿವಿಲಾಸ ಸಾಗರ ಜಲಾಶಯಕ್ಕೆ ಭದ್ರತೆ ಒದಗಿಸಲು ಒತ್ತಾಯಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರೈತ ಸಂಘದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.
ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ (ಕೆ.ಎಸ್.ಐ.ಎಸ್.ಎಫ್) ಪಡೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ನಿಯೋಜನೆ ಮಾಡಬೇಕು. ತೆಲಂಗಾಣ ಸರ್ಕಾರ ಹಾಗೂ ಕೇರಳ ಸರ್ಕಾರದ ಮಾದರಿಯಲ್ಲಿ ಬೋನಸ್ ನೀಡಬೇಕು. ಹಿರಿಯೂರು ವಾಣಿವಿಲಾಸ ಜಲಾಶಯಕ್ಕೆ ಭದ್ರತೆಯನ್ನು ಒದಗಿಸಲು ಒತ್ತಾಯಿಸಿದರು.
ವಾಣಿ ವಿಲಾಸ ಸಾಗರ ಜಲಾಶಯವು ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ವ್ಯಾಪ್ತಿಗೆ ಬರುತ್ತಿದ್ದು ಸದರಿ ಜಲಾಶಯವು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಿ.ವಿ ಪುರ ಗ್ರಾಮದ ಬಳಿ ಎರಡು ಗುಡ್ಡಗಳ ಮಧ್ಯೆ ಹಾದುಹೋಗಿರುವ ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ.
1907ರಲ್ಲಿ ವಿವಿ ಸಾಗರ ಜಲಾಶಯ ನಿರ್ಮಾಣ ಮಾಡಿದ್ದು ಅಣೆಕಟ್ಟು ಉದ್ದ ೪೦೫.೪೦ಮೀ, ಅಣೆಕಟ್ಟು ಎತ್ತರ ೪೩.೨೮ಮೀ, ನೀರಿನ ಸಂಗ್ರಹಣಾ ವ್ಯಾಪ್ತಿ ೮೭೬೩ಹೆಕ್ಟರ್, ಜಲಾಶಯದ ನೀರಿನ ಸಂಗ್ರಹಣಾ ಸಾಮಾರ್ಥ್ಯ ೩೦ಟಿ.ಎಂ.ಸಿ, ಜಲಾಶಯದ ಒಟ್ಟು ಅಚ್ಚುಕಟ್ಟು ಪ್ರದೇಶ ೧೨೧೩೫ಹೆಕ್ಟರ್, ಕುಡಿಯುವ ನೀರಿನ ಸೌಲಭ್ಯ ಹಿರಿಯೂರು,
ಚಿತ್ರದುರ್ಗ, ಚಳ್ಳಕೆರೆ ಹಾಗೂ ಕೇಂದ್ರ ಪುರಸ್ಕೃತ ಡಿ.ಆರ್.ಡಿ.ಓ, ಐ.ಐ.ಎಸ್.ಸಿ, ಬಿ.ಎ.ಆರ್.ಸಿ ಸಂಸ್ಥೆಗಳಿಗೆ ಹಾಗೂ ಚಿತ್ರದುರ್ಗ ಚಳ್ಳಕೆರೆ ನಗರ ಮಧ್ಯ ಹಳ್ಳಿಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಿದೆ. ಜಿಲ್ಲೆಯ ಹಿರಿಯೂರು ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ವಾಣಿ ವಿಲಾಸ ಸಾಗರ ಜಲಾಶಯವು ಒಂದು ಪ್ರಮುಖ ಪ್ರವಾಸಿಗಳ ಆಕರ್ಷಣೆಯ ಕೇಂದ್ರವಾಗಿದ್ದು, ರಾಜ್ಯದ ಅತ್ಯಂತ ಹಳೆಯ ಮೊದಲು ಅಣೆಕಟ್ಟಾಗಿದೆ. ಈ ಅಣೆಕಟ್ಟಿಗೆ ಯಾವುದೇ ಖಾಯಂ ರಕ್ಷಣಾ ಸಿಬ್ಬಂದಿ ನೇಮಿಸಿರುವುದಿಲ್ಲ. ಈ ಜಲಾಶಯಕ್ಕೆ ಪೊಲೀಸ್ ಅಧಿಕಾರಿ ಸಿಬ್ಬಂದಿಗಳನ್ನು ನೇಮಿಸುವುದು ಮುಖ್ಯವಾಗಿರುತ್ತದೆ.
ಹಾಗೂ ಅನಪೇಕ್ಷಿತ ವ್ಯಕ್ತಿಗಳಿಂದ ಆಗಬಹುದಾದಂತಹ ಅವಗಡಗಳು ಮತ್ತು ಯುದ್ಧಭೀತಿ ಹಿನ್ನಲೆಯಲ್ಲಿ ಜಲಾಶಯದ ರಕ್ಷಣೆ ಹೊಣೆಗಾರಿಕೆಯನ್ನು ಪಡೆದುಕೊಂಡಿರುತ್ತದೆ. ಮುಂಜಾಗ್ರತಾ ಕ್ರಮವಾಗಿ ಜಲಾಶಯಕ್ಕೆ ಸೂಕ್ತ ರೀತಿಯಲ್ಲಿ ರಕ್ಷಣೆ ಒದಗಿಸಲು ಕೆ.ಎಸ್.ಐ.ಎಸ್.ಎಫ್ ಅಧಿಕಾರಿ ಸಿಬ್ಬಂದಿಗಳನ್ನು ನಿಯೋಜನೆ ಮಾಡಬೇಕು ಎಂದು ರೈತರು ಒತ್ತಾಯಿಸಿದರು.
ಪೊಲೀಸ್ ಇಲಾಖೆಯ ಆಂತರಿಕ ಭದ್ರತಾ ವಿಭಾಗದಲ್ಲಿ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ (ಕೆ.ಎಸ್.ಐ.ಎಸ್.ಎಫ್) ಎಂಬ ಭದ್ರತಾ ಪಡೆ ಇದ್ದು, ಇದು ಪ್ರಸ್ತುತ ರಾಜ್ಯದ ಎಲ್ಲಾ ಜಲಾಶಯಗಳು ವಿಮಾನ ನಿಲ್ದಾಣಗಳು ಸರ್ಕಾರಿ ಸೂಕ್ಷ್ಮ ಸ್ಥಾವರಗಳು, ಕೇಂದ್ರ ಕಾರಾಗೃಹಗಳು ಭದ್ರತೆಯನ್ನು ಒದಗಿಸುತ್ತಿದೆ. ಅದರಂತೆ ನಮ್ಮ ವಾಣಿವಿಲಾಸ ಜಲಾಶಯಕ್ಕೆ ಭದ್ರತೆಯನ್ನು ಒದಗಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪಿ.ಸೂರಪ್ಪ ಭರಮಸಾಗರ, ಜಿಲ್ಲಾ ಮಹಿಳಾ ಅಧ್ಯಕ್ಷೆ ಪಾಪಮ್ಮ ಲಿಂಗವ್ವನಾಗ್ತಿಹಳ್ಳಿ, ಜಿಲ್ಲಾ ಸಹ ಕಾರ್ಯದರ್ಶಿ ರಾಜಪ್ಪ ಕಾಮಸಮುದ್ರ, ಜಿಲ್ಲಾ ಸಂಚಾಲಕ ಸತೀಶ್‌ಕೋಟೆ ಬ್ಯಾಲಹಾಳ್, ಜಿಲ್ಲಾ ಸಂ.ಕಾರ್ಯದರ್ಶಿ ರಂಗಸ್ವಾಮಿ,
ಗೌರಿರಾಜಪ್ಪ ಕೊಡಳಿಹಟ್ಟಿ, ಅಜ್ಜಪ್ಪ, ಎನ್.ಟಿ.ಶಿವಣ್ಣ, ಸಿದ್ದರಾಜು ಕಾಗಳಗೆರೆ ಗೊಲ್ಲರಹಟ್ಟಿ, ತಿಪ್ಪೇಸ್ವಾಮಿ, ಹಾಲಪ್ಪ ತಣಿಗೆಹಳ್ಳಿ, ಉಮಾಪತಿ ತಣಿಗೆಹಳ್ಳಿ, ನಾಗರಾಜ್, ಶಿವಣ್ಣ ಗೌಡಗೊಂಡನಹಳ್ಳಿ, ತಿಮ್ಮಣ್ಣ, ಶಾಂತಮ್ಮ, ವಸಂತಕುಮಾರ್, ಮಂಜುನಾಥ, ಕೆ.ಪಾಲಯ್ಯ ಮತ್ತಿತರರು ರೈತ ಹೋರಾಟಗಾರರು ಇದ್ದರು.

