ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮೊಹಬ್ಬತ್ ಕಿ ದುಕಾನ್ (ಪ್ರೇಮದ ಅಂಗಡಿ) ಎಂದು ಬಾಯಲ್ಲಿ ಹೇಳುತ್ತಲೇ ದ್ವೇಷದ ಹೋಲ್ ಸೇಲ್ ಅಂಗಡಿ ಇಟ್ಟಿರುವ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರ ಸಹವಾಸ ದೋಷದಿಂದ ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಆ ದ್ವೇಷದ ಗಾಳಿ ತಗುಲಿದಂತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿ ಕಾರಿದ್ದಾರೆ.
ಸನ್ಮಾನ್ಯ ಮಲ್ಲಿಕಾರ್ಜುನ ಖರ್ಗೆಅವರೇ, ಪ್ರಧಾನಿ ಮೋದಿ ಅವರನ್ನ ಮೌತ್ ಕಾ ಸೌದಾಗರ್, ಚಾಯ್ ವಾಲಾ, ಚೌಕಿದಾರ್ ಚೋರ್ ಹೈ ಎಂದೆಲ್ಲ ನಿಂದಿಸಿ ಈಗಾಗಲೇ ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ದೋಣಿಯಾಗಿದೆ.
ಈಗ ಆ ಮುಳುಗುತ್ತಿರುವ ದೋಣಿಗೆ ತಮ್ಮನ್ನ ನಾವಿಕನನ್ನಾಗಿ ಮಾಡಿ ಆರ್ ಎಸ್ಎಸ್, ಬಿಜೆಪಿ, ಮೋದಿ ಅವರ ವಿರುದ್ಧ ದ್ವೇಷ ಕಾರುವ ಕೆಲಸ ಕೊಟ್ಟಿದ್ದಾರೆ ಎಂದು ಅವರು ವಾಗ್ದಾಳಿ ಮಾಡಿದ್ದಾರೆ.
ತಮ್ಮಂತಹ ಮುತ್ಸದ್ಧಿ ನಾಯಕರಿಗೆ ಇಂತಹ ವಿಷ ಕಾರುವ ಭಾಷೆ ಶೋಭೆ ತರುವುದಿಲ್ಲ. ಒಂದು ಕುಟುಂಬವನ್ನ ಮೆಚ್ಚಿಸಲು ಇಂತಹ ಕೀಳು ಮಟ್ಟದ ಭಾಷೆ ಪ್ರಯೋಗ ಮಾಡಿ ತಾವು ಅವರ ಮಟ್ಟಕ್ಕೆ ಇಳಿಯಬೇಡಿ ಎಂದು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆರ್.ಅಶೋಕ್ ಕಿವಿ ಮಾತು ಹೇಳಿದ್ದಾರೆ.