ಚಂದ್ರವಳ್ಳಿ ನ್ಯೂಸ್, ಆನೇಕಲ್(ಬೆಂಗಳೂರು ಗ್ರಾಮಾಂತರ ಜಿಲ್ಲೆ) :
ಕಾಡಿನಿಂದ ನಾಡಿಗೆ ಆಗಮಿಸಿರುವ ಚಿರತೆಯೊಂದು ಆನೇಕಲ್ ತಾಲೂಕಿನ ಜಿಗಣಿಯ ಕುಂಟ್ಲಾರೆಡ್ಡಿ ಬಡಾವಣೆಯಲ್ಲಿರುವ ಮಂಜು ಎಂಬುವರ ಮನೆಯಲ್ಲಿ ಸಿಲುಕಿಕೊಂಡಿದೆ.
ಸಿಲುಕಿಕೊಂಡಿರುವ ಚಿರತೆಯನ್ನು ಬೋನಿಗೆ ಕೆಡವಲು ಅರಣ್ಯ ಇಲಾಖೆ ಸಿಬ್ಬಂದಿಗಳು ಹರಸಾಹಸ ಮಾಡುತ್ತಿದ್ದಾರೆ.
ಗುರುವಾರ ಬೆಳಗ್ಗೆ ದಿಢೀರ್ ಆಗಿ ನಾಡಿಗೆ ನುಗ್ಗಿದ ಚಿರತೆ ಶಾಲಾ ಮಕ್ಕಳು ಬೀದಿಯಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಮಕ್ಕಳ ಪಕ್ಕದಲ್ಲೇ ತೆರಳಿದೆ. ಆದರೆ, ಅದೃಷ್ಟವಶಾತ್ ಯಾವೊಬ್ಬ ಮಗುವಿಗೂ ಚಿರತೆ ತೊಂದರೆ ನೀಡದೆ ನಡೆದು ಹೋಗಿದೆ ಎಂದು ಸಾರ್ವಜನಿಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಚಿರತೆ ಕಂಡ ಬೀದಿ ಜನರು ಭಾರೀ ಕೂಗಾಟ ಗದ್ದಲ ಮಾಡಿದ್ದರಿಂದ ಹತ್ತಿರವೇ ಇದ್ದ ತೆರೆದ ಮನೆಯೊಂದರ ಗೇಟಿನ ಒಳಗೆ ಚಿರತೆ ನುಗ್ಗಿದೆ. ಆಗ ಮನೆಯಲ್ಲಿನ ಗಂಡ-ಹೆಂಡತಿ ಕಾಫಿ ಸವಿಯುತ್ತಿದ್ದರು. ಮನೆಗೆ ನುಗ್ಗಿದ ಚಿರತೆಯ ಹಿಂದೆ ಬಿದ್ದ ಜನ ಗೇಟಿನ ಚಿಲಕ ಹಾಕಿದ್ದಾರೆ. ಅನಂತರ ಮನೆಯ ಮತ್ತೊಂದು ರೂಮಿಗೆ ನುಗ್ಗಿದ ಚಿರತೆಯನ್ನು ಹಿಂಬಾಲಿಸಿದ ಮನೆಯೊಡೆಯ ತಕ್ಷಣ ಹೊರಗಿನಿಂದ ಬಾಗಿಲಿನ ಚಿಲಕ ಹಾಕಿ ಇಬ್ಬರು ಹೊರಗೆ ಓಡಿಬಂದಿದ್ದಾರೆ.
ಬೇಟೆಗೆ ಬಂದ ಚಿರತೆ :
ನಾಯಿಗಳ ಬೇಟೆಗಾಗಿ ಚಿರತೆ ಬಂದಿದೆ. ಆಗ ಗದ್ದಲವಿದ್ದಿದ್ದರಿಂದ ಮಂಜು ಅವರ ಮನೆಯೊಳಗೆ ನುಗ್ಗಿದೆ. ಇದೀಗ ಚಿರತೆಯನ್ನು ಮನೆಯೊಳಗೆ ಬುದ್ಧಿವಂತಿಕೆಯಿಂದ ಸಿಲುಕಿಸಿದ ಮಂಜು ಕುಟುಂಬವನ್ನು ಇಡೀ ಬಡಾವಣೆ ಮತ್ತು ಜಿಗಣಿ ಸುತ್ತಮುತ್ತಲಿನ ಜನರು ಕೊಂಡಾಡಿದ್ದಾರೆ. ಚಿರತೆಯ ಸದ್ದಿಗೆ ಬೆಚ್ಚಿಬಿದ್ದಿರುವ ಕುಟುಂಬಸ್ಥರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಬೋನಿಟ್ಟ ಸಿಬ್ಬಂದಿ : ಜಿಗಣಿ ಪೊಲೀಸರು ಹಾಗೂ ಬನ್ನೇರುಘಟ್ಟ ಅರಣ್ಯಾಧಿಕಾರಿಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದು, ಸುರಕ್ಷಿತವಾಗಿ ಚಿರತೆ ಸಂರಕ್ಷಿಸುವಲ್ಲಿ ಹರಸಾಹಸ ಪಡುತ್ತಿದ್ದಾರೆ. ಅಲ್ಲದೆ ಮನೆಯ ಮುಂದಿನ ಗೇಟಿಗೆ ಎದುರಾಗಿ ಬೋನಿಟ್ಟು ಚಿರತೆ ಸೆರೆಗೆ ಕಾದು ಕುಳಿತಿದ್ದಾರೆ.