ಕೇಂದ್ರ ಸರ್ಕಾರದ ತಿದ್ದುಪಡಿ ಮಸೂದೆ ವಿರೋಧಿಸಿ ಲೈಂಗಿಕ ಅಲ್ಪಸಂಖ್ಯಾತರ ಪ್ರತಿಭಟನೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಕೇಂದ್ರ ಸರ್ಕಾರ ಹೊರಡಿಸಿರುವ ಟ್ರಾನ್ಸ್‌ಜೆಂಡರ್ ತಿದ್ದುಪಡಿ-೨೦೨೬ ರ ಮಸೂದೆಯನ್ನು ವಿರೋಧಿಸಿ ಲೈಂಗಿಕ ಅಲ್ಪಸಂಖ್ಯಾತರು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಎದುರು ಶುಕ್ರವಾರ ಮಸೂದೆಯ ಜೆರಾಕ್ಸ್ ಪ್ರತಿಯನ್ನು ದಹಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನನ್ನ ಲಿಂಗತ್ವ ನನ್ನ ಆಯ್ಕೆ, ಸ್ವಯಂ ಗುರುತಿಸುವಿಕೆ ಮಾನವ ಹಕ್ಕು ಎಂಬ ಘೋಷಣೆಗಳನ್ನು ಕೂಗಿದ ಮುಂಗಳಮುಖಿಯರು ಕೇಂದ್ರ ಸರ್ಕಾರ ಕೂಡಲೆ ಈ ಮಸೂದೆಯನ್ನು ಹಿಂದಕ್ಕೆ ಪಡೆಯಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.

- Advertisement - 

ಸ್ಪೂರ್ತಿ ಮಾತನಾಡುತ್ತ ವೈದ್ಯಕೀಯ ತಪಾಸಣೆಗೊಳಗಾಗಿ ಕಡ್ಡಾಯವಾಗಿ ಸರ್ಟಿಫಿಕೇಟ್ ಪಡೆಯಬೇಕೆಂದು ಮಸೂದೆ ಹೇಳುತ್ತದೆ. ಬಲವಂತವಾಗಿ ಯಾರನ್ನಾದರೂ ಸಮ್ಮ ಸಮುದಾಯಕ್ಕೆ ಕರೆದುಕೊಂಡರೆ ಹತ್ತು ವರ್ಷ ಜೈಲು ಶಿಕ್ಷೆ ವಿಧಿಸಲು ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಬಿಲ್ ಮಂಡಿಸಿರುವುದು ಲಿಂಗತ್ವ ಅಲ್ಪಸಂಖ್ಯಾತರಿಗೆ ವಿರೋಧಿಯಾಗಿದೆ. ಇದನ್ನು ನಾವುಗಳು ಸಹಿಸುವುದಿಲ್ಲ ಎಂದು ಕಿಡಿಕಾರಿದರು.

ಡಾ.ಅರುಂಧತಿ ಮಾತನಾಡಿ ೨೦೧೯ ರಲ್ಲಿದ್ದ ಮಸೂದೆಯಿಂದ ನಮಗೆ ಯಾವುದೇ ತೊಂದರೆಯಿರಲಿಲ್ಲ. ಕೇಂದ್ರ ಸರ್ಕಾರ ಹೊರಡಿಸಿರುವ ೨೦೨೬ ರ ಹೊಸ ಮಸೂದೆ ನಮ್ಮ ಹಕ್ಕುಗಳನ್ನು ಸಂಪೂರ್ಣವಾಗಿ ಕಸಿದುಕೊಳ್ಳುತ್ತಿದೆ. ವೈದ್ಯರ ಮುಂದೆ ಹೋಗಿ ನಮ್ಮ ಲಿಂಗತ್ವವನ್ನು ಪರೀಕ್ಷಿಸಿಕೊಂಡು ಸರ್ಟಿಫಿಕೇಟ್ ಪಡೆಯಬೇಕೆಂದರೆ ಹೇಗೆ ಸಾಧ್ಯ.  ಸ್ವಯಂ ಗುರುತಿಸಿಕೊಳ್ಳುವಿಕೆ ನಮ್ಮ ಜನ್ಮಸಿದ್ದ ಹಕ್ಕು. ಪ್ರಜಾಪ್ರಭುತ್ವದಲ್ಲಿ ಸಮಾನವಾಗಿ ಬದುಕುವ ಹಕ್ಕನ್ನು ಸಂವಿಧಾನ ನೀಡಿದೆ. ಹಾಗಾಗಿ ಕೇಂದ್ರ ಸರ್ಕಾರ ಹೊರಡಿಸಿರುವ ಹೊಸ ಮಸೂದೆಯನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿದರು.

- Advertisement - 

ಡಾ.ಬಿ.ಆರ್.ಅಂಬೇಡ್ಕರ್‌ರವರ ಸಂವಿಧಾನದ ಮೌಲ್ಯವನ್ನು ಎತ್ತಿಹಿಡಿಯುವುದಾಗಿ ದೇಶದ ಪ್ರಧಾನಿ ಮೋದಿ ಹೇಳುತ್ತಿದ್ದಾರೆ. ಕೈಯಲ್ಲಿ ಬೆಣ್ಣೆ, ಬಗಲಲ್ಲಿ ದೊಣ್ಣೆ ಎಂಬಂತೆ ಕೇಂದ್ರ ಸರ್ಕಾರ ಲಿಂಗತ್ವ ಅಲ್ಪಸಂಖ್ಯಾತರನ್ನು ಹೊಸ ಮಸೂದೆ ಮೂಲಕ ಕೀಳಾಗಿ ಕಾಣುತ್ತಿರುವುದು ಸರಿಯಲ್ಲ. ತಕ್ಷಣವೆ ಮಸೂದೆಯನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿದರು.
ಚಂದ್ರಮ್ಮ
, ಆವಂತಿಕ, ಅಲೈಕ, ಸಾನಿಯ, ಅಮೂಲ್ಯ, ಹರ್ಷಿಣಿ, ಅನು, ನೂತನ, ರೋಜಿ, ಸುಬ್ಬಲಕ್ಷ್ಮಿ, ವಿದ್ಯಾ, ಕೃಷ್ಣವೇಣಿ, ಅಂಬಿ, ಗೌಸಿ, ಸುಗುಣ, ಹೊಳೆಯಪ್ಪಸಾಕ್ಯ, ಪ್ರಭಾವತಿ ಇವರುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

Share This Article
error: Content is protected !!
";