ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ದುರ್ವತನೆ ಮಾಡಿದ ಪಿಎಸ್ಐ ಗಾದಿ ಲಿಂಗ ಗೌಡರ್ ಪೊಲೀಸ್ ಅಧಿಕಾರಿಯೋ ಅಥವಾ ರೌಡಿಯೋ ತಿಳಿಯುತ್ತಿಲ್ಲ. ರಸ್ತೆ ಮೇಲೆ ಮಾತನಾಡಿಕೊಂಡು ನಿಂತಿರುವ ಸಂದರ್ಭದಲ್ಲಿ ಏಕಾಏಕಿ ಪಿಎಸ್ಐ ಬಂದು ಹನುಮಂತೇಗೌಡರ ಮೇಲೆ ಮರಣಾಂತಿವಾಗಿ ಹಲ್ಲೆ ಮಾಡಿ ದುರ್ವತನೆ ಮೆರೆದಿರುವ ಅವರನ್ನು ಕೂಡಲೇ ಸರ್ಕಾರ ಅಮಾನತು ಮಾಡಲಿ ಎಂದು ಚಿತ್ರದುರ್ಗ ಲೋಕಸಭಾ ಸದಸ್ಯ ಗೋವಿಂದ ಎಂ ಕಾರಜೋಳ ಒತ್ತಾಯಿಸಿದರು.
ಅವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಿಜೆಪಿ ಮುಖಂಡ ಬಿ.ಸಿ ಹನುಮಂತೇಗೌಡರ ಆರೋಗ್ಯ ವಿಚಾರಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಪಿಎಸ್ಐ ಅವರು ರಿವಾಲ್ವಾರ್ ತೆಗೆದು ಫೈರಿಂಗ್ ಮಾಡಲು ಮುಂದಾದಾಗ ಅದನ್ನು ತಡೆಯಲು ಹನುಮಂತೇಗೌಡರು ಪಿಎಸ್ಐ ಅವರ ಕೈಯನ್ನು ಬಿಗಿಯಾಗಿ ಹಿಡಿದ ಸಂದರ್ಭದಲ್ಲಿ ಪಿಎಸ್ಐ ಅವರ ಕೈ ಬೆರಳಿಗೆ ಸ್ವಲ್ಪ ಗಾಯವಾಗಿದೆ. ಸಬ್ ಇನ್ಸ್ ಪೆಕ್ಟರ್ ಕೆಲಸ ಏನು, ರಸ್ತೆ ಮೇಲೆ ನಿಂತಿದ್ದವರನ್ನ ಹೊಡೆದೋ, ಕರ್ತವ್ಯದಲ್ಲಿದ್ದಾಗ ಅಂತಹ ಘಟನೆ ನಡೆದ ಸಂದರ್ಭದಲ್ಲಿ ಅದನ್ನು ನಿಭಾಯಿಸುವ ಕೆಲಸ ಮಾಡಬೇಕೆ ಹೊರೆತು ರಸ್ತೆ ಮೇಲೆ ಓಡಾಡುವವರ ಮೇಲೆ ಹಲ್ಲೆ ಮಾಡುವುದು ರಾಕ್ಷಸಿ ಪ್ರವೃತ್ತಿ ಆಗಲಿದೆ. ಪಿಎಸ್ಐ ಗಾದಿ ಲಿಂಗ ಗೌಡರ್ ಪೊಲೀಸ್ ಅಧಿಕಾರಿಯಾಗಿ ಚಿತ್ರದುರ್ಗದಲ್ಲಿಲ್ಲ, ರಾಕ್ಷಸಿ ಪ್ರವೃತ್ತಿಯಿಂದ ಕೆಲಸ ಮಾಡುತ್ತಿದ್ದಾರೆ. ಅವರನ್ನ ಕೂಡಲೇ ಅಮಾನತು ಮಾಡಬೇಕು, ಆತನ ದುರ್ನಡತೆ ಕುರಿತು ಪೊಲೀಸ್ ಇಲಾಖೆ ಸಮಗ್ರ ತನಿಖೆ ಮಾಡಿ ಖಾಕಿ ಬಟ್ಟೆಯನ್ನ ಶಾಶ್ವತವಾಗಿ ಕಳಚಬೇಕು ಎಂದು ಸಂಸದರು ಒತ್ತಾಯ ಮಾಡಿದರು.
ಪಿಎಸ್ಐ ಅವರು ಬೂಟ್ ಕಾಲಿನಿಂದ ಮುಖಕ್ಕೆ, ಮರ್ಮಾಂಗಕ್ಕೆ, ಎದೆಗೆ ಒದ್ದಿರುವ ಗಾಯ ಕಾಣುತ್ತಿದೆ. ಪಿಎಸ್ಐ ಮನುಷ್ಯನಾ ಎಂದು ಪ್ರಶ್ನಿಸಿದ ಸಂಸದರು ಯಾವುದೇ ಕಾರಣಕ್ಕೂ ಆತನನ್ನ ಬಿಡುವುದಿಲ್ಲ, ಅಧಿವೇಶನ ನಡೆಯುತ್ತಿದೆ. ಅಧಿವೇಶನ ಒಳಗೂ, ಹೊರಗೂ ಬಿಜೆಪಿ ಹೋರಾಟ ಮಾಡಲಿದೆ ಎಂದು ಗೋವಿಂದ ಕಾರಜೋಳ ಗುಡುಗಿದರು.
ಹನುಮಂತೇಗೌಡ ಏನು ರೌಡಿನಾ, ಅವನು ನಮ್ಮ ಪಾರ್ಟಿ ಅಧ್ಯಕ್ಷ ಇದ್ದಾನೆ. ಸ್ಮಗ್ಲರ್ ಅಲ್ಲ, ಸ್ಮಗ್ಲರ್ ಇರೋರಿಗೆ ರಾಜ ಮರ್ಯಾದೆ ಕೊಟ್ಟು ಪ್ರೋಟೊಕಾಲ್ (ಶಿಷ್ಟಾಚಾರ)ನೊಂದಿಗೆ ಎಸ್ಕಾರ್ಟ್ ಕೊಟ್ಟು ಕಳಿಸುತ್ತಾರೆ ಪೊಲೀಸ್ ಇಲಾಖೆಗೆ ನಾಚಿಕೆ ಆಗಬೇಕು. ಇಂಥಾ ಹೊಲಸು ಕೆಲಸ ಮಾಡುವವರು ಪೊಲೀಸ್ ಇಲಾಖೆ ಒಳಗೇ ಇರಬಾರ್ದು ಎಂದು ಸಂಸದರು ಟೀಕಾಪ್ರಹಾರ ಮಾಡಿದರು.
ಪಿಎಸ್ಐ ಗಾದಿ ಲಿಂಗ ಗೌಡರ ಜಾತಿ ಯಾವುದು?
“ಪಿಎಸ್ಐ ಗಾದಿ ಲಿಂಗ ಗೌಡರ ಮತ್ತು ಬಿಜೆಪಿ ಮುಖಂಡ ಹನುಮಂತೇಗೌಡರ ಮಧ್ಯ ನಡೆದ ಮಾರಾಮಾರಿ ಗಲಾಟೆ ನಂತರ ಪಿಎಸ್ಐ ಯಾವ ಜಾತಿಯವರು ಎನ್ನುವ ಪ್ರಶ್ನೆ ಹರಿದಾಡಿದೆ.
ಓರ್ವರು ವಾಲ್ಮೀಕಿ ಸಮುದಾಯಕ್ಕೆ ಸೇರಿದ್ದಾರೆ ಎಂದರೆ ಇಲ್ಲಿಲ್ಲ ಅವರ ಕುರುಬ ಜಾತಿಗೆ ಸೇರಿದವರು ಎನ್ನುವ ಗಂಭೀರ ಚರ್ಚೆ ಇಡೀ ದಿನ ಸಾರ್ವಜನಿಕರ ಬಾಯಲ್ಲಿ ಹರಿದಾಡಿತು.
ಕೆಲ ರಾಜಕೀಯ ಮುಖಂಡರು ಪಿಎಸ್ಐ ಅವರ ಹುಟ್ಟೂರಾದ ಕರಟಗಿ ಅವರ ಸ್ನೇಹಿತರಿಗೆ ದೂರವಾಣಿ ಕರೆ ಮಾಡಿದಾಗ ಅವರು ನೂರಷ್ಟು ಕುರುಬ ಜಾತಿಗೆ ಸೇರಿದವರಾಗಿದ್ದಾರೆ. ಇದಕ್ಕೆ ಯಾವುದೇ ಅನುಮಾನ ಬೇಡ ಎನ್ನುವ ಉತ್ತರವನ್ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲೇ ಕುಳಿತು ಪಡೆದುಕೊಂಡ ಘಟನೆಯು ಜರುಗಿತು.
ಆದರೆ ಪಿಎಸ್ಐ ಗಾದಿ ಲಿಂಗ ಗೌಡರ ದಾಖಲಿಸಿರುವ ಎಫ್ಐಆರ್ ಪ್ರತಿಯಲ್ಲಿ ಬುಡ್ಗ ಜಂಗಮ ಜಾತಿ ಎಂದು ನಮೂದಾಗಿದೆ. ಪಿಎಸ್ಐ ಗಾದಿ ಲಿಂಗ ಗೌಡರ ಅವರು ಕುರುಬ ಸಮುದಾಯಕ್ಕೆ ಸೇರಿದ್ದರೆ ಒಂದು ವೇಳೆ ಅವರು ಬುಡ್ಗ ಜಂಗಮ ಸಮುದಾಯದ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಉದ್ಯೋಗಕ್ಕೆ ಸೇರಿಕೊಂಡಿದ್ದರೆ ಅಪಾಯ ತಪ್ಪಿದ್ದಲ್ಲ. ಉದ್ಯೋಗಕ್ಕೆ ಕುತ್ತು ಸೇರಿದಂತೆ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.
ಇಲ್ಲ ಅವರು ಬುಡ್ಗ ಜಂಗಮ ಜಾತಿಯವರೇ ಆಗಿದ್ದರೆ ಪರಿಶಿಷ್ಟ ಜಾತಿ(ಎಸ್ಸಿ) ನಲ್ಲೇ ಅತ್ಯಂತ ಕೊನೆಯ ಶೋಷಿತ ಸಮುದಾಯಕ್ಕೆ ಸೇರಿದವರಾಗುತ್ತಾರೆ. ಒಂದು ವೇಳೆ ಬಿಜೆಪಿ ಮುಖಂಡ ಬಿ.ಸಿ ಹನುಮಂತೇಗೌಡ ಪಿಎಸ್ಐ ಗಾದಿ ಲಿಂಗ ಗೌಡರ ಮೇಲೆ ದೌರ್ಜನ್ಯ ಎಸಗಿ ಹಲ್ಲೆ ಮಾಡಿದ್ದರೆ ಅವರನ್ನು ಎಸ್ಸಿ-ಎಸ್ಟಿ ಕಾಯ್ದೆ ಅಡಿ ಶಿಕ್ಷೆಗೆ ಗುರಿಪಡಿಸಬೇಕಾಗುತ್ತದೆ.
ಬುಡ್ಗ ಜಂಗಮರು ಹೊಟ್ಟೆಪಾಡಿಗಾಗಿ ತಮ್ಮಲ್ಲಿನ ಕಲಾ ಕೌಶಲವನ್ನು ಪ್ರದರ್ಶಿಸುತ್ತಾ ಊರೂರು ಅಲೆಯುತ್ತಾ ಜನ ನೀಡುವ ಅಲ್ಪಸ್ವಲ್ಪ ಧವಸ, ಧಾನ್ಯಗಳಿಂದ ಬದುಕು ಸಾಗಿಸುತ್ತಿದ್ದಾರೆ.
ಈ ಸಮುದಾಯದವರು ಬಹುತೇಕ ಅನಕ್ಷರಸ್ಥರು, ರಾಜಕೀಯ, ಶೆಕ್ಷಣಿಕವಾಗಿ ತೀರಾ ಹಿಂದುಳಿದ್ದು ಇಂತಹ ಜಾತಿಗೆ ಸೇರಿದ ಪಿಎಸ್ಐ ಗಾದಿ ಲಿಂಗ ಗೌಡರ ಬೆಂಬಲಕ್ಕೆ ಇಡೀ ಸಮಾಜ ನಿಲ್ಲಬೇಕಾಗುತ್ತದೆ.
ಏಕೆಂದರೆ ಬುಡ್ಗ ಜಂಗಮ ಜಾತಿ ಅತ್ಯಂತ ಷೋಷಣೆಗೆ ಒಳಗಾದ ಎಸ್ಸಿ ಜಾತಿಯಲ್ಲೇ ಅತಿ ಹಿಂದುಳಿದ ಅಸ್ಪೃಶ್ಯ ಸಮಾಜವಾಗಿದೆ. ಇಂತಹ ಸಮಾಜದ ಪ್ರತಿಭಾವಂತರನ್ನು ರಕ್ಷಣೆ ಮಾಡುವುದು ನಾಗರೀಕ ಸಮಾಜದ ಲಕ್ಷಣವಾಗಿದೆ.
ಗೊಂದಲ ನಿವಾರಿಸಿ-
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರಿಗೂ ಪಿಎಸ್ಐ ಗಾದಿ ಲಿಂಗ ಗೌಡರ ಜಾತಿ ಯಾವುದು ಎಂದು ಕೆಲ ಜನಪ್ರತಿನಿಧಿಗಳು ಪ್ರಶ್ನೆ ಮಾಡಿದ್ದರು ಎನ್ನಲಾಗಿದೆ. ಪಿಎಸ್ಐ ಅವರ ಮೂಲ ಜಾತಿ ಯಾವುದು ಎನ್ನುವ ಸತ್ಯವನ್ನು ಸಮಾಜಕ್ಕೆ ತಿಳಿಸುವ ಹೊಣೆಗಾರಿಕೆ ಎಸ್ಪಿ ಅವರಿಗಿದೆ.
ಪಿಎಸ್ಐ ಗಾದಿ ಲಿಂಗ ಗೌಡರ ಸರ್ವೀಸ್ ರೆಕಾರ್ಡ್ ನಲ್ಲಿ ಯಾವ ಜಾತಿ ದಾಖಲಾಗಿದೆ, ಅವರ ಹುಟ್ಟೂರಿನಲ್ಲಿರುವ ಮನೆ, ಅಕ್ಕ ಪಕ್ಕದವರ ಮನೆಗಳಿಗೆ ಭೇಟಿ ನೀಡಿ ಸತ್ಯಾಂಶವನ್ನು ತಿಳಿಸಬೇಕಾಗಿದೆ. ಒಂದು ವೇಳೆ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಉದ್ಯೋಗಕ್ಕೆ ಸೇರಿದ್ದರೆ ಕೂಡಲೇ ಕಾನೂನು ಕ್ರಮವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೇ ಕೈಗೊಳ್ಳಲು ಅವಕಾಶವಿದೆ. ಒಟ್ಟಿನಲ್ಲಿ ಪಿಎಸ್ಐ ಗಾದಿ ಲಿಂಗ ಗೌಡರ ಮತ್ತು ಬಿಜೆಪಿ ಮುಖಂಡ ಬಿ.ಸಿ ಹನುಮಂತೇಗೌಡರ ಪ್ರಕರಣಕ್ಕೆ ಸುಖಾಂತ್ಯ ಆಗಬೇಕಿದೆ.