ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೇಶವಿರೋಧಿ ಚಿಂತನೆಗಳಿಂದಾಗಿ ಭಾರತೀಯ ಕಾಂಗ್ರೆಸ್ ಪಕ್ಷ ಈಗ ಜನಮಾನಸದಿಂದ ದೂರವಾಗುತ್ತಿದೆ. ವಿದೇಶದಲ್ಲಿ ದೇಶವಿರೋಧಿ ಭಾಷಣ ಮಾಡುವ ರಾಹುಲ್ ಗಾಂಧಿ ದೇಶದಲ್ಲಿ ಜಾಗೃತ ಮತದಾರರ ಎದುರು ಭಾಷಣ ಮಾಡಲು ಹಿಂದೆ – ಮುಂದೆ ನೋಡುವ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಬಿಜೆಪಿ ತಿಳಿಸಿದೆ.
ಬಿಹಾರದಲ್ಲಿ ಜೈ ಭೀಮ್ – ಜೈ ಸಂವಿಧಾನ್ ಹೆಸರಿನ ರ‍್ಯಾಲಿಗೆ ಜನವೇ ಇಲ್ಲದೆ ಖಾಲಿಕುರ್ಚಿಗೆ ಭಾಷಣ ಮಾಡುವ ಪರಿಸ್ಥಿತಿಯನ್ನು ಖರ್ಗೆ ಎದುರಿಸಿದ್ದಾರೆ. ಕಾಂಗ್ರೆಸ್ ಪಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಂದಿಟ್ಟುಕೊಂಡು ಅವರನ್ನು ಅವಮಾನಿಸುತ್ತಿದೆ ಎಂದು ಬಿಜೆಪಿ ದೂರಿದೆ.
ಧರ್ಮ, ಜಾತಿ, ಭಾಷೆ, ಪ್ರಾಂತ್ಯದ ಹೆಸರಿನಲ್ಲಿ ಒಡೆದು ಆಳುತ್ತಾ ಅಧಿಕಾರ ಅನುಭವಿಸಿದ ಕಾಂಗ್ರೆಸ್ ಇದೀಗ ತನ್ನ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಸಭೆಗೆ ಜನರನ್ನು ಸೇರಿಸಲು ಹೆಣಗಾಡುತ್ತಿದೆ. ಇಟಲಿ ಮಾತೆ ಹಾಗೂ ಸುಪುತ್ರನ ಸಭೆಗಾದರೆ ಹಣಕೊಟ್ಟು ಜನ ಸೇರಿಸುವ ಕಾಂಗ್ರೆಸ್ ಪದಾಧಿಕಾರಿಗಳು ನೆಪ ಮಾತ್ರಕ್ಕೆ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಸಭೆಗೆ ಅಂತಹ ಆಸಕ್ತಿಯನ್ನು ಸಹ ತೋರಿಸುತ್ತಿಲ್ಲ ಎಂದು ಬಿಜೆಪಿ ಆರೋಪಿಸಿದೆ.
ಜನ ಸೇರದ ಕಾರಣಕ್ಕೆ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರನ್ನು ಅಮಾನತುಗೊಳಿಸಿ ಬಲಿಪಶು ಮಾಡಲಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಪ್ರತಿ ಜಿಲ್ಲೆಯ ಮುಖ್ಯಸ್ಥರನ್ನು ಅಮಾನತುಗೊಳಿಸುವ ಸಂದರ್ಭ ಒದಗಿ ಬರಲಿದೆ. ಹಾಗಾಗಿ, ಗಾಂಧೀಜಿ ಅವರ ಆಶಯದಂತೆ ಕಾಂಗ್ರೆಸ್ ಪಕ್ಷವನ್ನು ವಿಸರ್ಜನೆ ಮಾಡುವುದೇ ಒಳಿತು ಎಂದು ಬಿಜೆಪಿ ತಾಕೀತು ಮಾಡಿದೆ.