ಹೆಚ್.ಸಿ ಗಿರೀಶ್, ಹರಿಯಬ್ಬೆ.
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದ ಅತಿ ಜನಸಂದಣಿಯಿಂದ ಕೂಡಿದ ಮತ್ತು ವಾಣಿಜ್ಯ ಪ್ರದೇಶದಲ್ಲಿ ಶಾಲಾ ಬಸ್, ಇತರೆ ವಾಹನಗಳನ್ನು ನಿಲುಗಡೆ ಮಾಡುವುದರಿಂದ ಸಂಚಾರವೇ ದುಸ್ತರವಾಗಿದೆ. ಸಾರ್ವಜನಿಕರ ರಸ್ತೆ ಶಾಲಾ ಬಸ್ ಗಳ ನಿಲುಗಡೆ ಸ್ಥಳವಾಗಿ ಮಾರ್ಪಟ್ಟಿದೆ.
ಜಿಲ್ಲಾಧಿಕಾರಿಗಳ ನಿವಾಸ, ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿ(ಡಿಡಿಪಿಐ), ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಕಚೇರಿ, ಗಾಯಿತ್ರಿ ಕಲ್ಯಾಣ ಮಂಟಪ, ಪೆಟ್ರೋಲ್ ಬಂಕ್ ಸೇರಿದಂತೆ ಪ್ರಮುಖ ವಾಣಿಜ್ಯ ಕೇಂದ್ರ ಮತ್ತು ಜನಸಂದಣಿಯಿಂದ ಕೂಡಿರುವ ಪ್ರಮುಖ ರಸ್ತೆ ಬದಿಯ ಸ್ಥಳದಲ್ಲೇ ಖಾಸಗಿ ವಿದ್ಯಾ ವಿಕಾಸ ವಿದ್ಯಾಸಂಸ್ಥೆಯ ಬಸ್ ಗಳನ್ನು ಸಾಲಾಗಿ ನಿಲ್ಲಿಸುತ್ತಿದ್ದು ದ್ವಿಚಕ್ರ, ಆಟೋ, ಕಾರು ಇತರೆ ವಾಹನಗಳ ಸವಾರರು ಈ ಪ್ರದೇಶದಲ್ಲಿನ ವಾಹನ ದಟ್ಟಣೆಯ ಚಕ್ರವ್ಯೂಹದಿಂದ ಪಾರಾಗಿ ನಿರ್ದಿಷ್ಟ ಸ್ಥಳ, ಮನೆ, ಶಾಲೆ, ಕಚೇರಿ ಸೇರುವುದೇ ದೊಡ್ಡ ಸವಾಲಾಗಿದ್ದು ಇದರಿಂದಾಗಿ ಈ ಪ್ರದೇಶದಲ್ಲಿ ಸುಗಮ ಸಂಚಾರ ಎನ್ನುವುದು ಮರೀಚಿಕೆಯಾಗತೊಡಗಿದೆ.
ತಿಪ್ಪಜ್ಜಿ ವೃತ್ತದಲ್ಲಿರು ಸೆಂಟ್ ಜಾನ್ ಶಾಲೆ, ಗಾಯಿತ್ರಿ ಸರ್ಕಲ್ ಸಮೀಪ ಇರುವ ವಿದ್ಯಾವಿಕಾಸ ಶಾಲೆಯ ಸಾವಿರಾರು ಮಕ್ಕಳು ಇದೇ ರಸ್ತೆಯಲ್ಲೇ ಓಡಾಟ ಮಾಡಬೇಕಿದೆ. ವಿದ್ಯಾ ವಿಕಾಸ ಶಾಲೆಯ ಆಡಳಿತ ಮಂಡಳಿ ಅವರು ತಮ್ಮ ವಾಹನಗಳನ್ನು ಶಾಲೆಯ ಆವರಣದಲ್ಲಿ ನಿಲುಗಡೆ ಮಾಡುವ ಬದಲು ಶಾಲೆಯ ಸಮೀಪದ ಜಿಲ್ಲಾಧಿಕಾರಿಗಳ ನಿವಾಸದ ಬಳಿಯ ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಕಚೇರಿ ಮತ್ತು ಡಿಡಿಪಿಐ ಕಚೇರಿಯ ಕಾಂಪೌಂಡ್ ಗೋಡೆಯ ರಸ್ತೆಯಲ್ಲಿ ನಿಲುಗಡೆ ಮಾಡುತ್ತಿದ್ದು ಸಾರ್ವಜನಿಕರಿಗೆ, ವಾಹನಗಳ ಚಾಲಕರಿಗೆ ಕಿರಿಕಿರಿ ಆಗುತ್ತಿದೆ.
ನಗರದ ಹೃದಯ ಭಾಗದ ಈ ಪ್ರದೇಶವು ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಸಿಕ್ಕ ಸಿಕ್ಕಲ್ಲಿ ಶಾಲಾ ಬಸ್ ಮತ್ತು ಇತರೆ ವಾಹನಗಳನ್ನು ನಿಲುಗಡೆ ಮಾಡುವುದರಿಂದ ತಿಪ್ಪಜ್ಜಿ ಸರ್ಕಲ್ ವೃತ್ತದಿಂದ ಸಂತೇಹೊಂಡದ ಈ ರಸ್ತೆ ಮಾರ್ಗದಲ್ಲಿ ನಿತ್ಯ ಟ್ರಾಫಿಕ್ ಜಾಮ್ ಆಗಿ ಈ ಮಾರ್ಗದಲ್ಲಿ ಸಂಚರಿಸುವ ನಾಗರಿಕರು, ಪಾದಚಾರಿಗಳು ತೀವ್ರತರವಾದ ತೊಂದರೆ ಅನುಭವಿಸುತ್ತಿದ್ದಾರೆ.
ರಸ್ತೆ ಪಕ್ಕದಲ್ಲೇ ತಮ್ಮ ವಿದ್ಯಾ ಸಂಸ್ಥೆಯ ಬಸ್ ಮತ್ತು ವ್ಯಾನ್ ಗಳನ್ನು ಸಾಲಾಗಿ ನಿಲುಗಡೆ ಮಾಡುತ್ತಿರುವುದರಿಂದ ನಿತ್ಯ ರಸ್ತೆ ಜಾಮ್ ಆಗುತ್ತಿದೆ. ಇದೇ ರಸ್ತೆಯ ಫುಟ್ ಪಾತ್ ಕೂಡಾ ಒತ್ತುವರಿ ಮಾಡಿಕೊಂಡು ಪಾದಚಾರಿಗಳಿಗೆ ಓಡಾಡಲು ರಸ್ತೆ ಇಲ್ಲದಂತಾಗಿದೆ.
ಚಿತ್ರದುರ್ಗ ನಗರದ ಕೆಳಗೋಟೆ, ಜೆಸಿಆರ್ ಬಡಾವಣೆ, ಮಾಜಿ ಸಿಎಂ ಎಸ್.ನಿಜಲಿಂಗಪ್ಪ ಮನೆ ಮುಂಭಾಗದ ಬಡಾವಣೆ, ಬಿ.ಎಲ್ ಗೌಡ ನಗರ, ತುರುವನೂರು ರಸ್ತೆ ಸುತ್ತ ಮುತ್ತ ಇರುವ ಬಡಾವಣೆಗಳ ಜನರು ಸೊಪ್ಪು, ತರಕಾರಿ, ಹೂ, ಹಣ್ಣು, ಹಂಪಲು, ದಿನ ಬಳಕೆ ಸಾಮಗ್ರಿಗಳನ್ನು ಖರೀದಿ ಮಾಡಲು ಪೇಟೆಗೆ ಹೋಗುವ ನಾಗರಿಕರು ಹೈರಾಣಾಗಿ ಹೋಗಿದ್ದಾರೆ.
ಜನಸಂದಣಿ ರಸ್ತೆ:
ತಿಪ್ಪಜ್ಜಿ ವೃತ್ತದಿಂದ ಸಂತೇಹೊಂಡಕ್ಕೆ ಹೋಗುವ ಈ ರಸ್ತೆ ಕಿರಿದಾಗಿದೆ. ಈ ರಸ್ತೆ ಮಾರ್ಗದಲ್ಲಿರುವ ಬಸವೇಶ್ವರ ಚಿತ್ರಮಂದಿರ, ಪೆಟ್ರೋಲ್ ಬಂಕ್, ಎಸ್‌ಬಿಎಂ ವೃತ್ತ, ವಾಸವಿ ಮಹಲ್ ರಸ್ತೆ, ಪ್ರಸನ್ನ ಚಿತ್ರಮಂದಿರ, ಗೋಪಾಲಪುರ ರಸ್ತೆಗೆ ಅನೇಕರು ಈ ಮಾರ್ಗವಾಗಿಯೇ ಹಾದು ಹೋಗುತ್ತಿದ್ದಾರೆ. ಈ ಸ್ಥಳದಲ್ಲಿ ಶಾಲಾ ಬಸ್ ಗಳು ಸೇರಿದಂತೆ ಎಲ್ಲತರಹದ ಲಘು, ಭಾರಿ ಪ್ರಮಾಣದ ವಾಹನಗಳು, ಕಾರುಗಳು ಆಟೋಗಳನ್ನು ರಸ್ತೆಯಲ್ಲಿ ನಿಲುಗಡೆ ಮಾಡುತ್ತಿರುವ ಕಾರಣ ಈ ಮಾರ್ಗದಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದೆ. ಬಿಡಾಡಿ ದನಗಳು, ನಾಯಿಗಳು, ರಸ್ತೆ ತುಂಬ ಓಡಾಡುವುದರಿಂದ ಬೈಕ್, ಕಾರುಗಳು ಇತರೆ ವಾಹನಗಳ ಚಾಲಕರು ಯಮಯಾತನೆ ಪಡಬೇಕಾಗಿದೆ.
ವಾಹನ ದಟ್ಟಣೆ:
ತಿಪ್ಪಜ್ಜಿ ವೃತ್ತ-ಗಾಯಿತ್ರಿ ಸರ್ಕಲ್-ಬಸವೇಶ್ವರ ಚಿತ್ರಮಂದಿರ-ಸಂತೇ ಹೊಂಡ ಮಾರ್ಗದ ಈ ರಸ್ತೆ ಸಮೀಪ ತರಕಾರಿ ಮಾರುಕಟ್ಟೆ ಇರುವುದರಿಂದ ತರಕಾರಿ ಕೊಳ್ಳಲು ನೂರಾರು ಮಂದಿ ಆಗಮಿಸುತ್ತಾರೆ. ಈ ಮಾರ್ಗದ ರಸ್ತೆಯಲ್ಲೇ ಹತ್ತಾರು ವಾಹನಗಳು ನಿಲ್ಲುವುದರಿಂದ ಸಂಚಾರಕ್ಕೆ ಎಲ್ಲಿಲ್ಲದ ಹಿಂಸೆಯಾಗಿದೆ.
ಇದರ ಜೊತೆಯಲ್ಲಿ ಶಾಲಾ ಬಸ್ ಗಳು, ವಾಹನಗಳು, ಲಗೇಜ್ ಆಟೋಗಳು, ಹಳ್ಳಿಗಳ ಕಡೆ ಸಂಚರಿಸುವ ಪ್ಯಾಸೆಂಜರ್ ಆಟೋ, ನಗರದಲ್ಲಿ ಸಂಚರಿಸುವ ಆಟೋಗಳು, ದ್ವಿಚಕ್ರ ಜತೆಗೆ ಕಾರುಗಳು ಇದೇ ಮಾರ್ಗದಲ್ಲಿ ಸಂಚರಿಸುವುದರಿಂದ ವಾಹನ ದಟ್ಟಣೆ ದಿನೇ ದಿನೇ ಹೆಚ್ಚಾಗುತ್ತಿದೆ.
ಇಷ್ಟೆಲ್ಲ ಸಮಸ್ಯೆ ಇದ್ದರೂ ಸಂಚಾರ ಪೊಲೀಸರ ಅನುಪಸ್ಥಿತಿ ಸದಾ ಕಾಡುತ್ತದೆ. ನಗರದ ಪ್ರಮುಖ ವೃತ್ತಗಳನ್ನು ಹೊರತುಪಡಿಸಿ ಬೇರೆಲ್ಲೂ ಸಂಚಾರಿ ಪೊಲೀಸರನ್ನು ನಿಯೋಜಿಸಿಲ್ಲ.
ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಒ ಸೇರಿದಂತೆ ಪೊಲೀಸ್ ಮೇಲಾಧಿಕಾರಿಗಳು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಸತಿ ಗೃಹಗಳು ಇದೇ ರಸ್ತೆಯಲ್ಲಿವೆ. ಜಿಲ್ಲೆಯ ಪ್ರಮುಖ ಅಧಿಕಾರಿಗಳೆಲ್ಲರೂ ಈ ರಸ್ತೆಯಲ್ಲಿ ಸಂಚರಿಸುತ್ತಿದ್ದರೂ ಖಾಸಗಿ ವಿದ್ಯಾ ವಿಕಾಸ ಶಾಲೆಯ ಬಸ್, ಇತರೆ ವಾಹನಗಳನ್ನು ತೆರವು ಮಾಡಿಸುತ್ತಿಲ್ಲ.
ಹೀಗಾಗಿ ವಿದ್ಯಾ ವಿಕಾಸ ಸಂಸ್ಥೆಯ ಆಡಳಿತ ಮಂಡಳಿಯ ಶಾಲಾ ಬಸ್ ಗಳನ್ನು ನಿಲುಗಡೆ ಮಾಡುವ ಸ್ಥಳವನ್ನಾಗಿ ಮಾರ್ಪಡಿಸಿದ್ದಾರೆ. ಕನಿಷ್ಠ ಓರ್ವ ಪೊಲೀಸ್ ಸಿಬ್ಬಂದಿ ನಿಯೋಜಿಸಿ ರಸ್ತೆ ಬದಿಯಲ್ಲೇ ಖಾಯಂ ನಿಲುಗಡೆ ಮಾಡುವ ಬಸ್, ಇತರೆ ವಾಹನಗಳ ನಿಲುಗಡೆಗೆ ಕಡಿವಾಣ ಹಾಕಬೇಕಿದೆ. ಈ ಕಾರ್ಯ ಮಾಡಲು ಸಂಬಂಧಿಸಿದ ಅಧಿಕಾರಿಗಳು ವಿಫಲರಾಗಿದ್ದಾರೆಂದು ಸಾರ್ವಜನಿಕರು ದೂರಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಇಂಥ ಮಾರ್ಗಗಳಲ್ಲಿ ಸಂಚಾರಿ ಪೊಲೀಸರನ್ನು ನಿಯೋಜಿಸಿ ವಾಹನಗಳನ್ನು ನಿಯಂತ್ರಿಸಿ, ಪಾದಚರಿಗಳಿಗೆ, ವಾಹನ ಸವಾರರಿಗೆ, ಶಾಲಾ-ಕಾಲೇಜ್ ಗಳಿಗೆ ತೆರಳು ಮಕ್ಕಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ನೊಂದ ಸಂತ್ರಸ್ತರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.