ನಾಡಿಗೆ ಸುಭೀಕ್ಷೆ ದೊರೆತು ರೈತರ ಬದುಕು ಹಸನಾಗಲಿ: ರಘುಸ್ವಾಮಿ 

News Desk

ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಮುಂಗಾರಿನಲ್ಲಿ ನಾಡಿನಾದ್ಯಂತ ಉತ್ತಮ ಮಳೆಯಾಗಿದೆ. ಬೆಳೆಯೂ ಕೂಡ ಉತ್ತಮವಾಗಿ ಬರಲಿ, ಬೆಳೆದ ಬೆಲೆಗೆ ಒಳ್ಳೆಯ ಬೆಲೆ ದೊರೆತು ರೈತರ ಬದುಕು ಹಸನಾಗಲಿ. ನಾಡು ಸುಭೀಕ್ಷೆಯಿಂದ ಕೂಡಿರಲಿ ಎಂದು ಅರ್ಚಕ ರಘುಸ್ವಾಮಿ ಆಶಿಸಿದರು.

ತಾಲೂಕಿನ ರಾಮಿನಕೊಪ್ಪದಲ್ಲಿಂದು (ಬುಧವಾರ) ಬೆಳಿಗ್ಗೆ ಹಮ್ಮಿಕೊಂಡಿದ್ದ ಶ್ರೀ ಶನೈಶ್ಚರ ಸ್ವಾಮಿ ಮತ್ತು ಶ್ರೀ ಚಕ್ಕಾಪುರದಮ್ಮ ಮೂಲ ದೇವಾಲಯದ ದೇವರುಗಳ ಗಂಗಾಪೂಜೆ ನಂತರ ಪಟ್ಟಾಭಿಷೇಕ, ದೀಪಾರಾಧನೆ ಮೂಲಕ ಶರನ್ನವರಾತ್ರಿ ಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

 ಉತ್ತಮ ಬೆಳೆ ಬಂದಾಗ ಬೆಲೆ ಇರಲ್ಲ. ಬೆಲೆ ಇದ್ದಾಗ ಬೆಳೆ ಇರಲ್ಲ. ಮಾರುಕಟ್ಟೆಯ ಅಸ್ಥಿರತೆಯಿಂದಾಗಿ ರೈತರು ಪ್ರತಿವರ್ಷ ಸಂಕಷ್ಟ ಎದುರಿಸುತ್ತಲೇ ಬರುತ್ತಿದ್ದಾರೆ. ರೈತಾಪಿ ಕುಟುಂಬದ ಯುವಜನರು ಕೃಷಿಯ ಸಹವಾಸವೇ ಬೇಡವೆಂದು ನಗರ-ಪಟ್ಟಣಗಳ ಕಡೆ ಮುಖ ಮಾಡಿದ್ದಾರೆ. ಇದರಿಂದಾಗಿ ಮುಂಬರುವ ವರ್ಷಗಳಲ್ಲಿ ಕೃಷಿ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

 ಮಲೆನಾಡಿನ ರೈತರು, ಅದರಲ್ಲೂ ಅಡಿಕೆ ಬೆಳೆಗಾರರು ಕೊಳೆರೋಗ, ಎಲೆಚುಕ್ಕಿ ರೋಗ, ಬೆಲೆ ಕುಸಿತ, ಕೂಲಿಕಾರರ ಕೊರತೆ ಸೇರಿದಂತೆ ಪ್ರತಿವರ್ಷ ಒಂದಿಲ್ಲೊಂದು ಸಮಸ್ಯೆಯನ್ನು ಎದುರಿಸುತ್ತಲೇ ಬರುತ್ತಿದ್ದಾರೆ. ಕಾಡಾನೆ ಮತ್ತು ಕಾಡುಪ್ರಾಣಿಗಳ ಹಾವಳಿ ಕೂಡ ಹೆಚ್ಚುತ್ತಿದ್ದು ವರ್ಷಿಂದೊರ್ಷ ಬೆಳೆ ಹಾನಿ ಪ್ರಮಾಣ ಹೆಚ್ಚುತ್ತಿದೆ ಎಂದು ಆತಂಕಪಟ್ಟರು.

 ಶರನ್ನವರಾತ್ರಿಯ ಸಂದರ್ಭದಲ್ಲಿ ಶಕ್ತಿ ದೇವತೆಯ ಆರಾಧನೆ ನಡೆಯುತ್ತದೆ. ಹೆಣ್ಣು ಶಕ್ತಿ ಸ್ವರೂಪಿಣಿ. ನಮ್ಮ ಸಂಸ್ಕೃತಿಯಲ್ಲಿ ಹೆಣ್ಣಿಗೆ ಮಹತ್ವದ ಸ್ಥಾನಮಾನ ನೀಡಲಾಗಿದೆ. ಆದರೆ ಆಧುನಿಕ ಕಾಲಘಟ್ಟದಲ್ಲಿ ಹೆಣ್ಣಿನ ಮೇಲಿನ ಶೋಷಣೆ, ಅತ್ಯಾಚಾರ ಹೆಚ್ಚುತ್ತಿದೆ. ಇದನ್ನು ನಿಯಂತ್ರಿಸಲು ಕಾನೂನಿಂದಷ್ಟೇ ಸಾಧ್ಯವಿಲ್ಲ. ಪ್ರತಿಯೊಬ್ಬ ಪುರುಷನೂ ನೈತಿಕತೆ, ಸಚ್ಚಾರಿತ್ರ್ಯ, ಉತ್ತಮ ಮನಸ್ಥಿತಿಯನ್ನು ಕಾಪಾಡಿಕೊಳ್ಳಲು ಧಾರ್ಮಿಕ ಆಚರಣೆಗಳನ್ನು ಅಳವಡಿಸಿಕೊಳ್ಳಬೇಕು. ಈ ಮೂಲಕ ಮಹಾತ್ಮ ಗಾಂಧೀಜಿಯವರ ಆದರ್ಶ ಸಮಾಜ ನಿರ್ಮಿಸಬೇಕೆಂದು ಕರೆ ನೀಡಿದರು.

 ಇದೇ ಸಂದರ್ಭದಲ್ಲಿ ಗಂಗಾಪೂಜೆ ನಂತರ ವಾದ್ಯಮೇಳದೊಂದಿಗೆ ಉತ್ಸವ ಮೂರ್ತಿಗಳನ್ನು ಪಲಕ್ಕಿಯಲ್ಲಿ ಹೊತ್ತು ಒಡಪು ಹಾಡುತ್ತ ಗ್ರಾಮದ ಬೀದಿಯಲ್ಲಿ ಮೆರವಣಿಗೆ ನಡೆಸಿ ದೇವಾಲಯದ ಆವರಣಕ್ಕೆ ತರಲಾಯಿತು.

ವಿಶೇಷ ವಸ್ತ್ರ ಹಾಗೂ ಪುಷ್ಪದೊಂದಿಗೆ ಸಿಂಗರಿಸಲಾಯಿತು. ಭಕ್ತಾಧಿಗಳು ಪಾಲ್ಗೊಂಡು ಶರನ್ನವರಾತ್ರಿ ಮಹೋತ್ಸವದ ಚಾಲನೆಯನ್ನು ಸಂಪನ್ನಗೊಳಿಸಿದರು.

 

 

- Advertisement -  - Advertisement - 
Share This Article
error: Content is protected !!
";