ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಹೈಕೋರ್ಟ್‌ನ ಹಿರಿಯ ವಕೀಲ ವೈ.ಆರ್.ಸದಾಶಿವರೆಡ್ಡಿರವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವವರ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಿ ವಕೀಲರುಗಳಿಗೆ ರಕ್ಷಣೆ ನೀಡುವಂತೆ ವಕೀಲರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ತೋಳಿಗೆ ಕೆಂಪು ಪಟ್ಟಿ ಧರಿಸಿ ನ್ಯಾಯಾಲಯದ ಆವರಣದಿಂದ ಮೆರವಣಿಗೆ ಮೂಲಕ ಆಗಮಿಸಿದ ವಕೀಲರುಗಳು ಆರೋಪಿಗಳ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
ಭಾರತೀಯ ವಕೀಲರ ಪರಿಷತ್ತಿನ ಉಪಾಧ್ಯಕ್ಷ, ಕರ್ನಾಟಕ ವಕೀಲರ ಪರಿಷತ್ತಿನ ಸದಸ್ಯರಾಗಿರುವ ನ್ಯಾಯವಾದಿ ವೈ.ಆರ್.ಸದಾಶಿವರೆಡ್ಡಿರವರ ಕಚೇರಿಗೆ ಕಳೆದ ೧೪ ರಂದು ನುಗ್ಗಿದ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ವಕೀಲರುಗಳ ರಕ್ಷಣೆಗಾಗಿಯೇ ಕಾಯ್ದೆ ಜಾರಿಯಾಗಿದ್ದರೂ ವಕೀಲರುಗಳ ಮೇಲೆ ನಡೆಯುತ್ತಿರುವ ಹಲ್ಲೆಗಳು ಇನ್ನು ನಿಂತಿಲ್ಲ. ಇದರಿಂದ ವಕೀಲರುಗಳ ಸಮುದಾಯದಲ್ಲಿ ಭಯ ಮೂಡಿಸಿದೆ. ವಕೀಲರ ಸಂರಕ್ಷಣಾ ಕಾಯಿದೆಯನ್ನು ಇನ್ನಷ್ಟು ಬಲಪಡಿಸಿ ವಕೀಲರುಗಳ ಮೇಲೆ ಹಲ್ಲೆಯಾಗದಂತೆ ಸರ್ಕಾರ ಕಟ್ಟೆಚ್ಚರ ವಹಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ, ಉಪಾಧ್ಯಕ್ಷ ಬಿ.ಎಂ.ಅನಿಲ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಆರ್.ಗಂಗಾಧರ್, ಖಚಾಂಚಿ ಬಿ.ಇ.ಪ್ರದೀಪ್
ಜಂಟಿ ಕಾರ್ಯದರ್ಶಿ ಗಿರೀಶ್ ಬಿ. ವಕೀಲರುಗಳಾದ ಬೀಸ್ನಳ್ಳಿ ಜಯಣ್ಣ, ರವೀಂದ್ರ, ಸುರೇಶ್, ದಾಸಪ್ಪ, ಮೊಹಮದ್ ಇಮ್ರಾನ್, ಹರೀಶ್ ಎನ್, ಬಿ.ಎ.ರಾಜೀವ್ ಆರ್.ಧನಂಜಯ, ಅಶೋಕ್‌ಬೆಳಗಟ್ಟ, ಎನ್.ಎಸ್.ವರುಣ, ಆರ್.ರವಿ, ರೂಪದೇವಿ ಬಿ.ಎನ್, ಶೀಲ ಪಿ, ನೂರುಲ್ಲಾ ಹಸನ್, ನಜೀಬುಲ್ಲಾ, ಪ್ರಕಾಶ್, ಶಿವಣ್ಣರೆಡ್ಡಿ ತಿಪ್ಪೇಸ್ವಾಮಿ, ಸಾವಿತ್ರಿ, ಮುಬಿನಾಬೇಗಂ, ಮಂಜುಳ, ಪವಿತ್ರ, ಉಷ ಸೇರಿದಂತೆ ನೂರಾರು ವಕೀಲರುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.