ಸಾರ್ವಜನಿಕ ಆಸ್ಪತ್ರೆ, ಖಾಸಗಿ ಆಸ್ಪತ್ರೆಗಳ ಮೇಲೆ ನಿಗಾ ವಹಿಸಿ-ಅಧ್ಯಕ್ಷ

News Desk

ಗೂಡಂಗಡಿ ತೆರವು ಮಾಡಿ ಸಾರ್ವಜನಿಕ ಓಡಾಟಕ್ಕೆ ಮುಕ್ತವಾಗಿಡಿ-ಸದಸ್ಯರು
ಟ್ರಾಫಿಕ್ ಜಾಮ್ ಮತ್ತು ಅಪಘಾತ ತಪ್ಪಿಸಿ-ಸದಸ್ಯರು
ಚಂದ್ರವಳ್ಳಿ ನ್ಯೂಸ್ ಹಿರಿಯೂರು:

ನಿಯಮ ಉಲ್ಲಂಘಿಸಿ ವೈದ್ಯಕೀಯ ಸೇವೆ ನೀಡುತ್ತಿರುವ ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಂಗಳ ಮೇಲೆ ದಾಳಿ ನಡೆಸಲು ತಾಲೂಕು ಆರೋಗ್ಯಾಧಿಕಾರಿಗಳಿಗೆ ಧೈರ್ಯವಿಲ್ಲವೇ ಎಂದು ನಗರಸಭೆ ಅಧ್ಯಕ್ಷ ಅಜಯ್ ಕುಮಾರ್ ಪ್ರಶ್ನಿಸಿದರು.

ನಗರದ ನಗರಸಭೆ ಕೌನ್ಸಿಲ್ ಸಭಾಂಗಣದಲ್ಲಿ ಗುರುವಾರ ನಡೆದ ಕೌನ್ಸಿಲ್ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆರೋಗ್ಯ ಇಲಾಖೆ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗಳ ವಿಷಯ ಕುರಿತು ಸಭೆಯಲ್ಲಿ  ಹಲವು ಸದಸ್ಯರು ಮಾತನಾಡಿ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ವಚ್ಛತೆ ಸಮಸ್ಯೆ ಇದೆ. ಮಕ್ಕಳ ವೈದ್ಯರು ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ. ಆಸ್ಪತ್ರೆ ಸಿಬ್ಬಂದಿಗಳು ರೋಗಿಗಳಿಗೆ ನಿಲ್ಲಿಸಿಯೇ ಚುಚ್ಚು ಮದ್ದು ನೀಡುತ್ತಾರೆ. ನಾರ್ಮಲ್ ಹೆರಿಗೆಗೆ ಇಷ್ಟು, ಸಿಜೆರಿಯನ್ ಹೆರಿಗೆಗೆ ಇಷ್ಟು ಎಂದು ಹಣ ವಸೂಲು ಮಾಡಲಾಗುತ್ತಿದೆ ಎಂದು ಸದಸ್ಯರಾದ ತಿಪ್ಪೇಸ್ವಾಮಿ, ಬಾಲಕೃಷ್ಣ, ಪಲ್ಲವ, ಮೊದಲ ಮರಿಯಾ ಆರೋಪಿಸಿದರು.

ಟಿಹೆಚ್ ಓ ಡಾ.ವೆಂಕಟೇಶ್ ರವರು ಪ್ರತಿಯೊಂದು ವಾರ್ಡ್ ಗಳಲ್ಲೂ ಆರೋಗ್ಯ ಶಿಬಿರ ನಡೆಸಲು ಯೋಜಿಸಲಾಗಿದೆ. ಸದಸ್ಯರು ಹೇಳಿದಂತೆ ಇತ್ತೀಚಿಗೆ ಆಸ್ಪತ್ರೆಯಲ್ಲಿ ಆ ರೀತಿಯ ಸಮಸ್ಯೆಗಳಿಲ್ಲ. ಮಕ್ಕಳ ವೈದ್ಯರ ಕೊರತೆ ಇಲ್ಲ. ಪ್ರತಿ ತಿಂಗಳು 70 ರಿಂದ 80 ಹೆರಿಗೆ ಸರ್ಕಾರಿ ಆಸ್ಪತ್ರೆಯಲ್ಲೇ ನಡೆಸುವ ಟಾರ್ಗೆಟ್ ನೀಡಿದ್ದೇವೆ. ಬಯೋ ಮೆಡಿಕಲ್ ವೇಸ್ಟ್ ಸಾಗಿಸಲು ಬೇರೆಯವರು ಇದ್ದು ಪೌರ ಕಾರ್ಮಿಕರು ಉಳಿದ ತ್ಯಾಜ್ಯ ಸಾಗಿಸುವರು ಎಂದರು.

ಟಿಹೆಚ್ ಓ ಉತ್ತರಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಅಜಯ್ ಕುಮಾರ್, ಸರ್ಕಾರಿ ಆಸ್ಪತ್ರೆಯ ನಿರ್ವಹಣೆ ಜೊತೆಗೆ ಖಾಸಗಿ ಆಸ್ಪತ್ರೆಗಳತ್ತಲೂ ಗಮನಹರಿಸಿ. ದುಬಾರಿ ಶುಲ್ಕ, ಸ್ವಚ್ಛತೆ, ನಿಯಮ ಮೀರಿ ಬೆಡ್ ಗಳ ಅಳವಡಿಕೆ ಬಗ್ಗೆ ತಾಲೂಕು ಆರೋಗ್ಯಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ನಿಮ್ಮ ಕೈಲಿ ಆಗದಿದ್ದರೆ ಹೇಳಿ, ನಗರಸಭೆ ವತಿಯಿಂದಲೆ ಖಾಸಗಿ ಆಸ್ಪತ್ರೆಗಳ ಬಗ್ಗೆ ಗಮನ ಹರಿಸುತ್ತೇವೆ ಎಂದರು.

ಸದಸ್ಯ ಬಿಎನ್ ಪ್ರಕಾಶ್ ಮಾತನಾಡಿ 2023 ರಲ್ಲಿ  ಕಳಿಸಿದ 2 ಕೋಟಿಯಷ್ಟು ಅನುದಾನದ ಕ್ರಿಯಾಯೋಜನೆ ಅನುಷ್ಠಾನ ವರ್ಷವಾದರೂ ನಡೆಯದೆ ಅನುದಾನ ವಾಪಸ್ ಹೋಗಿದೆ. ಇದರಲ್ಲಿ ಪಿಡಿ ಯವರ ನಿರ್ಲಕ್ಷ, ಕರ್ತವ್ಯ ಲೋಪ ಎದ್ದು ಕಾಣುತ್ತಿದೆ. ಸಭಾ ನಡಾವಳಿಗಳಿಗೆ ಪಿಡಿ ಬೆಲೆ ನೀಡಿಲ್ಲ ಎಂದು ಆರೋಪಿಸಿದರು.

ಅಧ್ಯಕ್ಷ ಅಜಯ್ ಕುಮಾರ್ ಪ್ರತಿಕ್ರಿಯೆ ನೀಡಿ ಎಲ್ಲಾ ಸದಸ್ಯರು ಒಕ್ಕೊರಲಿನಿಂದ ಅನುದಾನ ವ್ಯರ್ಥ ಆಗಿದ್ದರ ಬಗ್ಗೆ ಧ್ವನಿ ಎತ್ತಿದ್ದೀರಿ. ಸಂಬಂಧಪಟ್ಟವರು ತಪ್ಪು ಮಾಡಿದ್ದರೆ ಶಿಸ್ತು ಕ್ರಮ ಕೈಗೊಳ್ಳಲು ಬರೆಯಲಾಗುವುದು ಎಂದರು.

ಸ್ಲo ಬೋರ್ಡ್ ನ ನಿಶಾಂತ್ ಸಭೆಗೆ ಮಾಹಿತಿ ನೀಡಿ 477 ಮನೆಯಲ್ಲಿ 430 ಮನೆಗಳ ಕಾಮಗಾರಿ ಮುಗಿದಿದೆ ಹಾಗೂ 900 ಮನೆಗಳಲ್ಲಿ 550 ಮನೆಗಳು ಶುರುವಾಗಿವೆ ಎಂದರು.

ಸ್ಲo ಬೋರ್ಡ್ ನವರ ಮೇಲೆ ಸದಸ್ಯರು ಒಬ್ಬರಾದ ಮೇಲೆ ಒಬ್ಬರಂತೆ ಪ್ರಶ್ನೆಗಳ ಸುರಿಮಳೆಗರೆದರು. ಸದಸ್ಯರಾದ ವಿಠ್ಠಲ್ ಪಾಂಡುರಂಗ, ಸಣ್ಣಪ್ಪ, ಈ ಮಂಜುನಾಥ್, ಬಿ ಎನ್ ಪ್ರಕಾಶ್ ಮುಂತಾದವರು ಸ್ಲo ಬೋರ್ಡ್ ನವರು ಮೂರು ವರ್ಷದಿಂದ ನಗರದ ಜನತೆಗೆ ಅನ್ಯಾಯ ಮಾಡುತ್ತಿದ್ದಾರೆ. ನಗರ ವಾಸಿಗಳಿಗೆ ಮೂಲಭೂತ ಸೌಲಭ್ಯ ಒದಗಿಸುತ್ತಿದ್ದೇವೆ. ನೀವು ಶಾಶ್ವತವಾದ ಹಕ್ಕುಪತ್ರ ನೀಡಬೇಕು.

ಬೋಗಸ್ ಬಿಲ್, ಬಿಲ್ಡಿಂಗ್, ಕಳಪೆ ಕಾಮಗಾರಿಯ ತನಿಖೆ ನಡೆಯಬೇಕು. ಮೆಟಿರಿಯಲ್ ಏನು ಕೊಡುತ್ತೀರಾ, ಎಷ್ಟು ಕೊಡುತ್ತೀರಾ ಎಂದು ಮೂರು ವರ್ಷದಿಂದ ಕೇಳಿದರು ಮಾಹಿತಿ ಕೊಟ್ಟಿಲ್ಲ.
ದಾವಣಗೆರೆ ವಿಳಾಸದಲ್ಲಿರುವವರಿಗೆ ಹಕ್ಕುಪತ್ರ ನೀಡಿರುವ ದೂರುಗಳಿವೆ. ಎಲ್ಲದರ ಸಮಗ್ರ ತನಿಖೆ ಆಗಬೇಕು ಎಂದು ಸದಸ್ಯರು ಒತ್ತಾಯಿಸಿದರು. ಸದಸ್ಯರ ಪ್ರಶ್ನೆಗಳಿಗೆ ಕಕ್ಕಾಬಿಕ್ಕಿಯಾದ ಸ್ಲ
o ಬೋರ್ಡ್ ಇಂಜಿನಿಯರ್ ನಿರುತ್ತರರಾದರು.

ಸದಸ್ಯರಾದ ಜಿಎಸ್ ತಿಪ್ಪೇಸ್ವಾಮಿ ಹಾಗೂ ಗುಂಡೇಶ್ ಕುಮಾರ್ ಮಾತನಾಡಿ ವೇದಾವತಿ ನಗರದಲ್ಲಿ 400 ಗುಡಿಸಲು ವಾಸಿಗಳು 40 ವರ್ಷದಿಂದ ಕೊಳಚೆ ಪ್ರದೇಶಗಳಲ್ಲಿ ಬದುಕುತ್ತಿದ್ದಾರೆ. ಸ್ಲo ಪಟ್ಟಿಗೆ ವೇದಾವತಿ ನಗರ ಸೇರಿಸಿ ಆ ಜನರ ಬದುಕು ಕಟ್ಟಿಕೊಡುವ ಕೆಲಸವಾಗಲಿ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಎ ವಾಸಿಂ, ಸಿಪಿಐ ರಾಘವೇಂದ್ರ ಕಾಂಡಿಕೆ, ಟಿಹೆಚ್ ಓ ಡಾ ವೆಂಕಟೇಶ್, ನಗರಸಭೆ ಉಪಾಧ್ಯಕ್ಷೆ ಅಂಬಿಕಾ ಆರಾಧ್ಯ, ಸದಸ್ಯರಾದ ಜಗದೀಶ್, ಶಿವರಂಜಿನಿ, ಈರಲಿಂಗೇ ಗೌಡ, ವಿಠ್ಠಲ್, ಶಂಷುನ್ನೀಸಾ, ಚಿತ್ರಜಿತ್ ಯಾದವ್, ಗೀತಾ ಗಂಗಾಧರ್, ಈ ಮಂಜುನಾಥ್, ಜಬಿವುಲ್ಲಾ, ಮಮತಾ, ಬಾಲಕೃಷ್ಣ, ಅನಿಲ್ ಕುಮಾರ್, ಕವಿತಾ, ವಿಶಾಲಾಕ್ಷಿ,  ಸಮಿವುಲ್ಲಾ, ವೈಪಿಡಿ ದಾದಾಪೀರ್, ರತ್ನಮ್ಮ, ಗಣೇಶ್, ಸುರೇಖಾಮಣಿ, ಜಯವಾಣಿ, ಅಪೂರ್ವ, ದೇವಿರಮ್ಮ , ಮಂಜುಳಾ, ನಾಮ ನಿರ್ದೇಶತ ಸದಸ್ಯರಾದ ರಮೇಶ್ ಬಾಬು, ಶಿವಕುಮಾರ್, ಗಿರೀಶ್ ಕುಮಾರ್, ಅಜೀಮ್ ಪಾಷಾ, ಶಿವಣ್ಣ, ಗಿರೀಶ್, ಶಿವಕುಮಾರ್ ಹಾಗೂ ನಗರಸಭೆ ಸಿಬ್ಬಂದಿಗಳು ಹಾಜರಿದ್ದರು.

  ನಗರದ ರಸ್ತೆ ಅಗಲೀಕರಣಕ್ಕೆ ಸಚಿವರು ಸಂಕಲ್ಪ ಮಾಡಿದ್ದು ತುರ್ತಾಗಿ ಕಟ್ಟಡ ತೆರವು ಕಾರ್ಯಾಚರಣೆ ನಡೆಯಲಿದೆ. ಈಗಾಗಲೇ ರಸ್ತೆ ಮದ್ಯದಿಂದ 50 ಅಡಿ ಜಾಗ ಗುರುತಿಸಲಾಗಿದೆ. ಮೂರ್ನಾಲ್ಕು ಕಟ್ಟಡ ಮಾಲೀಕರು ಸ್ವಯಂ ಕಟ್ಟಡ ತೆರವು ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ. ದಸರಾ ಹಬ್ಬದ ನಂತರ ನಿರಂತರವಾಗಿ ಕಟ್ಟಡ ತೆರವು ಕಾರ್ಯ ಶುರುವಾಗಲಿದೆ. ರಸ್ತೆ ಅಗಲೀಕರಣದಲ್ಲಿ ಸಚಿವರ ಆದೇಶ ಪಾಲಿಸಲಾಗುವುದು. ಅಜಯ್ ಕುಮಾರ್, ಅಧ್ಯಕ್ಷ, ನಗರಸಭೆ.

   ಟ್ರಾಫಿಕ್ ಸಮಸ್ಯೆ ದಿನ ದಿನ  ಹೆಚ್ಚುತ್ತಿದೆ, ನಗರದ ಫುಟ್ ಪಾತ್ ಮೇಲೆ ಅಕ್ರಮವಾಗಿಟ್ಟಿರುವ ಗೂಡಂಗಡಿಗಳ ತೆರವುಗೊಳಿಸಿ ಸಾರ್ವಜನಿಕರಿಗೆ ಓಡಾಡಲು ಅವಕಾಶ ಮಾಡಿಕೊಡಿ. ಸಿಪಿಐ ರಾಘವೇಂದ್ರ, ಸದಸ್ಯ, ನಗರಸಭೆ.

 ಚಳ್ಳಕೆರೆ ರಸ್ತೆಯ ಕೆಇಬಿ ಮುಂಭಾಗದಿಂದ ಟಿ ಬಿ ವೃತ್ತದವರೆಗೂ ಲಾರಿಗಳು ಸಾಲು ಸಾಲಾಗಿ ನಿಲ್ಲುವದರಿಂದ ಅಪಘಾತಗಳು ಹೆಚ್ಚಾಗುತ್ತಿವೆ ಹಾಗೂ ಫುಟ್ ಪಾತ್ ನಲ್ಲಿರುವ ಗೂಡಂಗಡಿಗಳನ್ನು ತೆಗೆಸಿ 100 ಅಡಿ ರಸ್ತೆಯಲ್ಲಿ ಜಾಗ ಮಾಡಿಕೊಡಿ. ಚಿತ್ರಜಿತ್ ಯಾದವ್, ಸದಸ್ಯ, ನಗರಸಭೆ. 

ಚಳ್ಳಕೆರೆ ರಸ್ತೆಯ ಅಂಡರ್ ಪಾಸ್ ಬಳಿ ಸಾಕಷ್ಟು ಅಪಘಾತಗಳು ಸಂಭವಿಸುತ್ತಿದ್ದು ಸಾಕಷ್ಟು ಸರಿ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಯಾವ ಕಡೆಯಿಂದ ಬಸ್ಸುಗಳು ಲಾರಿಗಳು ಬರುತ್ತವೆ ಎಂದು ಕಾಣುವುದಿಲ್ಲ ಅಲ್ಲಿ ಮಿರರ್ ಅಳವಡಿಸಲಾಗಿತ್ತು ಆದರೆ ಈಗ ಅದು ಕಾಣೆಯಾಗಿದೆ. ಟ್ರಾಫಿಕ್ ಸಮಸ್ಯೆ ನಿವಾರಿಸಿ ಅಪಘಾತ ತಪ್ಪಿಸಲು ಟ್ರಾಫಿಕ್ ಪೊಲೀಸರನ್ನು ನೇಮಿಸಿ. ಜಿಎಸ್​ಟಿ ತಿಪ್ಪೇಸ್ವಾಮಿ, ಸದಸ್ಯರು, ನಗರಸಭೆ.

ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ರವರ ಸಮುಖದಲ್ಲಿ ಒಂದು ಸಭೆ ಕರೆದು ನಗರದ ಟ್ರಾಫಿಕ್ ಸಮಸ್ಯೆ ಹಾಗೂ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಪೊಲೀಸ್ ಠಾಣೆಗೆ ಬಂದವರಿಗೆ, ಸದಸ್ಯರಿಗೆ ಸಮಸ್ಯೆಗಳಿಗೆ ಸ್ಪಂದಿಸುವಂತಹ ಕೆಲಸವನ್ನು ಪೊಲೀಸ್ ಇಲಾಖೆ ಮಾಡಬೇಕು. ಸಿಪಿಐ ರಾಘವೇಂದ್ರ.

 

 

 

 

- Advertisement -  - Advertisement -  - Advertisement - 
Share This Article
error: Content is protected !!
";