ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿ ಸಾವಿಗೆ ಕಾರಣರಾಗಿರುವ ಡಾ.ರೂಪಶ್ರೀಯನ್ನು ಸೇವೆಯಿಂದ ಅಮಾನತ್ತುಪಡಿಸಿ ತನಿಖೆಗೊಳಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ ಕಾರ್ಯಕರ್ತರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿ ಹೋಬಳಿಯ ಜಾಗನೂರಹಟ್ಟಿ ಗ್ರಾಮದ ರೋಜ ಅ.೩೧ ರಂದು ಜಿಲ್ಲಾಸ್ಪತ್ರೆಗೆ ಹೆರಿಗೆಗೆಂದು ದಾಖಲಾಗಿದ್ದಾಗ ಡಾ.ರೂಪಶ್ರಿ ಶಸ್ತ್ರಚಿಕಿತ್ಸೆ ನಡೆಸಿ ಐದು ದಿನಗಳ ಕಾಲ ದಾಖಲು ಮಾಡಿಕೊಂಡು ನಂತರ ಮನೆಗೆ ಕಳಿಸಿಕೊಟ್ಟಿದ್ದು, ನಾಲ್ಕೈದು ಬಾರಿ ಜಿಲ್ಲಾಸ್ಪತ್ರೆಗೆ ಆಗಮಿಸಿ ರೋಜ ತಪಾಸಣೆ ಮಾಡಿಸಿಕೊಂಡು ಹೋಗಿದ್ದರು.
ನಲವತ್ತು ದಿನಗಳಾದರೂ ವಾಸಿಯಾಗದೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಜಾಗದಲ್ಲಿ ರಕ್ತ ಕೀವು ತುಂಬಿಕೊಂಡು ಬಾಣಂತಿ ಮೃತ ಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಹೆರಿಗೆಗೆ ಬರುವವರು ಇಂತಿಷ್ಟು ಹಣ ವೈದ್ಯರಿಗೆ ನೀಡಲೇಬೇಕು. ಹೀಗಾದರೆ ಇಲ್ಲಿಗೆ ಬರುವ ಬಡವರ ಗತಿಯೇನು ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು ಡಾ.ರೂಪಶ್ರಿಯನ್ನು ಅಮಾನತ್ತುಗೊಳಿಸಿ ಮೃತಳ ಕುಟುಂಬಕ್ಕೆ ನ್ಯಾಯ ಒದಗಿಸುವಮತೆ ಒತ್ತಾಯಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ ಜಿಲ್ಲಾಧ್ಯಕ್ಷ ರವಿಕುಮಾರ್‌ನಾಯ್ಕ, ಸಂಘಟನಾ ಕಾರ್ಯದರ್ಶಿ ಓಬಣ್ಣ, ರಾಜ್ಯ ಸಂಘಟನಾ ಕಾರ್ಯದರ್ಶಿ ಅಶೋಕ್, ರೈತ ಘಟಕದ ಮಹಿಳಾ ರಾಜ್ಯಾಧ್ಯಕ್ಷೆ ಅಶ್ವಿನಿ, ಮುತ್ತಯ್ಯ, ಮಂಜಣ್ಣ, ತಿಪ್ಪೇಸ್ವಾಮಿ, ಶಿವಮೂರ್ತಿ ಬಿ. ಅರುಣ್‌ಕುಮಾರ್, ಮಂಜುನಾಥ, ಸುವರ್ಣ, ಶಫಿ, ರಾಘವೇಂದ್ರ, ನಾಗರಾಜ್, ಆಸೀಫುಲ್ಲಾ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.