ಪಿಂಚಣಿದಾರರು ಮತ್ತು ವೇತನದಾರರ ಸಂಘಟನೆಗಳ ಸಮನ್ವಯ ಸಮಿತಿಯಿಂದ ಸೆ.23 ರಂದು ಪ್ರತಿಭಟನೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು;
ಭಾರತೀಯ ಬ್ಯಾಂಕುಗಳ ಸಂಘ ಬ್ಯಾಂಕ್ ನಿವೃತ್ತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ನಿರಾಕರಿಸುತ್ತಿದ್ದು, ಇದರ ವಿರುದ್ಧ ಈ ತಿಂಗಳ 23 ರಂದು ಫ್ರೀಡಂ ಪಾರ್ಕ್ ನಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಬ್ಯಾಂಕ್ ಪಿಂಚಣಿದಾರರು ಮತ್ತು ನಿವೃತ್ತಿ ವೇತನದಾರರ ಸಂಘಟನೆಗಳ ಸಮನ್ವಯ ಸಮಿತಿ ಎಚ್ಚರಿಕೆ ನೀಡಿದೆ.

 ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಪ್ರಧಾನ ಕಾರ್ಯದರ್ಶಿ ಎ. ಎನ್. ಕೃಷ್ಣ ಮೂರ್ತಿ,  ಕಿರಿಯ ಸಿಬ್ಬಂದಿಗೆ ಹೋಲಿಸಿದರೆ 1992 ರಲ್ಲಿ ನಿವೃತ್ತರಾದ ಹಿರಿಯ ಶ್ರೇಣಿಯ ಕಾರ್ಯನಿರ್ವಾಹಕರಿಗೆ ತುಂಬಾ ಕಡಿಮೆ ಪಿಂಚಣಿ ದೊರೆಯುತ್ತಿದೆ. ತಾರತಮ್ಯ ನಿವೃತ್ತರನ್ನು ಬಾಧಿಸುತ್ತಿದ್ದು, ಜೀವನ ನಿರ್ವಹಣೆ ತ್ರಾಸದಾಯಕವಾಗಿದೆ. ಕೈಗೆಟುಕುವ ದರದಲ್ಲಿ ಆರೋಗ್ಯ ವಿಮೆ ದೊರೆಯುತ್ತಿಲ್ಲ.  ವಿಮಾ ವೆಚ್ಚವನ್ನು ನಿವೃತ್ತರೇ ಭರಿಸುತ್ತಾರೆ. ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯ ನಿರ್ದೇಶನದಂತೆ ಆರೋಗ್ಯ ವಿಮೆಯ ವೆಚ್ಚವನ್ನು ಸಂಪೂರ್ಣವಾಗಿ ಭರಿಸುವಂತೆ ಅಥವಾ ಅದಕ್ಕೆ ಗಣನೀಯವಾಗಿ ಸಬ್ಸಿಡಿ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಜೊತೆಗೆ ವಿಮಾ ಕಂತಿನ ಮೇಲೆ ಶೇ 18 ರಷ್ಟು ಜಿ.ಎಸ್.ಟಿ ವಿಧಿಸಿರುವುದು ಮತ್ತೊಂದು ಬರೆ ಎಳೆದಂತಾಗಿದೆ ಎಂದರು.

 ಸಾರ್ವಜನಿಕ ವಲಯದ ಬ್ಯಾಂಕುಗಳ ಮೇಲೆ ಆಡಳಿತಾತ್ಮಕ ನಿಯಂತ್ರಣ ಹೊಂದಿರುವ ಕೇಂದ್ರ ಸರ್ಕಾರ ನಮ್ಮ ಬೇಡಿಕೆ ವಿಚಾರದಲ್ಲಿ ಮೂಕ ಪ್ರೇಕ್ಷಕರಾಗಿ ಉಳಿದಿದೆ. ನಿವೃತ್ತರಿಗೆ ಕಮ್ಯುಟೇಶನ್ ಪಿಂಚಣಿ, ಗ್ರಾಚ್ಯುಟಿ, ಪಿಂಚಣಿ ಆಯ್ಕೆ ಮತ್ತು ದಿನ ಭತ್ಯೆಯಲ್ಲಿನ ಅಸಮಾನತೆಯ ಸಮಸ್ಯೆಗಳನ್ನು ಮೊದಲು ಬಗೆಹರಿಸಬೇಕು. ತಮ್ಮ ಹೋರಾಟವನ್ನು ತೀವ್ರಗೊಳಿಸಲು ಇದೇ 23 ರಂದು  ದೆಹಲಿಯ ಜಂತರ್ ಮಂತರ್ ನಲ್ಲಿ ಧರಣಿ ಮತ್ತು ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ಎಲ್ಲಾ ರಾಜ್ಯ ರಾಜಧಾನಿಗಳಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಹೇಳಿದರು.

 ಪತ್ರಿಕಾ ಗೋಷ್ಠಿಯಲ್ಲಿ  ಕೆ ವಿ ಆಚಾರ್ಯ, ಜಿ ಡಿ ನದಾಫ್, ಅಧ್ಯಕ್ಷರು, ಎಂ ಆರ್ ಗೋಪಿನಾಥ್ ರಾವ್, ರಾಜ್ಯ ಘಟಕದ ಅಧ್ಯಕ್ಷರು, ಎ ಎನ್ ಕೃಷ್ಣ ಮೂರ್ತಿ, ರಾಜ್ಯ ಕಾರ್ಯದರ್ಶಿ, ಭಾಗವಹಿಸಿದ್ದರು

 

 

- Advertisement -  - Advertisement -  - Advertisement - 
Share This Article
error: Content is protected !!
";