ಮುಖ್ಯಮಂತ್ರಿ ಮತ್ತು ಜಿಲ್ಲಾಧಿಕಾರಿಯ ಪ್ರೋಟೋಕಾಲ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯಮಂತ್ರಿ ಮತ್ತು ಜಿಲ್ಲಾಧಿಕಾರಿಯ ಪ್ರೋಟೋಕಾಲ್……ಅಹಂಕಾರ – ಸ್ವಾಭಿಮಾನ – ಪ್ರೋಟೋಕಾಲ್ – ಸಾರ್ವಜನಿಕ ಸಭ್ಯತೆ – ನಾಗರಿಕತೆ – ಸಹಜ ಮಾನವೀಯತೆ – ಸಾಮಾನ್ಯ ಜ್ಞಾನ – ಭವಿಷ್ಯ ಮಕ್ಕಳಿಗೆ ಆದರ್ಶ………

 ಕ್ಷಮಿಸಿ, ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿಯಾದ ಶ್ರೀ ದಿವಾಕರ್ ರವರೇ, ಹಾಗೆಯೇ ಮಾನ್ಯ ಮುಖ್ಯಮಂತ್ರಿಗಳೇ ಇನ್ನೊಂದಿಷ್ಟು ಸಾರ್ವಜನಿಕವಾಗಿ ತಾಳ್ಮೆ ಹೆಚ್ಚು ಮಾಡಿಕೊಳ್ಳಿ……

 ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ವೈಚಾರಿಕ ಸ್ಪಷ್ಟತೆಗೆ, ಆಡಳಿತಾತ್ಮಕ ದಕ್ಷತೆಗೆ, ಸಾಮಾಜಿಕ ನ್ಯಾಯಕ್ಕೆ ರಾಜ್ಯದ ಮತ್ತು ರಾಷ್ಟ್ರದ ರಾಜಕೀಯ ನಾಯಕರ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಅದಕ್ಕೆ ಹೆಮ್ಮೆ ಇದೆ. ಆದರೆ ಹಾಗೆಯೇ ಅವರ ಮೇಲೆ ಅಧಿಕಾರಮೋಹಿ ಮತ್ತು ದುರಹಂಕಾರಿ ಎಂಬ ಆರೋಪವು ಇದೆ. ಇದೀಗ ಆ ದುರಹಂಕಾರದ ಆರೋಪಕ್ಕೆ ಮತ್ತಷ್ಟು ಪುಷ್ಟಿ ನೀಡುವಂತೆ ವೇದಿಕೆಯ ಮೇಲೆ ಜಿಲ್ಲಾಧಿಕಾರಿಯನ್ನು ನಡೆಸಿಕೊಂಡ ರೀತಿ ಒಂದು ಸಾಕ್ಷಿಯಾಗಿ ದೊರೆತಿದೆ……

 ಇತ್ತೀಚೆಗೆ ಹೊಸದಾಗಿ ರಚನೆಯಾದ ವಿಜಯನಗರ ಜಿಲ್ಲೆಯ ಒಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭಾಷಣ ಮಾಡುವಾಗ ವೇದಿಕೆಯ ಮೇಲಿದ್ದ ಗಣ್ಯರ ಹೆಸರುಗಳನ್ನು ಹೇಳುತ್ತಾ ಭಾಷಣ ಮಾಡುತ್ತಿದ್ದರು. ಹಾಗೆ ಅದೇ ವೇದಿಕೆಯ ಮೇಲೆ ಸ್ವಾಮೀಜಿ ಅವರ ಪಕ್ಕ ಕುಳಿತಿದ್ದ ಒಬ್ಬ ವ್ಯಕ್ತಿಯನ್ನು ಕರೆದು ನೀವ್ಯಾರು ಎಂದು ಕೇಳಿದರು. ಅದಕ್ಕೆ ಅವರು ನಾನು ಜಿಲ್ಲಾಧಿಕಾರಿ ಎಂದು ಹೇಳಿದಾಗ, ನೀನು ಇಲ್ಲೇಕೆ ಕುಳಿತಿದ್ದೀಯಾ ಆಚೆ ಹೋಗು ಎಂದು ಮಾಧ್ಯಮಗಳ ಮುಂದೆ, ಸಾರ್ವಜನಿಕರ ಮುಂದೆ  ಅವರನ್ನು ಕೆಳಗಿಳಿಸಿದರು…..

 ಸ್ವಾಭಿಮಾನ ಇರುವ ಯಾವುದೇ ವ್ಯಕ್ತಿಗೆ ಇದು ಭಯಂಕರ ಅವಮಾನವಾದಂತೆ. ಏಕೆಂದರೆ ಭದ್ರತಾ ದೃಷ್ಟಿಯನ್ನು ಹೊರತುಪಡಿಸಿ ಯಾವುದೇ ವ್ಯಕ್ತಿಯನ್ನು ಆ ರೀತಿ ಹೊರಕಳಿಸುವುದು ಅಮಾನವೀಯ. ಅದರಲ್ಲೂ ಆ ವ್ಯಕ್ತಿ ತಾನು ಜಿಲ್ಲಾಧಿಕಾರಿ ಎಂದು ಹೇಳಿದ ನಂತರವೂ ಮುಖ್ಯಮಂತ್ರಿಗಳ ನಡವಳಿಕೆ, ಆಕ್ಷೇಪಾರ್ಹ……

 ಶಿಷ್ಟಾಚಾರ (ಪ್ರೋಟೋಕಾಲ್ ) ಏನಿದೆಯೋ ಗೊತ್ತಿಲ್ಲ. ಆ ಸಂದರ್ಭ, ಸನ್ನಿವೇಶದಲ್ಲಿ ಒಂದು ವೇಳೆ  ಜಿಲ್ಲಾಧಿಕಾರಿಯವರಿಂಧ ಶಿಷ್ಟಾಚಾರದ ಉಲ್ಲಂಘನೆ ಆಗಿದ್ದರೂ ಅದು ದೊಡ್ಡ ಪ್ರಮಾದವೇನು ಅಲ್ಲ. ಅದನ್ನು ಬೇರೆ ರೀತಿಯಲ್ಲಿ, ನಿಧಾನವಾಗಿ ಬಗೆಹರಿಸಬಹುದಿತ್ತು. ಇದು  ಒಳ್ಳೆಯ ಬೆಳವಣಿಗೆಯಲ್ಲ…..‌‌

 ದರ್ಶನ್ ಎಂಬ ಮತ್ತೊಬ್ಬ ಅಹಂಕಾರಿ ರೇಣುಕಾ ಸ್ವಾಮಿಯಂತ ವಿಕೃತ ಕಾಮಿಯ ಉಪಟಳ ನಿವಾರಿಸಿಕೊಳ್ಳಲು ತಾಳ್ಮೆಯಿಂದ ಯೋಚಿಸಿದ್ದರೆ ಅನೇಕ ಅತ್ಯಂತ ಸಹಜ ಪರ್ಯಾಯ ಮಾರ್ಗಗಳಿದ್ದವು. ಆದರೆ ಆತನೊಳಗಿನ ಅಹಂಕಾರ ಅದನ್ನು ಯೋಚಿಸಲು ಬಿಡದೆ ಕೊಲೆ ಮಾಡಿಸಿತು. ಸಿದ್ದರಾಮಯ್ಯನವರ ಪ್ರಕರಣ ಅಷ್ಟು ಗಂಭೀರವಲ್ಲದಿದ್ದರೂ ಅವರೊಳಗಿನ ಅಹಂಕಾರ ಗೆಲ್ಲಲು  ಸಮಾಜವಾದಿಗೆ ಸಾಧ್ಯವಾಗಲಿಲ್ಲ……

 ಮೊದಲಿಗೆ ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿರುವುದು ಸಿದ್ದರಾಮಯ್ಯನವರು ಸಹ ಸರ್ಕಾರದ ಕೂಲಿಯೇ, ಜಿಲ್ಲಾಧಿಕಾರಿಯೂ ಸಹ ಸರ್ಕಾರದ ಕೂಲಿಯೇ. ಇಬ್ಬರೂ ಸಾರ್ವಜನಿಕ ತೆರಿಗೆ ಹಣದ ಉದ್ಯೋಗಿಗಳೇ. ಅವರವರ ಕೆಲಸ ಅವರವರದು……

 ಅದಕ್ಕಿಂತ ಹೆಚ್ಚಾಗಿ ಆ ಸ್ವಾಮೀಜಿಯ ಪಕ್ಕದಲ್ಲಿ ಜಿಲ್ಲೆಯ ಆಡಳಿತದ ಮುಖ್ಯಸ್ಥರು ವೇದಿಕೆಯ ಮೇಲೆ ಕುಳಿತಿದ್ದಾಗ ಯಾರಿಗೂ ಏನೂ ಅಂತಹ ತೊಂದರೆ ಇರಲಿಲ್ಲ. ಸಮಸ್ಯೆಯೂ ಇರಲಿಲ್ಲ. ಸುಮ್ಮನೆ ತನ್ನ ಅಹಂಕಾರವನ್ನು ತೋರಿಸಲಿಕ್ಕೆ ಸಿದ್ದರಾಮಯ್ಯನವರು ಅವರನ್ನು ಕೆಳಗಿಳಿಸಿದರು. ಬೇರೆ ರಾಜ್ಯದ ಮುಖ್ಯಮಂತ್ರಿಗಳು, ಕೆಲವೊಮ್ಮೆ ಪರೋಕ್ಷವಾಗಿ ಈ ದೇಶದ ಪ್ರಧಾನಮಂತ್ರಿಯೂ ಈ ರೀತಿಯ ವರ್ತಿಸಿದ ಉದಾಹರಣೆಗಳು ಇದೆ.  ಇದೀಗ ಈ ಘಟನೆ ಇತ್ತೀಚಿನದಾಗಿರುವುದರಿಂದ ಇದರ ಬಗ್ಗೆ ಹೇಳಬೇಕಾಗಿದೆ…..

 ಜಿಲ್ಲಾಧಿಕಾರಿಯವರ ಕುಟುಂಬ, ಅವರ ಮನೆ, ಸ್ನೇಹಿತರು, ಅವರ ಸಹಪಾಠಿಗಳು, ಸಾಮಾನ್ಯ ಜನರು ಈ ದೃಶ್ಯಗಳನ್ನು ಪದೇಪದೇ ಟಿವಿಯಲ್ಲಿ ನೋಡಿದಾಗ ಆ ವ್ಯಕ್ತಿ ಅದರ ಬಗ್ಗೆ ಯಾವ ಭಾವನೆ ಹೊಂದಬಹುದು. ನಿಜಕ್ಕೂ ಸ್ವಾಭಿಮಾನಿಗಳಿಗೆ ತುಂಬಾ ನೋವಾಗುತ್ತದೆ……. 

 ಒಬ್ಬ ಜಿಲ್ಲಾಧಿಕಾರಿ ಮುಖ್ಯಮಂತ್ರಿಗಳ ಸಮಾರಂಭದಲ್ಲಿ ಅಥವಾ ಪ್ರಧಾನ ಮಂತ್ರಿಗಳ ಕೊನೆಯ ಸೀಟಿನಲ್ಲಿ ಕುಳಿತರೆ ದೇಶವೇನು ಮುಳುಗುವುದಿಲ್ಲ. ಅಲ್ಲದೆ ಈಗ ಇರುವ ಮಾಹಿತಿಯ ಪ್ರಕಾರ ಈ ಜಿಲ್ಲಾಧಿಕಾರಿ ಒಂದಷ್ಟು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರಂತೆ.. ಏನೇ ಆಗಲಿ ಅದು ಅವರ ಕರ್ತವ್ಯ. ಜಿಲ್ಲಾಧಿಕಾರಿ ತಪ್ಪು ಮಾಡಿದ್ದಲ್ಲಿ ಅವರನ್ನು ನಿರ್ದಾಕ್ಷಿಣ್ಯವಾಗಿ ವಜಾ ಮಾಡಲಿ, ಅದು ಬೇರೆ ವಿಷಯ. ಆದರೆ ಸಾರ್ವಜನಿಕವಾಗಿ ಈ ರೀತಿಯ ದುರಹಂಕಾರದ ನಡವಳಿಕೆಗಳು ಸ್ವೀಕಾರಾರ್ಹವಲ್ಲ……

 ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳ ಕ್ಷಮೆಯನ್ನು ಕೇಳಬೇಕು. ಅದು ಅವರ ದೊಡ್ಡತನವಾಗುತ್ತದೆ. ಹಾಗೆ ಮಾನ್ಯ ಜಿಲ್ಲಾಧಿಕಾರಿ ದಿವಾಕರ್ ಅವರಿಗೂ ಇದು ಪಾಠವಾಗಬೇಕು. ಮುಂದೆ ಸಾರ್ವಜನಿಕರ ಯಾರೇ ಆಗಿರಲಿ ನಿಮಗಾದ ಅನುಭವವನ್ನು ಸಾರ್ವಜನಿಕರು ಅಥವಾ ನಿಮ್ಮ ಕೆಳಗಿನ ಅಧಿಕಾರಿಗಳಿಗೆ ಮಾಡಬೇಡಿ. ಶಿಷ್ಟಾಚಾರ ಅನುಸರಿಸಿ, ಆದರೆ ಎಲ್ಲಕ್ಕಿಂತ ಮುಖ್ಯ ಮಾನವೀಯತೆ, ಸಭ್ಯತೆ ಮತ್ತು ಸಾಮಾನ್ಯ ಜ್ಞಾನ. ಅದನ್ನು ಮಾತ್ರ ಯಾರೂ ಯಾವ ಸಂದರ್ಭದಲ್ಲೂ ಮರೆಯಬಾರದು. ….

 ಈ ದೇಶ ಬಿಕ್ಷುಕನಿಂದ ರಾಷ್ಟ್ರಪತಿಯವರಿಗೆ ಎಲ್ಲರಿಗೂ ಸಮಾನ ಹಕ್ಕು, ಸ್ವಾತಂತ್ರ್ಯ ನೀಡಿದೆ. ಯಾರೂ ದೊಡ್ಡವರಲ್ಲ. ಎಲ್ಲರೂ ಉದ್ಯೋಗಿಗಳು ಮಾತ್ರ, ಬೇರೆ ಬೇರೆ ರೂಪ ಇರಬಹುದು ಅಷ್ಟೇ. ಕಾರ್ಯಾಂಗದ ಜಿಲ್ಲಾಧಿಕಾರಿ ಹೆಚ್ಚು ಕಡಿಮೆ ಶಾಸಕಾಂಗದ ಮಂತ್ರಿ ಸ್ಥಾನಕ್ಕೆ ಸಮ ಇದ್ದಂತೆ……

 ಆದ್ದರಿಂದ ಮುಖ್ಯಮಂತ್ರಿಗಳೇ ನಿಮ್ಮ ಮೇಲಿರುವ ಆರೋಪವನ್ನು ವಿಮರ್ಶೆ ಮಾಡಿಕೊಂಡು ಒಂದಷ್ಟು ಸರಿಪಡಿಸಿಕೊಳ್ಳಿ. ಒಂದು ರೀತಿಯಲ್ಲಿ ಇದು ನಿರ್ಲಕ್ಷಿಸಬಹುದಾದ ಸಣ್ಣ ವಿಷಯವೇನೋ ಸರಿ, ಇನ್ನೊಂದಷ್ಟು ವಾದಗಳು ಜಿಲ್ಲಾಧಿಕಾರಿಯ ಪ್ರೋಟೋಕಾಲ್ ಉಲ್ಲಂಘನೆಯ ಬಗ್ಗೆಯೂ ಹೇಳಬಹುದು, ಆದರೆ ಅದೆಲ್ಲಕ್ಕಿಂತ ಮುಖ್ಯ ಇಲ್ಲಿ ಸ್ವಾಭಿಮಾನದ, ಅಹಂಕಾರದ, ಮಾನವ ಸಂವೇದನೆಯ ಸೂಕ್ಷ್ಮ ಪ್ರಜ್ಞೆ ಜಾಗೃತವಾಗಬೇಕು. ಆ ಕಾರಣದಿಂದ ವಿಷಯ ಸಣ್ಣದಾದರೂ ಈ ಒಂದು ಅಭಿಪ್ರಾಯ………

 ಏಕೆಂದರೆ ಈ ಭಾರತೀಯ ಸಮಾಜದಲ್ಲಿ ಈ ರೀತಿಯ ಅನೇಕ ಘಟನೆಗಳು ಬಡವರು ಶ್ರೀಮಂತರ ನಡುವೆ, ಉಳ್ಳವರು ಇಲ್ಲದವರ ನಡುವೆ, ವಿದ್ಯಾವಂತರು ಅನಕ್ಷರಸ್ಥರ ನಡುವೆ, ನಗರ ಪ್ರದೇಶದವರು ಹಳ್ಳಿಗರ ನಡುವೆ, ಒಳ್ಳೆಯ ಬಟ್ಟೆಯವರು ಹಳೆಯ ಹರಿದ ಬಟ್ಟೆಯವರ ನಡುವೆ, ಬಲಾಢ್ಯರು ಮತ್ತು ದುರ್ಬಲರ ನಡುವೆ, ರಾಜಕಾರಣಿಗಳು ಮತ್ತು ಸಾಮಾನ್ಯರ ನಡುವೆ, ಅಧಿಕಾರಿಗಳು ಮತ್ತು ಸಾಮಾನ್ಯರ ನಡುವೆ ಬಹಳಷ್ಟು ತಾರತಮ್ಯ, ಮೇಲು-ಕೀಳು ಮುಂತಾದ ಅವಮಾನಗಳು ನಡೆಯುತ್ತಿವೆ. ಆದ್ದರಿಂದಲೇ ಇದನ್ನು ಗಂಭೀರವಾಗಿ ಪರಿಗಣಿಸಿ ದಾಖಲು ಮಾಡಲಾಗಿದೆ……. ಲೇಖನ:ವಿವೇಕಾನಂದ. ಎಚ್. ಕೆ. 9844013068……….

- Advertisement -  - Advertisement - 
Share This Article
error: Content is protected !!
";