ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಸರಕಾರಿ ಶಾಲೆಗಳ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡಲು ಶಾಸಕನಾಗಿ ನಾನು ಸದಾ ಬದ್ಧನಿದ್ದೇನೆ, ೧೧ ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಕಾರಿಗಳು ಭೂಮಿ ಪೂಜೆ ಮಾಡಲಾಗಿದೆ ಎಂದು ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ ಅಧ್ಯಕ್ಷ ಹಾಗೂ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಹೇಳಿದರು.
ಚಿತ್ರದುರ್ಗ ತಾಲೂಕಿನ ತುರುವನೂರು ಹೋಬಳಿಯ ಬುಧವಾರ ಕೂನಬೇವು ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಭೂಮಿ ಪೂಜೆ, ಚಿಕ್ಕಪ್ಪನಹಳ್ಳಿ, ಹಿರೇಕಬ್ಬಿಗೆರೆ, ಚಿಕ್ಕಗೊಂಡನಹಳ್ಳಿ ಗ್ರಾಮಗಳ ಸಿ.ಸಿ.ರಸ್ತೆ ಕಾಮಗಾರಿಯ ಭೂಮಿ ಪೂಜೆ ನೇರವೇರಿಸಿ ಮಾತನಾಡಿದರು.
ಸಮಾಜದಲ್ಲಿ ಶೈಕ್ಷಣಿಕ ಪ್ರಗತಿಯಾದರೆ ಅದು ಸಾಮಾಜಿಕ ಪರಿವರ್ತನೆಯ ಹೊಸ ಹೊಳಪು ಮೂಡಿದಂತೆ. ಶೈಕ್ಷಣಿಕ ಪ್ರಗತಿಯ ಆಧಾರದ ಮೇಲೆ ಆ ಸಮಾಜ ಭವಿಷ್ಯ ನಿಂತಿದೆ. ಶಾಲೆ ಒಂದು ಸಾಮಾಜಿಕ ಪರಿವರ್ತನೆಯ ಕೇಂದ್ರ ಆಗಬೇಕು. ಸಮಾಜದಲ್ಲಿ ಏನೇನು ಕೊರತೆಗಳಿವೆಯೋ ಅವು ಶಾಲೆಯಿಂದ ನೀಗುವಂತಾಗಬೇಕು. ಆದ್ದರಿಂದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕ ವಾತಾವರಣ ಸೃಷ್ಟಿಸುವ ದೊಡ್ಡ ಜವಾಬ್ದಾರಿ ಪೋಷಕರು ಮತ್ತು ಶಿಕ್ಷಕರ ಮೇಲಿದೆ ಎಂದರು.
ನನ್ನ ಕ್ಷೇತ್ರದಲ್ಲಿ ಶಾಲೆಗಳ ಸುಧಾರಣೆಗೆಯನ್ನು ನಿರಂತರವಾಗಿ ಮಾಡಿಕೊಡು ಬಂದಿದ್ದು ಚಳ್ಳಕೆರೆ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಸುಮಾರು ೩೮೦ ಕ್ಕೂ ಹೆಚ್ಚು ನೂತನ ಶಾಲಾ ಕಾಲೇಜು ಕೊಠಡಿಗಳ ನಿರ್ಮಾಣ ಮಾಡಲಾಗಿದ್ದು. ಇಂದು ಸಹ ಕೂನಬೇವು ಗ್ರಾಮದಲ್ಲಿ ೭೨ ಲಕ್ಷ ವೆಚ್ಚದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ೪ ನೂತನ ಕೊಠಡಿಗಳ ನಿರ್ಮಾಣಕ್ಕೆ ಭೂಮಿ ಫುಜೆ ನೇರವೇರಿಸಿದ್ದೇನೆ ಎಂದರು.
ಚಿಕ್ಕಗೊಂಡನಹಳ್ಳಿ ಗ್ರಾಮದಲ್ಲಿ ಚಿಕ್ಕಗೊಂಡನಹಳ್ಳಿ ಗ್ರಾಮದಿಂದ ಚಿಕ್ಕಪ್ಪನಹಳ್ಳಿ ಗ್ರಾಮದವೆರೆಗೆ ೪.೫೦ ಕೋಟಿ ವೆಚ್ಚದಲ್ಲಿ ೭ ಕಿಲೋ ಮೀಟರ್ ರಸ್ತೆ ಕಾಮಗಾರಿ ಮತ್ತು ಮಾಳೇನಹಳ್ಳಿಯಿಂದ ಹಿರೇಕಬ್ಬಿಗೆರೆ, ಶಿವನಕೆರೆ ದೇವಸ್ಥಾನವರಗೆ ೪ ಕೋಟಿ ವೆಚ್ಚದ ರಸ್ತೆ, ಚಿಕ್ಕಗೊಂಡನಳ್ಳಿ ಗ್ರಾಮದಲ್ಲಿ ೧ ಕೋಟಿ ವೆಚ್ಚದ ಸಿ.ಸಿ.ರಸ್ತೆ ಮತ್ತು ಹಿರೇಕಬ್ಬಿಗೆರೆ ಗ್ರಾಮದಲ್ಲಿ ೨೦ ಲಕ್ಷದ ವೆಚ್ಚದ ಸಿ ಸಿ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ಮಾಡಲಾಗಿದ್ದು ಎಲ್ಲಾ ರಸ್ತೆಗಳನ್ನು ಅಚ್ಚುಕಟ್ಟಾಗಿ ಮತ್ತು ವಿಶಾಲವಾಗಿ ನಿರ್ಮಾಣ ಮಾಡಲು ಸೂಚಿಸಿದ್ದು ಸಾರ್ವಜನಿಕರು ಸಹ ಅಧಿಕಾರಿಗಳಿಗೆ ಸಹಕಾರ ನೀಡಿ ಗುಣಮಟ್ಟದ ಕೆಲಸ ಮಾಡಿಸಿಕೊಳ್ಳುವ ಮೂಲಕ ಗ್ರಾಮವನ್ನು ಸುಂದರವಾಗಿಟ್ಟುಕೊಳ್ಳಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಇಓ ರವಿಕುಮಾರ್, ಕ್ಷೇತ್ರ ಶಿಕ್ಷಣಧಿಕಾರಿ ಎಸ್.ನಾಗಭೂಷಣ್, ಉಪ ತಹಶೀಲ್ದಾರ್ ಪ್ರಕಾಶ್, ಮಾಜಿ ಜಿ.ಪಂ ಸದಸ್ಯ ಬಾಬುರೆಡ್ಡಿ, ಕೂನಬೇವು ಗ್ರಾಮ ಪಂಚಾಯತಿ ಅಧ್ಯಕ್ಷೆ ಪದ್ಮಕ್ಕ, ಮಾಡನಾಯಕನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ರಾಜೇಶ್ ಮತ್ತು ಗ್ರಾಮ ಪಂಚಾಯತಿ ಸದಸ್ಯರು ಮತ್ತು ಸಾರ್ವಜನಿಕರು ಇದ್ದರು.

