ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ನಗರದಲ್ಲಿ ಮಧ್ಯರಾತ್ರಿ ಒಂದು ಗಂಟೆವರೆಗೆ ಪಬ್‌ಗಳನ್ನು ತೆರೆಯಲು ಅವಕಾಶ ಮಾಡಿಕೊಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭರವಸೆ ನೀಡಿದ್ದಾರೆ.
ವಿಧಾನಸಭೆ ಕಲಾಪದಲ್ಲಿ ಮಾತನಾಡಿದ ಅವರು, ಬೆಂಗಳೂರಿನ ನಗರ ಅಂತರಾಷ್ಟ್ರೀಯ ಖ್ಯಾತಿ ಹೊಂದಿದ್ದು, ಲೈವ್ ಆಗಿರಬೇಕು. ಈ ಕಾರಣಕ್ಕೆ ತಡರಾತ್ರಿ 1 ಗಂಟೆವರೆಗೆ ಪಬ್ ತೆರೆಯಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಡಿಸಿಎಂ ಭರವಸೆ ನೀಡಿದರು.
ತಡರಾತ್ರಿವರೆಗೆ ಕಾರ್ಯಾಚರಣೆಗೆ ಪಬ್ಗಳಿಗೆ ಆಕಾಶ ನೀಡುವ ವಿಚಾರವಾಗಿ ಬಿಜೆಪಿಯ ಎಚ್ಎಸ್ ಗೋಪಿನಾಥ್ ಅವರು ವಿಧಾನಸಭೆ ಕಲಾಪದಲ್ಲಿ ಗಮನ ಸೆಳೆದರು. ಇದಕ್ಕೆ ಅಬಕಾರಿ ಸಚಿವ ಆರ್‌ಬಿ ತಿಮ್ಮಾಪುರ ಉತ್ತರಿಸುತ್ತಿದ್ದ ವೇಳೆ ಮಧ್ಯ ಪ್ರವೇಶಿಸಿದ ಡಿಸಿಎಂ ಡಿಕೆ ಶಿವಕುಮಾರ್, ಬೆಳಗ್ಗೆ 10ರಿಂದ ರಾತ್ರಿ 11.30 ರ ವರೆಗೆ ಕಾರ್ಯಾಚರಣೆ ನಡೆಸಲು ಪಬ್ಗಳಿಗೆ ಅವಕಾಶ ಇದೆ. ರೆಸ್ಟೋರೆಂಟ್ಗಳಿಗೆ ಹೊಂದಿಕೊಂಡಿರುವ ಪಬ್ಗಳಿಗೆ ರಾತ್ರಿ 1 ಗಂಟೆವರೆಗೆ ತೆರೆದಿರಲು ಅವಕಾಶವಿದೆ. ಇದನ್ನೇ ಎಲ್ಲಾ ಪಬ್ಗಳಿಗೂ ಅನ್ವಯಿಸುವಂತೆ ಮಾಡಬೇಕಿದೆ ಎಂದು ತಿಳಿಸಿದರು.
ಸದ್ಯ ಬೆಳಗ್ಗೆ 10 ರಿಂದ ರಾತ್ರಿ 11:30 ರ ತನಕ ಬೆಂಗಳೂರಿನಲ್ಲಿ ಪಬ್ ಕಾರ್ಯಾಚರಣೆಗೆ ಅವಕಾಶವಿದ್ದು, ನಿಯಮ ಮೀರಿ ವರ್ತಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಮ್ಮಾಪುರ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ನಿಯಮಗಳು ಕಿರುಕುಳ ಆಗಿ ಪರಿಣಮಿಸಬಾರದು. ಬೆಂಗಳೂರು ಅಂತರಾಷ್ಟ್ರೀಯ ಖ್ಯಾತಿಯ ನಗರವಾಗಿದೆ. ಇಲ್ಲಿ ಅನೇಕರು ರಾತ್ರಿ ಕೂಡ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ರಾತ್ರಿ ಕಾರ್ಯಾಚರಣೆ ಸಂಬಂಧ ಇರುವ ಸಮಸ್ಯೆಗಳ ಕುರಿತು ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿವಕುಮಾರ್ ಭರವಸೆ ನೀಡಿದ್ದಾರೆ.