ತುಂಗಭದ್ರಾ ಜಲಾಶಯದಿಂದ ಎರಡು ತಿಂಗಳಿನಲ್ಲಿ ಎಲ್ಲ ಗ್ರಾಮಗಳಿಗೂ ಕುಡಿವ ನೀರು- ರಘುಮೂರ್ತಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲೆಯಲ್ಲಿ ಎರಡು ತಿಂಗಳಲ್ಲಿ ತುಂಗಭದ್ರಾ ಜಲಾಶಯದಿಂದ ಪೂರೈಸಲಾಗುವ ಬಹುನೀರು ಕುಡಿಯುವ ನೀರು ಯೋಜನೆಯಡಿ ಪ್ರತಿ ಮನೆ ಮನೆಗೆ ಶುದ್ದ ಕುಡಿಯುವ ನೀರು ಹರಿಯಲಿದೆ ಎಂದು ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಹೇಳಿದರು.

      ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಗ್ರಾಮೀಣ ನೀರು ಸರಬರಾಜು ಯೋಜನೆಯಡಿ ಜಿಲ್ಲೆಗೆ ಅನುಷ್ಠಾನವಾಗುತ್ತಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

- Advertisement - 

      ತುಂಗಾಭದ್ರಾ ಜಲಾಶಯದ ಹಿನ್ನೀರಿನಿಂದ ತುಮಕೂರು ಜಿಲ್ಲೆಯ ಪಾವಗಡ ವಿಧಾನಸಭಾ ಕ್ಷೇತ್ರ ಮತ್ತು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಮತ್ತು ಚಳ್ಳಕೆರೆ ವಿಧಾನಸಭಾ ಕ್ಷೇತ್ರ, ವಿಜಯನಗರ ಜಿಲ್ಲೆಯ ಕೂಡ್ಲಿಗಿ, ಹೊಸಪೇಟೆ ಕ್ಷೇತ್ರಗಳಿಗೆ ಬಹುಗ್ರಾಮ ಕುಡಿಯುವ ನೀರನ್ನು  ಪ್ರಾಯೋಗಿಕವಾಗಿ ಓವರ್ ಟ್ಯಾಂಕ್ ಗಳಿಗೆ ಬಿಡಲಾಗುತ್ತಿದ್ದು ಶೀಘ್ರವಾಗಿ ಎಲ್ಲಾ ಪೈಪ್ ಲೈನ್ ಗಳನ್ನು ಪರಿಶೀಲಿಸಿ ಎಲ್ಲೆಲ್ಲಿ ವ್ಯತ್ಯಾಸಗಳಾಗಿದೆ ಅದನ್ನು ಸರಿಪಡಿಸುವ ಮೂಲಕ ಎಲ್ಲಾ ಹಳ್ಳಿಗಳ ಟ್ಯಾಂಕ್ ಗಳಿಗೆ ನೀರು ಹರಿಸುವ ಕೆಲಸ ಮಾಡಿ ಎಂದು ಟಿ. ರಘುಮೂರ್ತಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.  

      ತುಂಗಭದ್ರಾ ಜಲಾಶಯದಿಂದ ನೀರು ಎತ್ತುವ ಮೂಲಕ ಬಹುಗ್ರಾಮ ಯೋಜನೆಯಡಿ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುತ್ತಿದ್ದು ಎಲ್ಲಾ ಮುಖ್ಯ ಹಾಗೂ ವಿತರಣಾ ಪೈಪ್ ಲೈನ್ ಕಾಮಗಾರಿಗಳನ್ನು ಸಂಪೂರ್ಣ ಪರಿಶೀಲನೆ ನಡೆಸಬೇಕು. ನೀರು ಹರಿಸುವ ಸಂದರ್ಭದಲ್ಲಿ ಯಾವುದೇ ತೊಂದರೆಯಾಗಬಾರದು ಎಂದು ತಿಳಿಸಿದರು.

- Advertisement - 

      ಬಹು ಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯಲ್ಲಿ ಹೆಚ್ಚುವರಿಯಾಗಿ ಸೇರ್ಪಡೆಯಾಗಿರುವ ಚಿತ್ರದುರ್ಗ ತಾಲೂಕಿನಲ್ಲಿನ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ತುರುವನೂರು ಹೋಬಳಿಯ 59 ಗ್ರಾಮಗಳಿಗೂ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ.

      ಪ್ರತಿ ಹಳ್ಳಿಗಳಲ್ಲಿ ಜನಸಂಖ್ಯೆ ಅನುಗುಣವಾಗಿ ಟ್ಯಾಂಕ್ ಗಳನ್ನು ನಿರ್ಮಿಸಲಾಗಿದೆ. ಗುಣಮಟ್ಟ ಮತ್ತು ಸ್ವಚ್ಚವಾಗಿರುವ ಕಡೆ ಬಿಟ್ಟು ಉಳಿದಂತೆ ಅಗತ್ಯವಿರುವ ಎಲ್ಲಾ ಕಡೆ ಹೊಸ ಟ್ಯಾಂಕ್ ಗಳನ್ನು ನಿರ್ಮಾಣ ಮಾಡುವ ಮೂಲಕ ಜನರ ಆರೋಗ್ಯ ದೃಷ್ಟಿಯಿಂದ ಶುದ್ದ ನೀರು ಸರಬರಾಜು ಮಾಡಲು ಅಗತ್ಯ ಕ್ರಮ ವಹಿಸಲಾಗಿದೆ ಎಂದು ಹೇಳಿದರು.

      ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಸ್ ಆಕಾಶ್, ಜಿ.ಪಂ ಉಪಕಾರ್ಯದರ್ಶಿ ಡಾ. ರಂಗಸ್ವಾಮಿ, ಕುಡಿಯುವ ನೀರು ಸರಬರಾಜು ಇಲಾಖೆ ಅಧೀಕ್ಷಕ ಅಭಿಯಂತರ  ಇಂದ್ರಕುಮಾರ್, ಕಾರ್ಯಪಾಲಕ ಅಭಿಯಂತರ ಅಮರನಾಥ್ ಜೈನ್, ಸಹಾಯಕ ಕಾರ್ಯಪಾಲಕ ಅಭಿಯಂತರ ಮಂಜುನಾಥ್, ಮೇಘ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಎಜಿಎಂ ಜೈರಾಮ್, ಜಿಎಂ ಕೋಟೇಶ್ವರ ರಾವ್, ಪಿ.ಎಂ.ಸಿ.ಎ.ಜಿ.ಎಂ. ಶ್ರೀನಾಥ್, ಕ್ವಾಲಿಟಿ ಕಂಟ್ರೋಲ್ ಪಿಎಂಸಿ ಮೊಹಮ್ಮದ್ ಜುಬೇರ್, ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

 

 

Share This Article
error: Content is protected !!
";