ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು ಯೂ ಟರ್ನ್ ಹೊಡೆಯುವ ಅಗತ್ಯವೇ ಇಲ್ಲ. ಅವರು ಸತ್ಯವನ್ನೇ ನುಡಿದಿದ್ದಾರೆ! ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಮಹಾತ್ಮ ಗಾಂಧೀಜಿ ಅವರ ಸತ್ಯಮೇವ ಜಯತೇ ಘೋಷ ವಾಕ್ಯವನ್ನು ಕರ್ನಾಟಕ ಕಾಂಗ್ರೆಸ್ ನಾಯಕರು ಅದೆಷ್ಟು ಶ್ರದ್ಧಾಭಕ್ತಿಯಿಂದ ಪರಿಪಾಲನೆ ಮಾಡುತ್ತಿದ್ದಾರೆ(!?) ಎಂಬುದಕ್ಕೆ ರಾಯರೆಡ್ಡಿ ಅವರ ಹೇಳಿಕೆಯೇ ಸಾಕ್ಷಿ.
ಗುತ್ತಿಗೆಯಲ್ಲಿ ಪರ್ಸಂಟೇಜ್, ಕಮಿಷನ್ ದಂಧೆ ಆರಂಭಿಸಿದ್ದು ಅನ್ಯಪಕ್ಷಗಳ ಸರ್ಕಾರಗಳೇ ಹೊರತು ಜೆಡಿಎಸ್ ಸರಕಾರವಲ್ಲ. ನಾನು ಮುಖ್ಯಮಂತ್ರಿ ಆಗಿದ್ದ ವೇಳೆ ಗುತ್ತಿಗೆದಾರರಿಗೆ ನಿಯಮಿತವಾಗಿ ಹಣ ಪಾವತಿ ಆಗುತ್ತಿತ್ತು, ವಿಳಂಬ ಎನ್ನುವ ಪ್ರಶ್ನೆಯೇ ಇರಲಿಲ್ಲ. ನನ್ನ ಆಡಳಿತದಲ್ಲಿ ಕಮಿಷನ್ ದಂಧೆ ವಿಧಾನಸೌಧದ ಮೆಟ್ಟಿಲು ಮುಟ್ಟಲು ಬಿಟ್ಟಿರಲಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು.
ಸೋ ಕಾಲ್ಡ್ ಸತ್ಯಸಂಧರಾದ ಕಾಂಗ್ರೆಸ್ಸಿಗರು ಅರ್ಥ ಮಾಡಿಕೊಳ್ಳಬೇಕು. ಭ್ರಷ್ಟಾಚಾರದ ವಿರುದ್ಧ ಸಿದ್ದರಾಮಯ್ಯ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ರಾಯರೆಡ್ಡಿ ಹೇಳಿದ್ದಾರೆ! ಪಾಪ.. ಅವರು ಏಕಿಷ್ಟು ಹೆದರಿದರು ಎನ್ನುವುದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಅಧಿಕಾರ ಮತ್ತು ಆಸರೆ ನಾಲಿಗೆಯ ಶಕ್ತಿಯನ್ನು ಕುಂದಿಸುತ್ತವೆ ಎಂದು ಕುಮಾರಸ್ವಾಮಿ ಟೀಕಾಪ್ರಹಾರ ಮಾಡಿದ್ದಾರೆ.
ಸನ್ಮಾನ್ಯ ಸಿಎಂ ಸಾಹೇಬರ ಸರಣಿ ಹಗರಣಗಳ ಸಿದ್ವಿಲಾಸಿ ಬಗ್ಗೆ ಅರಿಯದಷ್ಟು ಮುಗ್ಧರೇ ರಾಯರೆಡ್ಡಿ!! ಕರ್ನಾಟಕವನ್ನು ಕೊಳ್ಳೆ ಹೊಡೆಯುತ್ತಿರುವ ಕಾಂಗ್ರೆಸ್ ಈಸ್ಟ್ ಇಂಡಿಯಾ ಕಂಪನಿ ಸರ್ಕಾರದ ಭಾಗವಾಗಿರುವ ಅವರಿಗೆ ಜೆಡಿಎಸ್ ಕುರಿತು ಟೀಕಿಸುವ ನೈತಿಕತೆ ಎಲ್ಲಿದೆ? ಎಂದು ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.