ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಕೊಂಗಾಡಿಯಪ್ಪ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್‌ಗಳ ಪ್ರವೇಶಕ್ಕೆ ನಿಷೇಧ ಹೇರಿದ್ದು, ಸದರಿ ಬಸ್ ನಿಲ್ದಾಣದಲ್ಲಿ ಬಿಎಂಟಿಸಿ ಬಸ್‌ಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಇದು ಖಾಸಗಿ ಬಸ್ ಮಾಲೀಕರ ಅಕ್ರೋಶಕ್ಕೆ ಕಾರಣವಾಗಿದ್ದು, ಬಸ್ ನಿಲ್ದಾಣದಲ್ಲಿ ಇಂದು ಪ್ರತಿಭಟನೆ ನಡೆಸಿದರು.
ದೊಡ್ಡಬಳ್ಳಾಪುರ ನಗರದ ಶ್ರೀ ಕೊಂಗಾಡಿಯಪ್ಪ ಬಸ್ ನಿಲ್ದಾಣ ಖಾಸಗಿ ಬಸ್ ಗಳ ನಿಲ್ದಾಣವಾಗಿದ್ದು, 1935 ರಿಂದ ಚಾಲ್ತಿಯಲ್ಲಿದೆ. ದೊಡ್ಡಬಳ್ಳಾಪುರ ಸುತ್ತಮುತ್ತಲಿನ ಊರುಗಳಿಗೆ ಇಲ್ಲಿಂದ ಖಾಸಗಿ ಬಸ್ ಗಳು ಸಂಚಾರ ಮಾಡುತ್ತಿದ್ದವು. ಈ ಬಸ್ ನಿಲ್ದಾಣದಲ್ಲಿ 112 ಖಾಸಗಿ ಬಸ್‌ಗಳು ಸಂಚಾರ ಮಾಡುತ್ತಿದ್ದವು. ಒಂದು ಬಸ್ ಸಂಚಾರ ಆರಂಬಿಸಿದರೆ ಅದರ ಹಿಂದೆ ಸುಮಾರು 15 ಜನ ಬದುಕು ದೂಡಬಹುದು. ಬಸ್ ಮಾಲೀಕರು ಮತ್ತು ಕಾರ್ಮಿಕರು ಇದನ್ನೇ ನಂಬಿ ಜೀವನ ನಡೆಸುತ್ತಿದ್ದರು, ಇದೇ ಸ್ಥಳದಲ್ಲಿ ಬಿಎಂಟಿಸಿ ಬಸ್ ನಿಲ್ದಾಣ, ಖಾಸಗಿ ವಾಹನಗಳ ಅತಿಕ್ರಮ ಪ್ರವೇಶ ನಿಷೇಧಿಸಲಾಗಿದೆ ಎಂಬ ನಾಮ ಫಲಕ ಹಾಕಲಾಗಿದೆ, ಏಕಾಏಕಿ ಹಾಕಲಾಗಿರುವ ನಾಮ ಫಲಕದಿಂದ ಖಾಸಗಿ ಬಸ್ ಮಾಲೀಕರು ಮತ್ತು ಕಾರ್ಮಿಕರ ಅಕ್ರೋಶಕ್ಕೆ ಕಾರಣವಾಗಿದೆ.
ದೊಡ್ಡಬಳ್ಳಾಪುರ ನಗರಸಭೆಯ ಏಕಾಎಕಿ ನಿರ್ಧಾರವನ್ನ ಖಂಡಿಸಿ ಖಾಸಗಿ ಬಸ್ ಮಾಲೀಕರು ಮತ್ತು ಕಾರ್ಮಿಕರ ಸಂಘ ಶ್ರೀಕೊಂಗಾಡಿಯಪ್ಪ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಖಾಸಗಿ ಬಸ್ ಮಾಲೀಕರಾದ ವಿಕ್ರಂ ಅವರು, ಬಿ.ಎಂ.ಟಿ.ಸಿ ಸಂಸ್ಥೆಯವರಿಗೆ ಅನುಕೂಲ ಕಲ್ಪಿಸಲು ಹಳೇ ಖಾಸಗಿ ಬಸ್ ನಿಲ್ದಾಣದಲ್ಲಿ ಅನಧಿಕೃತವಾಗಿ ಖಾಸಗಿ ಬಸ್ ಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಬಿಎಂಟಿಸಿ ಬಸ್ ನಿಲ್ದಾಣ ಎಂದ ಕೂಡಲೇ 200 ಮೀಟರ್ ವ್ಯಾಪ್ತಿಯಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಬಾರದು ಎಂಬ ನಿಯಮವನ್ನೂ ಜಾರಿಗೆ ಮಾಡಿಬಿಡುತ್ತಾರೆ. ಇದರಿಂದ ಖಾಸಗಿ ಬಸ್ ಮಾಲೀಕರು ಮತ್ತು ಕಾರ್ಮಿಕರ ಮೇಲೆ ಹೊಡೆತ ಬೀಳುತ್ತದೆ. ಖಾಸಗಿ ವಾಹನಗಳ ನಿಲುಗಡೆ ಮಾಡದಂತೆ ಅಳವಡಿಸಿರುವ ನಾಮಫಲಕವನ್ನು ನಗರಸಭೆ ಈ ಕೂಡಲೇ ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.
ಎರಡು-ಮೂರು ದಿನಗಳ ಹಿಂದೆ ಬಿ.ಎಂ.ಟಿ.ಸಿ. ಸಂಸ್ಥೆಯವರು ಖಾಸಗಿ ಬಸ್ ನಿಲ್ದಾಣಕ್ಕೆ ಬಂದು ಏಕಾಏಕಿ ಖಾಸಗಿ ಬಸ್‌ಗಳಿಗೆ ನಿರ್ಬಂಧ ಹಾಗೂ ಪ್ರವೇಶಿಸಿದರೆ ದಂಡ ವಿಧಿಸುವುದಾಗಿ ಒಂದು ಎಚ್ಚರಿಕೆ ಕೊಡುವ ಅನಧಿಕೃತ ನಾಮಫಲಕ ಅಳವಡಿಸಿರುತ್ತಾರೆ. ಈ ವಿಷಯದ ಬಗ್ಗೆ, ಸರ್ಕಾರವಾಗಲಿ, ದೊಡ್ಡಬಳ್ಳಾಪುರ ನಗರಸಭೆಯವರಾಗಲಿ ಯಾವುದೇ ರೀತಿಯ ಪ್ರಕಟಣೆಯಾಗಲಿ ಅಥವಾ ನೋಟೀಸ್ ನೀಡಿರುವುದಿಲ್ಲ, ಬಿಎಂಟಿಸಿ ಸಂಸ್ಥೆ ಇವತ್ತು ಬೋರ್ಡ್ ಹಾಕುವ ಮೂಲಕ ನಮ್ಮನ್ನು ಇಲ್ಲಿಂದ ತೆರವುಗೊಳಿಸಲು ಮುಂದಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.
ದಯಮಾಡಿ ನಗರಸಭೆ ಅಧಿಕಾರಿಗಳು ಆನಧಿಕೃತ ನಾಮಫಕಲವನ್ನು ಕೂಡಲೇ ತೆರವುಗೊಳಿಸಲು ಸಂಬಂಧ ಪಟ್ಟವರಿಗೆ ಆದೇಶಿಸಬೇಕಾಗಿ ವಿನಂತಿಸಿದರು.
ಈ ಸಂದರ್ಭದಲ್ಲಿ ಖಾಸಗಿ ಬಸ್ ಮಾಲೀಕರು ಮತ್ತು ಕಾರ್ಮಿಕರಾದ ಪ್ರಶಾಂತ್, ಕುಮಾರಸ್ವಾಮಿ ಮೊದಲಿಯಾರ್, ಗೀತೇಶ್, ರುದ್ರಪ್ಪ, ಹನೀಶ್, ರಾಮಕೃಷ್ಣಪ್ಪ ಶಿವಕುಮಾರ್ ಸೇರಿದಂತೆ ಖಾಸಗಿ ಬಸ್ ನ ಹಲವಾರು ಮಾಲೀಕರು ಉಪಸ್ಥಿತರಿದ್ದರು.