ಮಾಡುವ ಪಾಪಕ್ಕೆ ಮುಂದೆ ಕಾಂಗ್ರೆಸ್ ಪಶ್ಚಾತ್ತಾಪ ಪಡಲಿದೆ-ಆರ್. ಅಶೋಕ್

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕರ್ನಾಟಕದಲ್ಲಿ ತುರ್ತು ಪರಿಸ್ಥಿತಿ ಸೃಷ್ಟಿಯಾಗಿದ್ದು, ಪೊಲೀಸರನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಅರೋಪಿದರು

 ದೊಡ್ಡಬಳ್ಳಾಪುರ ನಗರದ ಬಿ ಜೆ ಪಿ ಕಛೇರಿಯಲ್ಲಿ  ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ.ಕೆ.ಸುಧಾಕರ್‌ಅವರು ಕೋವಿಡ್‌ಸಂದರ್ಭದಲ್ಲಿ ಕೆಲಸ ಮಾಡಿದ್ದರು. ಆ ಸಮಯದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ಮನೆಯಲ್ಲೇ ಕುಳಿತಿದ್ದರು. ಆದರೆ ಈಗ ಅವರ ವಿರುದ್ಧ ಕೋವಿಡ್‌ಹಗರಣದ ಆರೋಪ ಹೊರಿಸಲಾಗಿದೆ. ರಾಜ್ಯಪಾಲರ ಮೇಲೆ ಸರ್ಕಾರ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದು, ವಿಶ್ವವಿದ್ಯಾಲಯದಲ್ಲಿ ಅವರ ಅಧಿಕಾರ ಕಿತ್ತುಕೊಳ್ಳಲು ಪ್ರಯತ್ನ ನಡೆಸಲಾಗಿದೆ. ಕಾಂಗ್ರೆಸ್‌ಶಾಶ್ವತವಾಗಿ ಅಧಿಕಾರದಲ್ಲಿ ಇರಲಿದೆ ಎಂಬ ಚಿಂತನೆಯಲ್ಲಿದೆ. ಕಾಂಗ್ರೆಸ್‌ಮಾಡುವ ಪಾಪಕ್ಕೆ ಮುಂದಿನ ದಿನಗಳಲ್ಲಿ ಪಶ್ಚಾತಾಪ ಪಡಬೇಕಾಗುತ್ತದೆ ಎಂದು ಹೇಳಿದರು. 

 ಶಾಸಕ ಮುನಿರತ್ನ ಬಿಜೆಪಿಗೆ ಮುನ್ನ ಕಾಂಗ್ರೆಸ್‌ನಲ್ಲೇ ಇದ್ದರು. ಅವರು ಕಾಂಗ್ರೆಸ್‌ನಲ್ಲಿದ್ದಾಗ ಕಾಂಗ್ರೆಸ್‌ನಾಯಕರೇ ಅವರನ್ನು ಬೆಂಬಲಿಸಿದ್ದರು. ರಾಯಚೂರಿನಲ್ಲಿ ಪಿಎಸ್‌ಐ ಕುಟುಂಬದವರು 16 ಗಂಟೆ ಬೀದಿಯಲ್ಲಿ ಕುಳಿತು ಪ್ರತಿಭಟನೆ ಮಾಡಿದಾಗ ಶಾಸಕರನ್ನು ಬಂಧಿಸಲಿಲ್ಲ. ಕೃಷಿ ಅಧಿಕಾರಿ ವೀಡಿಯೋ ಮಾಡಿ ಕಳುಹಿಸಿದಾಗ ಸಚಿವರನ್ನು ಬಂಧನ ಮಾಡಿಲ್ಲ. ಮುನಿರತ್ನ ತಪ್ಪು ಮಾಡಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಿ. ಅದನ್ನು ಬಿಟ್ಟು ಏಕಾಏಕಿ ಬಂಧಿಸಿದ್ದು ಏಕೆ ಎಂದು ಪ್ರಶ್ನೆ ಮಾಡಿದರು. 

 ಸಿದ್ದರಾಮಯ್ಯ ಈ ಹಿಂದೆ ಸಿಎಂ ಆಗಿದ್ದಾಗ ಅವರ ವಿರುದ್ಧ 65 ಪ್ರಕರಣಗಳಿದ್ದವು. ಆದರೆ ಅವರು ಮಾತ್ರ ಶುದ್ಧ ಎನ್ನಲಾಗುತ್ತದೆ. ಬಿಜೆಪಿಯವರು ಸಂವಿಧಾನದ ಬಗ್ಗೆ ಸಣ್ಣ ಮಾತು ಹೇಳಿದ್ದಕ್ಕೆ, ಅದನ್ನೇ ದೊಡ್ಡ ಸಮಸ್ಯೆ ಎಂಬಂತೆ ಬಿಂಬಿಸಲಾಗಿದೆ. ರಾಹುಲ್‌ಗಾಂಧಿ ವಿದೇಶಕ್ಕೆ ಹೋಗಿ ಮೀಸಲು ಬದಲಾಯಿಸುವ ಬಗ್ಗೆ ಮಾತನಾಡಿದ್ದರು. ಈ ಕುರಿತು ಕಾಂಗ್ರೆಸ್‌ಪ್ರತಿಭಟನೆ ಮಾಡಲಿ ಎಂದರು.

 ಸೋಲುವ ಭಯ-
ಜವಹರಲಾಲ್‌ನೆಹರೂ ಅಧಿಕಾರದಲ್ಲಿದ್ದಾಗ ಏಕಕಾಲಕ್ಕೆ ಚುನಾವಣೆ   ನಡೆಯುತ್ತಿತ್ತು. ಈಗ ಅದನ್ನೇ ಎನ್‌ಡಿಎ ಸರ್ಕಾರ ಮಾಡಲು ಹೊರಟರೆ ತಪ್ಪು ಎನ್ನಲಾಗುತ್ತಿದೆ. ಇಡೀ ವರ್ಷ ಚುನಾವಣೆ ನಡೆಯುವುದನ್ನು ತಪ್ಪಿಸಲು ಒಂದೇ ಬಾರಿಗೆ ಚುನಾವಣೆ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದರಿಂದ ಉಳಿತಾಯವಾದ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಬಹುದು. ಆದರೆ ಈ ರೀತಿ ಮಾಡಿದರೆ ಸೋಲುತ್ತೇವೆ ಎಂಬ ಭಯ ಕಾಂಗ್ರೆಸ್‌ಗಿದೆ. ಆದ್ದರಿಂದ ಈ ಹೊಸ ವ್ಯವಸ್ಥೆಯನ್ನು ಕಾಂಗ್ರೆಸ್‌ನಾಯಕರು ವಿರೋಧಿಸುತ್ತಿದ್ದಾರೆ ಎಂದರು.  

 ಬಿಜೆಪಿ ಸದಸ್ಯತ್ವ ಅಭಿಯಾನ-
ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಆರ್‌.ಅಶೋಕ, ಬಿಜೆಪಿ ಅತಿ ಹೆಚ್ಚು ಸದಸ್ಯರನ್ನು ಹೊಂದಿದ್ದು, ಈಗ ಸದಸ್ಯತ್ವ ಅಭಿಯಾನ ಮಾಡಲಾಗುತ್ತಿದೆ. ಬಿಜೆಪಿ ಪಕ್ಷ ಎಂದರೆ ದೇವಾಲಯ ಇದ್ದಂತೆ. ಇಲ್ಲಿ ಕಾರ್ಯಕರ್ತರಿಗೆ ಹೆಚ್ಚು ಅವಕಾಶವಿದೆ. ಎಲ್ಲ ಕಾರ್ಯಕರ್ತರು ನಿಗದಿತ ಗುರಿ ಇಟ್ಟುಕೊಂಡು ಜನರನ್ನು ಪಕ್ಷಕ್ಕೆ ಸೇರಿಸಬೇಕು. ಅನೇಕ ಸಲ ಕಾರ್ಯಕರ್ತರ ಕುಟುಂಬದವರೇ ಸದಸ್ಯರಾಗಿ ಪಕ್ಷಕ್ಕೆ ಸೇರಿರುವುದಿಲ್ಲ. ಅಂತಹ ಕಡೆ ಗಮನಿಸಿ ಪಕ್ಷಕ್ಕೆ ಹೆಸರು ನೋಂದಾಯಿಸಬೇಕು ಎಂದು ಕಿವಿಮಾತು ಹೇಳಿದರು. 

 ಹೊಸಕೆರೆಹಳ್ಳಿಯ ವಿಶೇಷ ಚೇತನ ಕಾರ್ಯಕರ್ತೆಯೊಬ್ಬರು ಒಂದೇ ದಿನದಲ್ಲಿ 940 ಜನರನ್ನು ಸದಸ್ಯರಾಗಿ ಪಕ್ಷಕ್ಕೆ ಸೇರಿಸಿದ್ದಾರೆ. ಅವರು ಒಂದು ಸಾವಿರ ಗುರಿ ತಲುಪುವುದಾಗಿ ಹೇಳಿದ್ದರು. ಇದನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ಸದಸ್ಯತ್ವ ಅಭಿಯಾನ ಮಾಡಬೇಕು. ಬೂತ್‌ಮಟ್ಟದಲ್ಲಿ ಐದು ಜನರನ್ನು ಸದಸ್ಯತ್ವ ಅಭಿಯಾನಕ್ಕಾಗಿ ಕೆಲಸ ಮಾಡಲು ನಿಯೋಜಿಸಬೇಕು. ಈ ಮೂಲಕ ಕೆಲಸವನ್ನು ವಿಂಗಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ತಾಲ್ಲೂಕು ಬಿ ಜೆ ಪಿ ಯ ಕಾರ್ಯಕರ್ತರು ಪದಾಧಿಕಾರಿಗಳು ಹಾಜರಿದ್ದರು

 

- Advertisement -  - Advertisement - 
Share This Article
error: Content is protected !!
";