ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಂಜೆಯಾಗುತ್ತಿದ್ದಂತೆ ಕಳೆದ ಎರಡು ದಿನಗಳಿಂದ ರಾಜಧಾನಿ ಬೆಂಗಳೂರಿನಲ್ಲಿ ಜೋರಿ ಗಾಳಿ ಸಹಿತ ಮಳೆಯಾಗುತ್ತಿದೆ. ಇದರಿಂದ ಕಚೇರಿಗಳಿಂದ ಮನೆಗೆ ತೆರಳುತ್ತಿದ್ದ ಉದ್ಯೋಗಿಗಳು ಮತ್ತು ಬೀದಿ ಬದಿ ವ್ಯಾಪಾರಸ್ಥರು ಪರದಾಡುವಂತಾಯಿತು.
ಬೆಂಗಳೂರಿನ ಹೃದಯ ಭಾಗ ಮೆಜೆಸ್ಟಿಕ್, ಮಲ್ಲೇಶ್ವರಂ, ರಾಜಾಜಿನಗರ, ಯಶವಂತಪುರ, ರೇಸ್ ಕೋರ್ಸ್, ಆನಂದ್ ರಾವ್ ಸರ್ಕಲ್, ಮೈತ್ರಿ ಸರ್ಕಲ್, ವಿಧಾನಸೌಧ, ಶಿವಾನಂದ ಸರ್ಕಲ್, ಕೆಆರ್ ಸರ್ಕಲ್ ಸುತ್ತಮುತ್ತ ಮಳೆಯಾಗುತ್ತಿದೆ. ಮಳೆ ಹಿನ್ನೆಲೆ ಪ್ರಮುಖ ವೃತ್ತಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.
ಮಾನ್ಯತ ಟೆಕ್ ಪಾರ್ಕ್ ಬಳಿ ಬಿಎಂಟಿಸಿ ಬಸ್ ಒಳಗೆ ಮಳೆ ನೀರು ನುಗ್ಗಿದೆ. ಭಾರಿ ಮಳೆಯಿಂದ ರಸ್ತೆ ಜಲಾವೃತಗೊಂಡಿದ್ದು, ರಸ್ತೆಯಿಂದ ಬಸ್ ಒಳಭಾಗಕ್ಕೆ ಮಳೆ ನೀರು ಹರಿದಿದೆ. ಮಳೆ ಹಿನ್ನೆಲೆಯಲ್ಲಿ ಡಬಲ್ ರೋಡ್ನಲ್ಲಿ ನಿಧಾನಗತಿಯ ಸಂಚಾರವಿದೆ. ಮಳೆಯ ಹೊಡೆತಕ್ಕೆ ಬೈಕ್ ಸವಾರರು ಬಸ್ ಸ್ಟ್ಯಾಂಡ್ನಲ್ಲಿ ಆಶ್ರಯ ಪಡೆದರು.
ಗಾಳಿ-ಮಳೆಗೆ ಉರುಳಿದ ಮರಗಳು-
ಜೋರು ಮಳೆ ಮತ್ತು ಗಾಳಿಯಿಂದ ವಿಂಡ್ಸನ್ ಮ್ಯಾನರ್ ಅಂಡರ್ ಪಾಸ್ನಿಂದ ಅರಮನೆ ಮೈದಾನ ಕಡೆ ಹೋಗುವ ಮಾರ್ಗದಲ್ಲಿ ಕಾವೇರಿ ಜಂಕ್ಷನ್ ಬಳಿ ಮರದ ಕೊಂಬೆ ಮುರಿದು ಬಿದ್ದಿದೆ. ಮರದ ಕೊಂಬೆ ಮುರಿದು ಬೀಳುವಾಗ ಯಾವುದೇ ವಾಹನ ಸಂಚಾರ ಇರಲಿಲ್ಲ. ಹೀಗಾಗಿ ಅನಾಹುತ ತಪ್ಪಿದೆ. ಹಾಗೇ ಮಲ್ಲೇಶ್ವರದ ಪಿಯುಸಿ ಬೋರ್ಡ್ ಕಟ್ಟಡದ ಬಳಿ ಗಾಳಿ ಮತ್ತು ಮಳೆಗೆ ಮರ ಬಿದ್ದಿದೆ.
ಮಳೆಯಿಂದಾಗಿ ಮಾರತ್ತಹಳ್ಳಿ ಸೇತುವೆಯಿಂದ ಕಾರ್ತಿಕನಗರದತ್ತ ಸಾಗುವ ರಸ್ತೆಯಲ್ಲಿ ನಿಧಾನಗತಿಯಲ್ಲಿ ಸಂಚಾರವಿದೆ. ಯಲಹಂಕದಿಂದ ಕೊಡಿಗೇಹಳ್ಳಿ ಮಾರ್ಗವಾಗಿ ವಾಹನ ಸಂಚಾರ ನಿಧಾನಗತಿಯಲ್ಲಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.