ಇಂದಿರಾ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ರಾಹುಲ್ ಗಾಂಧಿ

News Desk

ಚಂದ್ರವಳ್ಳಿ ನ್ಯೂಸ್, ಹೊಸಪೇಟೆ(ವಿಜಯನಗರ ಜಿಲ್ಲೆ):
ಲೋಕಸಭೆ
ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸಮಾವೇಶ ಉದ್ಘಾಟಿಸಿ ಇದೇ ವೇಳೆ ಉಕ್ಕಿನ ಮಹಿಳೆ ಇಂದಿರಾಗಾಂಧಿಯವರ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದರು.

- Advertisement - 

ನಾವು ಚುನಾವಣೆ ಸಂದರ್ಭದಲ್ಲಿ ಕರ್ನಾಟಕ ಜನತೆಗೆ ನೀಡಿದ್ದ ಎಲ್ಲ ಪಂಚ ಗ್ಯಾರಂಟಿ ಯೋಜನೆಯ ಭರವಸೆಗಳನ್ನು ಈಡೇರಿಸಿದ್ದೇವೆ. ಪಂಚ ಗ್ಯಾರಂಟಿ ಯೋಜನೆಯಡಿ ನಾವು ನೀಡುತ್ತಿರುವ ಹಣ ಜನರ ಶಿಕ್ಷಣ, ಆರೋಗ್ಯ ಮುಂತಾದವುಗಳಿಗೆ ಸದ್ಬಳಕೆಯಾಗುತ್ತಿದೆ. ಬಡವರು, ಹಿಂದುಳಿದವರು, ಬುಡಕಟ್ಟು ಸಮುದಾಯದವರಿಗೆ ನೀಡುತ್ತಿರುವ ನಮ್ಮ ಸರ್ಕಾರದ ಹಣ ನೇರ ಖಾತೆ ಸೇರುತ್ತದೆ. ಅದೇ ಹಣ ಮಾರುಕಟ್ಟೆಯಲ್ಲಿ ಉತ್ಪಾದನೆ ಹೆಚ್ಚಿಸುತ್ತದೆ. ಸಾಮಾನ್ಯ ಜನರಿಗೆ ಕೊಂಡುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಿದೆ. ಇದರಿಂದ ಪ್ರತಿ ಗ್ರಾಮದಲ್ಲೂ ಹಣದ ವಹಿವಾಟು ಹೆಚ್ಚಳವಾಗುತ್ತಿದ್ದು, ಸರ್ಕಾರದ ಆರ್ಥಿಕ ಸ್ಥಿತಿ ಸುಧಾರಣೆ ಆಗುತ್ತಿದೆ.

- Advertisement - 

ವಿಧಾನಸಭೆ ಚುನಾವಣೆ ವೇಳೆಯಲ್ಲಿ ನಾನು ರಾಜ್ಯಕ್ಕೆ ಬಂದಂತಹ ಸಂದರ್ಭದಲ್ಲಿ, ಇಲ್ಲಿನ ಹಟ್ಟಿ, ತಾಂಡಾ ಮುಂತಾದ ಜನವಸತಿ ಪ್ರದೇಶಗಳಲ್ಲಿನ ಲಕ್ಷಾಂತರ ಕುಟುಂಬಗಳು ಯಾವುದೇ ದಾಖಲೆಗಳಿಲ್ಲದೆ, ಭದ್ರತೆ ಇಲ್ಲದೆ ಬದುಕುತ್ತಿದ್ದಾರೆ ಎಂಬ ಮಾಹಿತಿ ಪಡೆದುಕೊಂಡಿದ್ದೆ. ಆಗಲೇ ನಾವು ಚರ್ಚಿಸಿ, ಅಂತಹ ಬಡ ಕುಟುಂಬಗಳು ವಾಸಿಸುವ ಮನೆಗಳಿಗೆ ಹಕ್ಕುಪತ್ರ ನೀಡಿ, ಅವರಿಗೆ ನೆಮ್ಮದಿ ಕಲ್ಪಿಸಲು ನಿರ್ಧರಿಸಿದ್ದೆವು. ಅದರಂತೆ ಈಗ ನಾವು 6 ನೇ ಗ್ಯಾರಂಟಿಯಾಗಿ ಕಂದಾಯ ಗ್ರಾಮಗಳನ್ನು ರಚಿಸಿ, ರಾಜ್ಯದ 1 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕುಪತ್ರಗಳನ್ನು ನೀಡಿ, ಬದುಕಿಗೆ ಭದ್ರತೆ ನೀಡಿದ್ದೇವೆ. ರಾಜ್ಯದ ಜನವಸತಿ ಪ್ರದೇಶಗಳಲ್ಲಿ ದಾಖಲೆಗಳಿಲ್ಲದೇ ವಾಸಿಸುತ್ತಿರುವ ಆಸ್ತಿಯ ಹಕ್ಕುಪತ್ರ ಕೊಟ್ಟು, ಅವರು ನೆಮ್ಮದಿಯಿಂದ ಬದುಕು ನಡೆಸಬೇಕು ಎಂಬುದು ನಮ್ಮ ಉದ್ದೇಶವಾಗಿದೆ.

ರಾಜ್ಯದಲ್ಲಿ ಎರಡು ಸಾವಿರ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುತ್ತಿದ್ದೇವೆ. ತಂತ್ರಜ್ಞಾನವನ್ನು ಬಳಸಿಕೊಂಡು ಬಡಕುಟುಂಬಗಳ ಜನರ ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ ನೀಡುತ್ತಿದ್ದೇವೆ. ಇದರಿಂದ ಜನರು ಶಾಶ್ವತ ನೆಮ್ಮದಿ ಕಾಣಲು ಸಾಧ್ಯ. ಬಡಕುಟುಂಬಗಳಿಗೆ ಡಿಜಿಟಲೀಕರಣಗೊಳಿಸಿದ ಆಸ್ತಿ ದಾಖಲೆ ಹಕ್ಕುಪತ್ರಗಳನ್ನು ನೀಡುವ ಮೂಲಕ ಎಲ್ಲಾ ದಾಖಲೆಗಳನ್ನು ನಿಖರವಾಗಿ ನೀಡುವುದಾಗಿದೆ. ರಾಜ್ಯದಲ್ಲಿ ಬಾಕಿಯಿರುವ ಇನ್ನೂ 50 ಸಾವಿರ ಕುಟುಂಬಗಳಿಗೆ ಬರುವ 06 ತಿಂಗಳಿನಲ್ಲಿ ಹಕ್ಕುಪತ್ರಗಳನ್ನು ನೀಡುತ್ತೇವೆ. ಯಾವುದೇ ಗ್ರಾಮ, ಕುಟುಂಬಗಳು ಆಸ್ತಿ ದಾಖಲೆಗಳಿಲ್ಲದೇ ಇರಬಾರದು ಎನ್ನುವುದು ನಮ್ಮ ಉದ್ದೇಶವಾಗಿದೆ. ರಾಜ್ಯದಲ್ಲಿ ರಚಿಸಲಾಗಿರುವ ಗ್ಯಾರಂಟಿ ಅನುಷ್ಠಾನ ಸಮಿತಿಯವರು ಇಂತಹ ಕುಟುಂಬಗಳನ್ನು ಗುರುತಿಸಿ, ಅವರಿಗೆ ದಾಖಲೆ ನೀಡುವ ಮೂಲಕ ಇಡೀ ದೇಶದಲ್ಲಿಯೇ ಕರ್ನಾಟಕ ಮಾದರಿ ರಾಜ್ಯವಾಗಲಿದೆ.

- Advertisement - 

ರಾಜ್ಯಸಭೆ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿ, ನಮ್ಮ ಪಕ್ಷದ ಸರ್ಕಾರ ಅಧಿಕಾರಕ್ಕೆ ಬರುವಾಗ ಏನೇನು ಭರವಸೆಗಳನ್ನು ನೀಡಿದ್ದೆವೋ, ಅವೆಲ್ಲವುಗಳನ್ನು ಈಡೇರಿಸಿ, ಜನರಿಗೆ ಸವಲತ್ತುಗಳನ್ನು ಕೊಟ್ಟಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಹಭಾಗಿತ್ವದಲ್ಲಿ ರಾಜ್ಯ ಸರ್ಕಾರ ಅತ್ಯುತ್ತಮವಾಗಿ ನಡೆಯುತ್ತಿದೆ. ರಾಜ್ಯದಲ್ಲಿ ಪರಶಿಷ್ಟ ಜಾತಿಯ ನಕಲಿ ಪ್ರಮಾಣ ಪತ್ರ ಪಡೆಯುತ್ತಿರುವ ಬಗ್ಗೆ ಪ್ರಸ್ತಾಪಿಸಿ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ, ಮೀಸಲಾತಿ ವರ್ಗೀಕರಣದ ಸಮೀಕ್ಷೆ ನಡೆಯುತ್ತಿರುವ ಸಂದರ್ಭದಲ್ಲಿ ಇದನ್ನು ಹೆಚ್ಚು ನಿಖರವಾಗಿ ನಡೆಸಲು ಅಗತ್ಯ ಕ್ರಮ ಕೈಗೊಂಡು ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದರು.  

ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಘಟನೆಯಲ್ಲಿ ಕೇಂದ್ರ ಸರ್ಕಾರದ ರಕ್ಷಣಾ ವೈಫಲ್ಯವೇ ಕಾರಣವಾಗಿದೆ. ಘಟನೆ ನಡೆದ ಸ್ಥಳದಲ್ಲಿ ಯಾವುದೇ ತರದ ಭದ್ರತೆ ಇರಲಿಲ್ಲ. ದೇಶದ ದೃಷ್ಟಿಯಿಂದ ಕೇಂದ್ರ ಸರ್ಕಾರ ಕೈಗೊಂಡ ಎಲ್ಲ ನಿರ್ಧಾರಗಳಿಗೆ ಬೆಂಬಲ ನೀಡಿ, ಒಗ್ಗಟ್ಟು ಪ್ರದರ್ಶಿಸಿದ್ದೇವೆ. ಭಯೋತ್ಪಾದಕ ಸಂಘಟನೆಗಳಿಗೆ ಪಾಕಿಸ್ತಾನ ಕುಮ್ಮುಕ್ಕು ನೀಡಿ ಭಾರತದಲ್ಲಿ ಉಗ್ರ ಕೃತ್ಯಗಳನ್ನು ನಡೆಸುತ್ತಿದೆ. ಸಂಗತಿಯನ್ನು ಜಗತ್ತಿನ ಮುಂದೆ ತೆರೆದಿಡಲು ಭಾರತ ಸರ್ಕಾರ ಕಳುಹಿಸುತ್ತಿರುವ ಸರ್ವಪಕ್ಷ ನಿಯೋಗದಲ್ಲಿ ಕಾಂಗ್ರೆಸ್ ಪಕ್ಷದ ಲೋಕಸಭಾ ಸದಸ್ಯರು ಭಾಗಿಯಾಗುವರು ಎಂದರು.

Share This Article
error: Content is protected !!
";