ಚಂದ್ರವಳ್ಳಿ ನ್ಯೂಸ್, ವಿಜಯನಗರ:
ದ್ವಿತೀಯ ಪಿಯುಸಿ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು ಈ ಬಾರಿಯ ಫಲಿತಾಂಶದಲ್ಲಿ ಲಾರಿ ಚಾಲಕನ ಪುತ್ರಿಯೊಬ್ಬಳು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವುದು ವಿಶೇಷ.
ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದ ಇಂದು ಪಿಯು ಕಾಲೇಜಿನ ವಿದ್ಯಾರ್ಥಿಗಳು ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸುಕೊಂಡು ಬರುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಈ ಸಾಧನೆ ಈ ವರ್ಷವು ಮುಂದುವರೆದಿದೆ. ಇಂದು ಪಿಯು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸಂಜನಾಬಾಯಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
600ಕ್ಕೆ 597 ಅಂಕ ಪಡೆದ ಸಂಜನಾಬಾಯಿ, ಕಲಾ ವಿಭಾದಲ್ಲಿ ಮೊದಲ ಸ್ಥಾನ ಗಳಿಸುವ ಮೂಲಕ ವಿಜಯನಗರ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿಯ ಗುಂಡಾ ಸ್ಟೇಷನ್ ಗ್ರಾಮದ ಸಂಜನಾಬಾಯಿ ಓರ್ವ ಲಾರಿ ಚಾಲಕನ ಮಗಳಾಗಿದ್ದು, ವಿದ್ಯಾಭ್ಯಾಸದಲ್ಲಿ ತನ್ನ ನಿರಂತರ ಪರಿಶ್ರಮದಿಂದ ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ರಾಜ್ಯಕ್ಕೆ ದ್ವಿತೀಯ ಸ್ಥಾನ: ವಿಜಯನಗರ ಜಿಲ್ಲೆಯ ಇಟಗಿಯ ಪಂಚಮಸಾಲಿ ಪಿಯು ಕಾಲೇಜಿನ ವಿದ್ಯಾರ್ಥಿನಿ ನಿರ್ಮಲಾ ಕಲಾ ವಿಭಾಗದಲ್ಲಿ 600ಕ್ಕೆ 596 ಅಂಕ ಪಡೆದಿದ್ದು, ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾಳೆ.
ವಿದ್ಯಾರ್ಥಿನಿಯರ ಮೇಲುಗೈ: ಮಂಗಳೂರಿನ ಕೊಡಿಂಬೈಲ್ನ ಕೆನರಾ ಪಿಯು ಕಾಲೇಜಿನ ವಿದ್ಯಾರ್ಥಿನಿ ದೀಪಾಶ್ರೀ ಎಸ್. 599 ಅಂಕ ಗಳಿಸುವ ಮೂಲಕ ವಾಣಿಜ್ಯ ವಿಭಾಗದಲ್ಲಿ ಟಾಪರ್ ಆದರೆ, ವಿಜ್ಞಾನ ವಿಭಾಗದಲ್ಲಿ ಮಂಗಳೂರಿನ ಕೊಡಿಬೈಲ್ನ ಎಕ್ಸ್ಪರ್ಟ್ ಕಾಲೇಜಿನ ವಿದ್ಯಾರ್ಥಿನಿ ಶ್ರೇಯಾ ಎಸ್. 597 ಅಂಕ ಗಳಿಸುವ ಮೂಲಕ ಮೊದಲ ಸ್ಥಾನ ಗಳಿಸಿದ್ದಾರೆ.