ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹವಾಮಾನ ವೈಪರಿತ್ಯದಿಂದ ವೀರ ಮದಕರಿ ನಾಟಕದ ಪ್ರದರ್ಶನ ಮುಂದೂಡಲಾಗಿದ್ದು ಇದೇ ತಿಂಗಳ ಅಕ್ಟೋಬರ್-31 ರಂದು ರಾತ್ರಿ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ವೀರಮದಕರಿ ನಾಟಕ ನೋಡಲು ಸಾವಿರಾರು ಜನ ಬರುವ ನಿರೀಕ್ಷೆ ಇದೆ. ಜಿಲ್ಲಾ ವಕೀಲರಿಂದ ಈಗಾಗಲೇ ಯಶಸ್ವಿಯಾಗಿ 2 ಬಾರಿ ಕುರುಕ್ಷೇತ್ರ ಪೌರಾಣಿಕ ನಾಟಕ ಮತ್ತು 1 ಬಾರಿ ಸಾಮಾಜಿಕ ನಾಟಕವು ಪದರ್ಶನ ಮಾಡಿ ಜನ ಮನ್ನಣೆ ಗಳಿಸಿರುತ್ತಾರೆ.
ಈ ಹಿಂದೆ ಪ್ರದರ್ಶನ ಮಾಡಿದಂತಹ ನಾಟಕಗಳನ್ನು ನೋಡಲು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಮತ್ತು ಹಳ್ಳಿ ಹಳ್ಳಿಗಳಿಂದಲೂ ಜನ ಸಾಗರ ಹರಿದು ಬಂದಿದ್ದು ರಾಜ ವೀರ ಮದಕರಿ ನಾಯಕ ನಾಟಕ ಪ್ರದರ್ಶನಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಬರಲಿದ್ದು ಎಲ್ಲರಿಗೂ ಮೂಲ ಸೌಲಭ್ಯಗಳ ವ್ಯವಸ್ಥೆ ಮಾಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ರಾಜ ವೀರ ಮದಕರಿ ನಾಯಕ ನಾಟಕವು ಚಿತ್ರದುರ್ಗದ ಇತಿಹಾಸ ಪ್ರತಿಬಿಂಬಿಸುತ್ತದೆ. ಜೊತೆಗೆ ಪಾಳೇಗಾರರ ಆಡಳಿತದ ಬಗ್ಗೆ ಬೆಳಕು ಚಲ್ಲುತ್ತದೆ. ಆದ್ದರಿಂದ ಬಹುತೇಕ ಜನರು ನಾಟಕ ಪ್ರದರ್ಶನಕ್ಕೆ ಸಾಗರೂಪಾದಿಯಲ್ಲಿ ಹರಿದು ಬರುವ ನಿರೀಕ್ಷೆ ಇದೆ.
ರಾಜ ವೀರ ಮದಕರಿ ನಾಯಕ ನಾಟಕವನ್ನು ಅಂದು ಸಂಜೆ 7.30 ಗಂಟೆಗೆ ಉಚ್ಛ ನ್ಯಾಯಾಲದ ನ್ಯಾಯಮೂರ್ತಿ ಟಿ.ವೆಂಕಟೇಶ್‌ನಾಯ್ಕ ರವರು ಉದ್ಘಾಟಿಸಲಿದ್ದಾರೆ.
ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ನ್ಯಾಯಾಧೀಶರಾದ ರೋಣ್ ವಾಸುದೇವ್, ಸಹಾಯಕ ಜಿಲ್ಲಾ ನ್ಯಾಯಾಧೀಶರಾದ ಎಸ್.ಎನ್.ಕಲ್ಕಣಿ ಮತ್ತು ಗಂಗಾಧರ್.ಸಿ.ಹೆಚ್, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಕರ್ನಾಟಕ ರಾಜ್ಯ ವಕೀಲ ಪರಿಷತ್ತಿನ ಸದಸ್ಯರಾದ ಗೌತಮ್ ಚಂದ್, ಶ್ರೀನಿವಾಸ್ ಬಾಬು, ರಾಜಣ್ಣ, ದೇವರಾಜು ಭಾಗವಹಿಸಲಿದ್ದಾರೆ.
ಸಮಾರಂಭದ ಅಧ್ಯಕ್ಷತೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ ವಹಿಸಲಿದ್ದಾರೆ. ವೀರ ಮದಕರಿ ನಾಯಕ ನಾಟಕದ ಸಂಪೂರ್ಣ ಸಾರಥ್ಯವನ್ನು ವಕೀಲರಾದ ಎನ್.ಶರಣಪ್ಪ ವಹಿಸಿದ್ದಾರೆ.
ನಾಟಕದ ವ್ಯವಸ್ಥಾಪಕ ಮತ್ತು ನಿರ್ದೇಶಕರಾಗಿ ಮಾಜಿ ಅಧ್ಯಕ್ಷ ಎಸ್.ವಿಜಯ್‌ಕುಮಾರ್ ಮತ್ತು ಪಿ.ಆರ್.ವೀರೇಶ್ ನಿರ್ವಹಿಸುತ್ತಾರೆ.
ವಕೀಲರು ಪ್ರದರ್ಶನ ಮಾಡುತ್ತಿರುವ ವೀರ ಮದಕರಿ ನಾಯಕ ನಾಟಕ ಪ್ರದರ್ಶನಕ್ಕೆ ಜಿಲ್ಲಾ ಮತ್ತು ಎಲ್ಲಾ ತಾಲ್ಲೂಕು ವಕೀಲರ ಸಂಘದ ಎಲ್ಲಾ ಪದಾಧಿಕಾರಿಗಳು, ವಕೀಲರು ಅವರ ಕುಟುಂಬದವರು ಹಾಗೂ ಜಿಲ್ಲೆಯ ಎಲ್ಲಾ ಕಲಾಭಿಮಾನಿಗಳು, ಕಲಾ ಪೋಷಕರು, ಕಲಾ ಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಐತಿಹಾಸಿಕ ನಾಟಕ ಯಶಸ್ವಿಗೊಳಿಸಬೇಕೆಂದು ಚಿತ್ರದುರ್ಗ ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಸಿ.ಶಿವು ಯಾದವ್ ವಿನಂತಿ ಮಾಡಿದ್ದಾರೆ.