ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮತ ಕಳ್ಳತನ ಮಾಡಿ ಮೋದಿ ಪ್ರಧಾನಿ ಆಗಿದ್ದಾರೆ. ಸಂವಿಧಾನದ ಮೇಲೆ ಚುನಾವಣಾ ಆಯೋಗ ದಾಳಿ ಮಾಡಿದರೆ ನಿಮ್ಮ ಮೇಲೆ ನಾವು ದಾಳಿ ಮಾಡುತ್ತೇವೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಎಚ್ಚರಿಕೆ ನೀಡಿದರು.
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಮ್ಮ ಮತ, ನಮ್ಮ ಹಕ್ಕು, ನಮ್ಮ ಹೋರಾಟ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಂವಿಧಾನ ರಕ್ಷಣೆ ಮಾಡುವ ಕೆಲಸ ಕಾಂಗ್ರೆಸ್ ಮಾಡಿದೆ. ಸಂವಿಧಾನ ಪುಸ್ತಕದಲ್ಲಿ ಭಾರತದ ಸಾವಿರಾರು ವರ್ಷದ ಇತಿಹಾಸ ಅಡಗಿದೆ. ಈ ಪುಸ್ತಕದಲ್ಲಿ ಬಸವಣ್ಣ, ನಾರಾಯಣ ಗುರು, ಪುಲೆಯವರ ಧ್ವನಿ ಅಡಗಿದೆ. ಇದರ ಅಡಿಪಾಯ ಏನೆಂದರೆ ಅದು ಒಬ್ಬ ವ್ಯಕ್ತಿ ಒಬ್ಬ ಮತ. ಈ ಸಂವಿಧಾನ ನಾಗರಿಕರಿಗೆ ಏಕ ಮತದ ಅಧಿಕಾರ ಕೊಡುತ್ತದೆ. ಮೋದಿ ಅವರು ಕಳೆದ ಚುನಾವಣೆಯಲ್ಲಿ ಸಂವಿಧಾನದ ಮೇಲೆ ದಾಳಿ ಮಾಡಿದರು. ಸಾಂವಿಧಾನಿಕ ಸಂಸ್ಥೆ ಮುಗಿಸುವ ಕೆಲಸವನ್ನು ಅವರು ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.
ಕಳೆದ ಲೋಕಸಭಾ ಚುನಾವಣೆ ಬಳಿಕ ನಮ್ಮ ಮುಂದೆ ಒಂದು ಪ್ರಶ್ನೆ ಉದ್ಭವಿಸಿತ್ತು. ಮಹಾರಾಷ್ಟ್ರ ಚುನಾವಣೆ ನಡೆಯಿತು. ಲೋಕಸಭೆಯಲ್ಲಿ ಮಹಾರಾಷ್ಟ್ರದಲ್ಲಿ ಇಂಡಿಯಾ ಗೆದ್ದಿತ್ತು. ನಾಲ್ಕು ತಿಂಗಳ ಬಳಿಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮಹಾರಾಷ್ಟ್ರದಲ್ಲಿ ಗೆಲುವು ಸಾಧಿಸಿತ್ತು. ಅಚ್ಚರಿದಾಯಕ ಫಲಿತಾಂಶ ಆಗಿತ್ತು. ಮಹಾರಾಷ್ಟ್ರದಲ್ಲಿ ಹೊಸದಾಗಿ ಒಂದು ಕೋಟಿ ಜನರು ಮತದಾನ ಮಾಡಿದ್ದಾರೆ. ಲೋಕಸಭೆಯಲ್ಲಿ ಆ ಒಂದು ಕೋಟಿ ಜನ ಮತ ಮಾಡಿರಲಿಲ್ಲ. ಎಲ್ಲಿ ಹೊಸ ಮತದಾರರು ಮತದಾನ ಮಾಡಿದ್ದಾರೆ ಅವರು ಗೆದ್ದಿದ್ದಾರೆ. ಲೋಕಸಭೆಯಲ್ಲಿ ಸಿಕ್ಕಂತೆ ನಮಗೆ ವಿಧಾನಸಭೆ ಚುನಾವಣೆಯಲ್ಲೂ ಮತ ಪ್ರಮಾಣ ಸಿಕ್ಕಿದೆ. ಹೊಸದಾಗಿ ಮತದಾರರಿದ್ದ ಕ್ಷೇತ್ರದಲ್ಲಿ ಬಿಜೆಪಿಗರು ಗೆದ್ದಿದ್ದಾರೆ. ಆಗ ನಮಗೆ ಸಂದೇಹ ಬಂದಿತ್ತು ಎಂದು ರಾಹುಲ್ ಗಾಂಧಿ ದೂರಿದರು.
ನಮ್ಮ ಸರ್ವೆ ಪ್ರಕಾರ ಕರ್ನಾಟಕದಲ್ಲಿ 15-16 ಸೀಟು ಗೆಲ್ಲುವ ನಿರೀಕ್ಷೆ ಇತ್ತು. ಆದರೆ ನಾವು 9 ಸೀಟು ಗೆದ್ದೆವು. ಚುನಾವಣಾ ಆಯೋಗದಿಂದ ಸಾಫ್ಟ್ ಕಾಪಿ ಕೇಳಿದ್ದೆವು. ಆದರೆ ಅವರು ನಿರಾಕರಿಸಿದ್ದರು. ಮತಗಟ್ಟೆಗಳ ವಿಡಿಯೋ ಕೇಳಿದ್ದೆವು. ಅದನ್ನೂ ಕೊಡಲಿಲ್ಲ. ಬದಲಿಗೆ ಕಾನೂನು ಬದಲಾವಣೆ ಮಾಡಿದರು. ಒಂದು ಲೋಕಸಭೆ ಕ್ಷೇತ್ರದಲ್ಲಿ ವಿಶ್ಲೇಷಣೆ ಮಾಡಿದೆವು. ಮಹದೇವಪುರದ ಕ್ಷೇತ್ರದಲ್ಲಿ ಫಲಿತಾಂಶ ವಿಶ್ಲೇಷಣೆ ಮಾಡಿದೆವು. ಅದರಲ್ಲಿ 100% ಬಿಜೆಪಿ, ಚುನಾವಣಾ ಆಯೋಗ ನಿಮ್ಮಿಂದ ಮತವನ್ನು ಕದ್ದಿದೆ. ಅದರಲ್ಲಿ 1,00,250 ಮತಗಳನ್ನು ಕಳ್ಳತನ ಮಾಡಿದ್ದಾರೆ. ಅದರರ್ಥ ಆರು ಮತಗಳಲ್ಲಿ ಒಂದು ಮತ ಕದಿಯಲಾಗಿದೆ ಎಂದು ರಾಹುಲ್ ಗಾಂಧಿ ದೂರಿದರು.
ಬಿಜೆಪಿ ನಾಯಕರಾಗಿದ್ದ ಮನೆಯಲ್ಲಿ 50-80 ಮತದಾರರು ಇದ್ದರು. 32,000 ಕೇಸ್ಗಳಲ್ಲಿ ಫಾರ್ಮ್ 6 ಮೂಲಕ ಸಲ್ಲಿಕೆಯಾದ ಹೊಸ ಮತದಾರರ ಪಟ್ಟಿಯಲ್ಲಿ ಅಕ್ರಮ ಆಗಿದೆ. ಕರ್ನಾಟಕದಲ್ಲಿ ನಕಲಿ ಮತದಾರ ಒಂದು ಸಾರಿ ಮತ ಹಾಕುತ್ತಾನೆ. ಆತನೇ ಉತ್ತರ ಪ್ರದೇಶದಲ್ಲೂ ಮತ ಹಾಕುತ್ತಾನೆ. ಮತದಾನ ಮಾಡುವ ಹಕ್ಕು ಆ ವ್ಯಕ್ತಿಗೆ ದೇಶದ ವಿವಿಧ ಕಡೆಗಳಲ್ಲಿ ಇದೆ. ನನ್ನ ಬಳಿ ಚುನಾವಣಾ ಆಯೋಗ ಪ್ರಮಾಣ ಪತ್ರ ಕೇಳುತ್ತಾರೆ. ನಮ್ಮ ಮುಂದೆ ಪ್ರಮಾಣ ಮಾಡಿ ಅಂತಾರೆ. ನಾನು ಸಂವಿಧಾನ ಬುಕ್ ಮೇಲೆ ಕೈ ಇಟ್ಟು ಪ್ರಮಾಣ ಮಾಡಿದ್ದೇನೆ ಎಂದು ಆಯೋಗದ ಪ್ರಶ್ನೆಗಳಿಗೆ ರಾಹುಲ್ ಗಾಂಧಿ ತಿರುಗೇಟು ನೀಡಿದರು.
ವೆಬ್ ಸೈಟ್ ಬಂದ್:
ನಾವು ಮತಗಳ್ಳತನದ ಆರೋಪ ಮಾಡಿದ ಬಳಿಕ ಚುನಾವಣಾ ಆಯೋಗ ತನ್ನ ವೆಬ್ ಸೈಟ್ ಬಂದ್ ಮಾಡಿದೆ. ಮಧ್ಯಪ್ರವೇಶ, ಬಿಹಾರ ರಾಜ್ಯದಲ್ಲಿ ವೆಬ್ ಸೈಟ್ ಬಂದ್ ಮಾಡಿದ್ದಾರೆ. ದೇಶದ ಜನರು ಈ ರೀತಿ ಪ್ರಶ್ನೆ ಮಾಡಿದರೆ ಆಯೋಗದ ನಾಟಕ ಬಯಲಾಗುತ್ತದೆ. ನಮಗೆ ದೇಶದ ಡಿಜಿಟಲ್ ರೂಪದ ಮತದಾರರ ಪಟ್ಟಿಯನ್ನು ಆಯೋಗ ನೀಡಲಿ. ವಿಡಿಯೋ ರೆಕಾರ್ಡ್ ಕೊಡಲಿ. ಅದು ನೀಡಿದರೆ ದೇಶದಲ್ಲಿ ಕೇವಲ ಒಂದು ಸೀಟು ಮಾತ್ರ ಅಲ್ಲ ಇಡೀ ದೇಶದಲ್ಲಿ ಮತ ಕಳ್ಳತನ ಆಗಿದೆ ಎಂಬುದನ್ನು ತೋರಿಸುತ್ತೇವೆ. ಚುನಾವಣಾ ಆಯೋಗ ಸಂವಿಧಾನದ ಪರವಾಗಿ ನಿಲ್ಲಬೇಕು. ರಾಜ್ಯದಲ್ಲಿ ಒಂದಕ್ಕಿಂತ ಹೆಚ್ಚಿಗೆ ಮತ ಕಳ್ಳತನ ಆಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.
ದೇಶದ ಬಡ ಜನರ ಮೇಲೆ ದಾಳಿ ಮಾಡಲಾಗುತ್ತಿದೆ. ಇವರ ಮೇಲೆ ದಾಳಿ ಮಾಡಿ ಬಚಾವು ಆಗುತ್ತೀರಿ ಅಂದು ಕೊಂಡಿದ್ದರೆ ಮತ್ತೆ ಯೋಚನೆ ಮಾಡಿ. ಸ್ವಲ್ಪ ಸಮಯ ತೆಗೆದುಕೊಳ್ಳಲಿದೆ ನಿಮಗೆ ಪಾಠ ಕಲಿಸುತ್ತೇವೆ ಎಂದು ರಾಹುಲ್ ಗುಡುಗಿದರು..
ಇವರ ಮೇಲೆ ಹಲ್ಲೆ ಮಾಡಿದರೆ ನಾವು ನಿಮ್ಮ ಮೇಲೆ ದಾಳಿ ಮಾಡುತ್ತದೆ. ಮೋದಿ ಕೇವಲ 25 ಸೀಟುಗಳಲ್ಲಿ ಪ್ರಧಾನಿ ಆಗಿದ್ದಾರೆ. 25 ಸೀಟಲ್ಲಿ ಅವರು ಕೇವಲ 30,000 ಮತಗಳ ಅಂತರದಿಂದ ಗೆದ್ದಿದ್ದಾರೆ. ನಾನು ಒಬ್ಬನೇ ಈ ಬಗ್ಗೆ ಮಾತನಾಡುತ್ತಿಲ್ಲ. ದೇಶದ ಎಲ್ಲ ರಾಜಕೀಯ ಪಕ್ಷಗಳು ಇದನ್ನು ಪ್ರಶ್ನೆ ಮಾಡುತ್ತಿವೆ. ಚುನಾವಣಾ ಆಯೋಗ ಎಲ್ಲಾ ಮಾಹಿತಿಯನ್ನು ನಮ್ಮ ವಶಕ್ಕೆ ನೀಡಬೇಕು. ರಾಜ್ಯದಲ್ಲಿನ ಮತ ಕಳ್ಳತನ ಒಂದು ಅಪರಾಧವಾಗಿದೆ. ಆಯೋಗ ಒಂದು ಸೀಟಿನ ಸತ್ಯ ಹೊರಗೆಡವಲು ಆರು ತಿಂಗಳು ಬೇಕಾಯಿತು. ನೀವು ಮಾಹಿತಿ ಕೊಡುತ್ತಿಲ್ಲವಾದರೆ 25 ಸೀಟುಗಳಲ್ಲಿ ಮಾಹಿತಿ ಹೊರ ಹಾಕುತ್ತೇವೆ ಎಂದು ರಾಹುಲ್ ಗಾಂಧಿ ಸವಾಲ್ ಹಾಕಿದರು.
ತನಿಖೆ ಮಾಡಿ:
ನೀವು ಸುಮ್ಮನೆ ಇರಲು ಆಗಲ್ಲ. ಒಂದು ದಿನ ನಿಮಗೆ ವಿಪಕ್ಷವನ್ನು ಎದುರಿಸಬೇಕಾಗುತ್ತದೆ. ಚುನಾವಣಾ ಆಯೋಗ ಇದನ್ನು ಅರ್ಥ ಮಾಡಿಕೊಳ್ಳಬೇಕು. ಕರ್ನಾಟಕದಲ್ಲಿ ಮತಗಳ್ಳತನದ ಕ್ರಿಮಿನಲ್ ಚಟುವಟಿಕೆ ಆಗಿದೆ. ರಾಜ್ಯ ಸರ್ಕಾರ ಈ ಕುರಿತು ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕು. ಚುನಾವಣಾ ಆಯೋಗ ಅಧಿಕಾರಿಗಳನ್ನು ಪ್ರಶ್ನೆ ಮಾಡಬೇಕಾಗುತ್ತದೆ ಎಂದು ಅವರು ತಿಳಿಸಿದರು.
10 ವರ್ಷದ ಹಿಂದಿನ ಇಲೆಕ್ಟ್ರಾನಿಕ್ ರೂಪದ ಮತಪಟ್ಟಿಯನ್ನು ಚುನಾವಣಾ ಆಯೋಗ ನಮಗೆ ಕೊಡಬೇಕು. ಮತಗಟ್ಟೆಯ ವಿಡಿಯೋ ರೆಕಾರ್ಡ್ ಕೊಡಬೇಕು. ಅದನ್ನು ಕೊಡದೇ ಇದ್ದರೆ ಅವರು ಅಪರಾಧ ಮುಚ್ಚಿಡುತ್ತಿದ್ದಾರೆ ಎಂದು ಅರ್ಥ. ಆ ಮೂಲಕ ಚುನಾವಣಾ ಆಯೋಗ ಬಿಜೆಪಿಗೆ ಸಹಾಯ ಮಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.
ಐದು ಪ್ರಶ್ನೆ ಕೇಳಿದ ರಾಹುಲ್:
ಇದೇ ವೇಳೆ ಚುನಾವಣಾ ಆಯೋಗಕ್ಕೆ ರಾಹುಲ್ ಗಾಂಧಿ ಐದು ಪ್ರಶ್ನೆಗಳನ್ನು ಕೇಳಿದ್ದಾರೆ. 1 ಡಿಜಿಟಲ್ ರೂಪದಲ್ಲಿ ವೋಟರ್ ಲಿಸ್ಟ್ ಏಕೆ ಜನರಿಗೆ ಕೊಡುತ್ತಿಲ್ಲ?. 2 ಚುನಾವಣಾ ಆಯೋಗ ಏಕೆ ವಿಡಿಯೋ ಸಾಕ್ಷಿ ನಾಶ ಮಾಡುತ್ತಿದೆ?. 3 ಇಸಿಐ ಅಪಾರ ಪ್ರಮಾಣದಲ್ಲಿ ವಂಚನೆ ಏಕೆ ಮಾಡುತ್ತಿದೆ?. 4 ಉತ್ತರ ಕೊಡುವ ಬದಲು ವಿಪಕ್ಷವನ್ನು ಏಕೆ ಹೆದರಸುತ್ತಿದೆ?. 5 ಬಿಜೆಪಿ ಏಜೆಂಟ್ ಆಗಿ ಚುನಾವಣಾ ಆಯೋಗ ಏಕೆ ಕೆಲಸ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

