ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
‘ರಾಹುಲ್ ಗಾಂಧಿ ಅವರೇ ನೀವು ಮತ್ತು ನಿಮ್ಮ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಮತಗಳ್ಳತನ ಆಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದೀರಿ.
ನಿಮ್ಮ ಗಂಭೀರ ಆರೋಪಕ್ಕೆ ಚುನಾವಣಾ ಆಯೋಗವು ಸ್ಪಂದಿಸಿದೆ. ಒಂದು ವೇಳೆ ನಿಮ್ಮ ಆರೋಪ ಸತ್ಯವಾಗಿದ್ದರೆ ಘೋಷಣಾ ಪತ್ರಕ್ಕೆ ಸಹಿ ಹಾಕಿ ದೂರು ನೀಡಿ ಎಂದು ಜೆಡಿಎಸ್ ತಾಕೀತು ಮಾಡಿದೆ.
ಪ್ರತಿಭಟನೆ ಬಳಿಕ @ECISVEEP ಚುನಾವಣಾ ಆಯೋಗದ ಭೇಟಿ ಏಕಾಏಕಿ ರದ್ದು ಮಾಡಿದ್ದು ಯಾಕೆ ಮಿಸ್ಟರ್ ರಾಹುಲ್ ಗಾಂಧಿ? ಗಾಳಿಯಲ್ಲಿ ಮಾತಿನ ಗುಂಡು ಹೊಡೆಯುವುದು ನಿಮಗೆ ವ್ಯಾಧಿಯಾಗಿಬಿಟ್ಟಿದೆ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ನಿಮ್ಮ ಅಪ್ರಬುದ್ಧಿಯ ಆಧಾರ ರಹಿತ ಹೇಳಿಕೆಗಳಿಗೆ ಕೆಳ ನ್ಯಾಯಾಲಯಗಳು ಸೇರಿದಂತೆ ಸುಪ್ರೀಂಕೋರ್ಟ್ ಸಹ ಹಲವು ಬಾರಿ ಛೀಮಾರಿ ಹಾಕಿದೆ. ಇಲ್ಲ ಸಲ್ಲದ ಆರೋಪ ಮಾಡುವುದು, ಬಳಿಕ ಕೋರ್ಟ್‘ನಲ್ಲಿ ಕ್ಷಮೆ ಕೇಳುವುದು ನಿಮಗೆ ರೂಢಿಗತವಾಗಿರುವ ದುರಭ್ಯಾಸ ಎಂದು ಜೆಡಿಎಸ್ ಹರಿಹಾಯ್ದಿದೆ. ರಾಹುಲ್ ಗಾಂಧಿ ಅವರೇ, ಮೊದಲು ಚುನಾವಣಾ ಆಯೋಗದ ಘೋಷಣಾ ಪತ್ರಕ್ಕೆ ಸಹಿ ಹಾಕಿ ದೂರು ನೀಡಿ. ಚುನಾವಣಾ ಆಯೋಗದ ಸವಾಲು ಸ್ವೀಕರಿಸಿ ಎಂದು ಜೆಡಿಎಸ್ ಆಗ್ರಹ ಮಾಡಿದೆ.

