ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ವಿದ್ಯಾರ್ಥಿಗಳು ತಮ್ಮ ಶಾಲೆಯ ಹಾಗೂ ಸುತ್ತಮುತ್ತಲಿನ ಪರಿಸರವನ್ನು ರಕ್ಷಿಸಲು ಮುಂದಾಗಬೇಕು ಎಂದು ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಕಾರ್ಯದರ್ಶಿ ಎಚ್.ಎಸ್.ಟಿ.ಸ್ವಾಮಿ ಕಿವಿಮಾತು ಹೇಳಿದರು.
ಅವರು ಚಳ್ಳಕೆರೆ ತಾಲ್ಲೂಕಿನ ಕಾಲುವೇಹಳ್ಳಿ ಶ್ರೀ ಪಟೇಲ್ ಪಾಲಯ್ಯ ಪ್ರೌಢಶಾಲೆಯಲ್ಲಿ “ಪರಿಸರ ಸಂರಕ್ಷಣೆ” ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪರಿಸರ ಸಂರಕ್ಷಣೆ ಕಾರ್ಯಕ್ರಮ ಕೇವಲ ಜೂನ್ ತಿಂಗಳಿಗೆ ಮಾತ್ರ ಸೀಮಿತವಾಗದೇ ವರ್ಷಪೂರ್ತಿ ನಿರಂತರವಾಗಿ ನಡೆಯುತ್ತಿರಬೇಕು. ಜೀವನದಲ್ಲಿ ಸಸ್ಯಗಳನ್ನು ಬೆಳೆಸಿ ಅವುಗಳನ್ನು ಉಳಿಸಿಕೊಂಡು ಹೋಗುವ ಮನೋಭಾವ ಬೆಳೆಸಿಕೊಳ್ಳಿ ಉತ್ತಮ ಪರಿಸರ ವ್ಯವಸ್ಥೆಯಿಂದ ವಿದ್ಯಾರ್ಥಿಗಳ ಮಾನಸಿಕ ಅಭಿವೃದ್ಧಿ ಸಾಧ್ಯ ಎಂದು ಹೇಳಿ, ಆಟ ಪಾಠಗಳ ಜೊತೆಗೆ ವೈಜ್ಞಾನಿಕ ಮನೋಭಾವ, ವೈಜ್ಞಾನಿಕ ಚಿಂತನೆ ಬೆಳೆಸುವತ್ತ ಶಿಕ್ಷಕರು ಮುಂದಾಗಬೇಕು. ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಸೈನ್ಸ್ ಫೌಂಡೇಶನ್ ಖಜಾಂಚಿ ಕೆ.ವಿ.ನಾಗಲಿಂಗರೆಡ್ಡಿ ಮಾತನಾಡಿ, ಪರಿಸರ ಸಂರಕ್ಷಣೆ ಎಲ್ಲರ ಕರ್ತವ್ಯ. ಪರಿಸರವನ್ನು ಉಳಿಸಿದರೆ ಮನುಕುಲ ಉಳಿಯುತ್ತದೆ. ಭವಿಷ್ಯದ ಜೀವಸಂಕುಲ ಇಂದಿನ ವಿದ್ಯಾರ್ಥಿಗಳ ಮನೋಧರ್ಮದ ಮೇಲೆ ನಿಂತಿದೆ. ತಂದೆ ತಾಯಿ, ಗುರುಹಿರಿಯರಿಗೆ ಗೌರವ ನೀಡುವ ಶಿಕ್ಷಣ ಕಲಿಸುವುದು ಇಂದಿನ ಅಗತ್ಯತೆ ಎಂದು ತಿಳಿಸಿದರು.
ಶಾಲಾ ಆವರಣದಲ್ಲಿ ವಿವಿಧ ಬಗೆಯ ಸಸ್ಯಗಳನ್ನು ವಿದ್ಯಾರ್ಥಿಗಳ ಸಹಯೋಗದೊಂದಿಗೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಶಿಕ್ಷಕ ಶ್ರೀ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ವಿಜ್ಞಾನ ಶಿಕ್ಷಕ ಚಾಂದ್ ಭಾಷ ಸ್ವಾಗತಿಸಿದರು. ಗಣಿತ ಶಿಕ್ಷಕರ ವಿಜಯಕುಮಾರ್ ವಂದಿಸಿದರು. ಶಿಕ್ಷಕ ಹನುಮಂತರೆಡ್ಡಿ ಕಾರ್ಯಕ್ರಮ ನಿರೂಪಿಸಿದರು.