ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಶಾಲಾ ಮಕ್ಕಳ ಪ್ರವೇಶಕ್ಕೆ ಕನಿಷ್ಠ ವಯಸ್ಸಿನ ವಯೋಮಿತಿ ಸಡಿಲಿಸುವಂತೆ ಒತ್ತಾಯಿಸಿ ತಾಲೂಕು ಕನ್ನಡ ಪಕ್ಷ, ಶಿವರಾಜ್ ಅಭಿಮಾನಿಗಳ ಸಂಘ, ಕನ್ನಡ ಜಾಗೃತ ಪರಿಷತ್ ಸೇರಿದಂತೆ ಹಲವು ಪ್ರಗತಿ ಪರ ಸಂಘಟನೆಗಳ ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಒತ್ತಾಯಿಸಿಲಾಯಿತು.
ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವ್ ನಾಯಕ್ ಮಾತನಾಡಿ ಒಂದನೇ ತರಗತಿ ಪ್ರವೇಶ ಪಡೆಯುವ ಮಕ್ಕಳಿಗೆ ಆರು ವರ್ಷಗಳು ಕಡ್ಡಾಯ ಎಂಬ ರಾಜ್ಯ ಸರ್ಕಾರದ ಆದೇಶ ಅವೈಜ್ಞಾನಿಕವಾಗಿದೆ. ನರ್ಸರಿ, ಎಲ್. ಕೆ. ಜಿ., ಯು. ಕೆ. ಜಿ. ಓದಿದ ಮಕ್ಕಳು ಒಂದನೇ ತರಗತಿ ಪ್ರವೇಶಕ್ಕೆ ಆರು ವರ್ಷ ತುಂಬುವವರೆಗೂ ಕಾಯಬೇಕಿದೆ. ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಒಂದನೇ ತರಗತಿಗೆ ಪ್ರವೇಶ ಪಡೆಯುವಂತಿಲ್ಲ. ಸಿದ್ದರಾಮಯ್ಯ ಸರ್ಕಾರದ ಈ ಆದೇಶ ಯು. ಕೆ. ಜಿ. ಓದುತ್ತಿರುವ ರಾಜ್ಯದ ಸುಮಾರು ಆರು ಲಕ್ಷ ಮಕ್ಕಳ ಒಂದು ವರ್ಷದ ಭವಿಷ್ಯವನ್ನು ಹಾಳು ಮಾಡುತ್ತದೆ. ಅಷ್ಟೇ ಅಲ್ಲದೆ ವ್ಯರ್ಥವಾಗುವ ಒಂದು ವರ್ಷ ಮತ್ತು ಯು. ಕೆ. ಜಿ. ಯಲ್ಲಿಯೇ ಮುಂದುವರೆಯಬೇಕು.
ಸಾಲದಕ್ಕೆ ಪೋಷಕರಿಗೆ ಒಂದು ವರ್ಷದ ಹೆಚ್ಚುವರಿಯಾಗಿ ಎಪ್ಪತ್ತು ಸಾವಿರ ಶಿಕ್ಷಣ ವೆಚ್ಚ ಹೊರೆಯಾಗಲಿದೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರು ಸಹ ಪ್ರಾಥಮಿಕ ಪ್ರೌಢ ಶಿಕ್ಷಣ ಮಂತ್ರಿ ಮಧು ಬಂಗಾರಪ್ಪ ಯಾವುದೇ ಪೂರ್ವಪರ ಚಿಂತನೆಗಳಿಲ್ಲದೆ ಹೊಸ ನೀತಿ ಜಾರಿಗೆ ಆದೇಶಿಸಿರುವುದು ತೀರಾ ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಅವೈಜ್ಞಾನಿಕವಾಗಿ ಈ ಆದೇಶ ಕೈ ಬಿಟ್ಟು ಹಳೆಯ ಶಿಕ್ಷಣ ನೀತಿಯನ್ನೇ ಮುಂದುವರೆಸಬೇಕು. ಇಲ್ಲವಾದಲ್ಲಿ ರಾಜ್ಯದ ಎಲ್ಲಾ ಕನ್ನಡ ಪರ, ರೈತಪರ, ದಲಿತ ಪರ, ಪ್ರಗತಿಪರ ಸಂಘಟನೆಗಳು ಸರ್ಕಾರದ ವಿರುದ್ಧ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಸಂಜೀವ್ ನಾಯಕ್ ಎಚ್ಚರಿಸಿದರು.
ಪ್ರಗತಿಪರ ಚಿಂತಕ ಗುರುರಾಜಪ್ಪ ಮಾತನಾಡಿ ಶೈಕ್ಷಣಿಕವಾಗಿ ಕನಿಷ್ಠ ಪ್ರಜ್ಞೆ ಇಲ್ಲದ ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ಆದೇಶ ಹಾಸ್ಯಾಸ್ಪದವಾಗಿದೆ. ಸಾಲದಕ್ಕೆ ಮಕ್ಕಳ ಭವಿಷ್ಯ ಹಾಗೂ ಬಡ ಪೋಷಕರಿಗೆ ಹೊರೆ ಎನಿಸುವ ಸರ್ಕಾರದ ಹೊಸ ಶಿಕ್ಷಣ ನೀತಿ ತೀರಾ ಅವೈಜ್ಞಾನಿಕವಾಗಿದ್ದು ಈ ಕೂಡಲೇ ಸರ್ಕಾರ ಹೊಸ ಆದೇಶ ಹಿಂಪಡೆದು ಹಳೆಯ ಶಿಕ್ಷಣ ನೀತಿ ಮುಂದುವರೆಸಬೇಕು. ಜೊತೆಗೆ ಅವೈಜ್ಞಾನಿಕ ನೀತಿಯನ್ನು ಆದೇಶಿಸಿದ ವಿದ್ಯಾಮಂತ್ರಿ ಮಧು ಬಂಗಾರಪ್ಪನವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕು. ಇಲ್ಲವಾದಲ್ಲಿ ರಾಜ್ಯ ವ್ಯಾಪಿ ಉಗ್ರ ಹೋರಾಟವನ್ನು ಸರ್ಕಾರದ ವಿರುದ್ಧ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಕನ್ನಡ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ. ಪಿ. ಆಂಜನೇಯ ಮಾತನಾಡಿ ಒಂದನೇ ತರಗತಿಗೆ ಮಕ್ಕಳು ಪ್ರವೇಶ ಪಡೆಯುವ ವಯಸ್ಸಿನ ವಿಚಾರವು ರಾಜ್ಯದಲ್ಲಿ ಪೋಷಕರ ಕಳವಳಕ್ಕೆ ಕಾರಣವಾಗಿದೆ. ಒಂದನೇ ತರಗತಿ ಪ್ರವೇಶಕ್ಕೆ ಮಕ್ಕಳಿಗೆ ಕಡ್ಡಾಯವಾಗಿ ಆರು ವರ್ಷ ಪೂರೈಸಿರಬೇಕು ಎನ್ನುವ ರಾಜ್ಯ ಸರ್ಕಾರದ 2022ರ ಅವೈಜ್ಞಾನಿಕ ಆದೇಶವನ್ನು ಶಾಲೆಗಳು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಪಾಲಿಸಲು ಮುಂದಾಗಿವೆ.
ಇದರಿಂದ ರಾಜ್ಯದ ಲಕ್ಷಾಂತರ ಮಕ್ಕಳು ಮತ್ತೊಂದು ವರ್ಷ ಯು. ಕೆ. ಜಿ. ಯಲ್ಲೇ ಕೊಳೆಯಬೇಕಾಗುತ್ತದೆ. ಇದರಿಂದ ಪೋಷಕರ ಆರ್ಥಿಕ ಹೊರೆ ಹಾಗೂ ಮಕ್ಕಳ ಮಾನಸಿಕ ಸ್ಥಿತಿ ಗಮನದಲ್ಲಿಟ್ಟುಕೊಂಡು 1983ರ ಶಿಕ್ಷಣ ನೀತಿಯನ್ನು ಮುಂದುವರೆಸಬೇಕೆಂದು ಪೋಷಕರ ಒತ್ತಾಯವಾಗಿದೆ. ವರ್ಷಮ್ ಪ್ರತಿ ಇದೆ ಸಮಸ್ಯೆ ಉದ್ಭವಿಸುವುದರಿಂದ ನಿಯಮದ ಪ್ರಕಾರ 2025 ಜೂನ್ 1ಕ್ಕೆ ಆರು ವರ್ಷ ತುಂಬಲಿರುವ ಮಕ್ಕಳಿಗೆ ಒಂದನೇ ತರಗತಿ ಪ್ರವೇಶದ ಸರ್ಕಾರದ ಆದೇಶವನ್ನು ಮರು ಪರಿಶೀಲಿಸ ಬೇಕು. ಇದೆ ಆದೇಶ ಮುಂದುವರೆದರೆ ರಾಜ್ಯದ ಎಲ್ಲಾ ಸಂಘಟನೆಗಳೊಂದಿಗೆ ವಿಧಾನ ಸೌಧಕ್ಕೆ ಮುತ್ತಿಗೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಆಂಜನೇಯ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಕನ್ನಡ ಜಾಗೃತ ಪರಿಷತ್ ಅಧ್ಯಕ್ಷ ಕೆ. ವೆಂಕಟೇಶ್, ತಾಲೂಕು ಕನ್ನಡ ಪಕ್ಷದ ಅಧ್ಯಕ್ಷ ವೆಂಕಟೇಶ್, ಜಿಲ್ಲಾಧ್ಯಕ್ಷ ಮುನಿ ಪಾಪಯ್ಯ, ವಿ. ಪರಮೇಶ, ಕೇಬಲ್ ಮುನಿರಾಜ್, ಮಂಜುನಾಥ್, ರಂಗನಾಥ್, ಬೋರೇಗೌಡ, ಕುಮಾರ್, ಸೂರಿ, ರಾಮಚಂದ್ರ, ರಾಮು, ಆನಂದ್, ಚಂದ್ರಣ್ಣ, ಮುನಿಸ್ವಾಮಿ ಸೇರಿದಂತೆ ವಿವಿಧ ಸಂಘಟನೆಗಳ ಹಲವಾರು ಮುಖಂಡರು ಭಾಗವಹಿಸಿದ್ದರು.