ಚಂದ್ರವಳ್ಳಿ ನ್ಯೂಸ್, ಹೊಸಪೇಟೆ(ವಿಜಯನಗರ):
ಸಮಾಜದ ನಿರ್ಲಕ್ಷ ಕ್ಕೆ ಒಳಗಾದ ದೇವದಾಸಿ ಮತ್ತು ಅವರ ಮಕ್ಕಳ ಬೇಡಿಕೆಗಳು ಸರ್ಕಾರಕ್ಕೆ ತಲುಪುವಲ್ಲಿ ಕರ್ನಾಟಕ ಪತ್ರಕರ್ತರ ಸಂಘ ಎಲ್ಲಕಾಲಕ್ಕೂ ಕಾರ್ಯೋನ್ಮುಖ ವಾಗಿರುತ್ತದೆ ಎಂದು ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ಹೆಚ್.ಎಸ್.ರಾಜು ಹೇಳಿದರು.
ಅವರು ಕೂಡ್ಲಿಗೆಯ ಸ್ನೇಹಾ ಸಂಸ್ಥೆ ಆಯೋಜಿಸಿದ್ದ ದೇವದಾಸಿ ಮಹಿಳೆಯರು ಮತ್ತು ಅವರ ಮಕ್ಕಳ ಸಮಸ್ಯೆಗಳಿಗೆ ಸರ್ಕಾರದಿಂದ ಪರಿಹಾರಕ್ಕೆ ಮಾಧ್ಯಮದವರೊಂದಿಗೆ ಜಾಗೃತಿ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇವದಾಸಿ ಪದ್ಧತಿಗೆ ಮುಖ್ಯ ಕಾರಣ ಆರ್ಥಿಕ ಪರಿಸ್ಥಿತಿ ಮತ್ತು ಶಿಕ್ಷಣ. ಇದನ್ನೇ ಬಳಸಿಕೊಂಡು ಕೆಲವು ವರ್ಗಗಳು ದೇಶದಲ್ಲಿ ದೇವದಾಸಿ ಪದ್ಧತಿ ತಂದು ಪುರುಷ ಪ್ರಧಾನ ದೇಶ ಎಂದು ಎತ್ತಿ ತೋರಿಸಲು ಪ್ರಯತ್ನಿಸಿದರು. ಸಂವಿಧಾನದ ನಂತರ ದೇಶದಲ್ಲಿ ದೇವದಾಸಿಯರು ರಾಣಿಯರಾಗಿದ್ದಾರೆ. ಆಗಿನ ದೇವದಾಸಿಯರು ಮತ್ತು ಮಕ್ಕಳ ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ಕರ್ನಾಟಕ ಪತ್ರಕರ್ತರ ಸಂಘ ನಿಮ್ಮ ಬೆನ್ನಿಗೆ ನಿಲ್ಲುತ್ತದೆ ಎಂದು ಜಿಲ್ಲಾಧ್ಯಕ್ಷ ಬಿ ಎಚ್ ಎಸ್ ರಾಜು ಭರವಸೆ ನೀಡಿದರು.
ಇನ್ನು ಹಾಯ್ ಮಿಂಚು ಉಪ ಸಂಪಾದಕಿ ಗೀತಾ ಸುರೇಶ್ ಮಾತನಾಡಿ ಮಹಿಳೆಯರು ಯಾವ ಸಂದರ್ಭದಲ್ಲಿ ಕೂಡ ಎದೆಗುಂದಿ ಆತ್ಮಹತ್ಯೆಗೆ ಪ್ರಯತ್ನಿಸಬಾರದು. ಯಾಕೆಂದರೆ ದೇಶದಲ್ಲಿ ಮಹಿಳೆಯರ ಕೊಡುಗೆ ಅತಿ ದೊಡ್ಡದಾಗಿದೆ. ಇದನ್ನು ಮರೆತ ಸರ್ಕಾರಗಳು ಸಂವಿಧಾನದಲ್ಲಿ ಲಿಂಗ ತಾರತಮ್ಯ ನಿಷೇಧ ಇದ್ದರೂ ಕೂಡ ಅದನ್ನು ಮರೆಮಾಚಿ ಮಹಿಳೆಯರನ್ನು ಕಡೆಗಣಿಸಿದ್ದಾರೆ. ಅದರಲ್ಲಿ ದೇವದಾಸಿಯರು ಮತ್ತು ಮಕ್ಕಳು ಸರ್ಕಾರದ ಸರಿಯಾದ ಸೌಲಭ್ಯಗಳಿಂದ ವಂಚಿತರಾಗಿ ಅನುಭವಿಸುತ್ತಿರುವ ನೋವುಗಳು ಮತ್ತು ಶಾಲಾ, ಕಾಲೇಜುಗಳಲ್ಲಿ, ಉದ್ಯೋಗಗಳಲ್ಲಿ ಹೆಸರಿನ ಮುಂದೆ ತಂದೆ ಹೆಸರು ಇಲ್ಲದ ಕಾರಣ ಅವರಿಗೆ ಕಿರಿಕಿರಿ ನೀಡುತ್ತಿರುವುದು ಅವಮಾನಕರ ಸಂಗತಿಯಾಗಿದೆ. ಇದನ್ನು ಕೂಡಲೇ ಸರ್ಕಾರ ಗಮನಿಸಿ ಅವರನ್ನು ಪ್ರಜಾಪ್ರಭುತ್ವದಲ್ಲಿ ತಲೆಯೆತ್ತಿ ತಿರುಗುವಂತೆ ಮಾಡಲು ಸೂರು, ಶಿಕ್ಷಣ ಮತ್ತು ಅವರ ಅಭಿವೃದ್ಧಿಗಾಗಿ ಸರ್ಕಾರದ ಸೌಲಭ್ಯಗಳನ್ನು ಅತಿ ಹೆಚ್ಚಾಗಿ ಕೊಡಬೇಕೆಂದು ಅಭಿಪ್ರಾಯ ಪಟ್ಟರು.
ಸ್ನೇಹ ಸಂಸ್ಥೆ ಯೋಜನಾ ನಿರ್ದೇಶಕ ರಾಮಾಂಜಿನೇಯ ಮಾತನಾಡಿ ಸಂವಿಧಾನದ ಆರ್ಟಿಕಲ್ 19 ಸಬ್ ಕ್ಲಾಸ್(1) A ಸ್ವಾತಂತ್ರ್ಯ ಮತ್ತು ಅಭಿ ವ್ಯಕ್ತಿ ಸ್ವಾತಂತ್ರ್ಯಇದೆ. ನಮ್ಮ ಅಭಿಪ್ರಾಯವನ್ನು ವ್ಯಕ್ತಿಯಾಗಿರಬಹುದು ಅಥವಾ ಸಂಘಟನೆ ಆಗಿರಬಹುದು ಅವರವರ ಅಭಿಪ್ರಾಯಗಳನ್ನು ಧೈರ್ಯವಾಗಿ ಹೇಳಿಕೊಳ್ಳಲು ಸಂವಿಧಾನ ಸಮಾನ ಅವಕಾಶ ಕೊಟ್ಟಿದೆ ಎಂದರು.
ಸಂಸ್ಥೆ 2016 ರಿಂದ ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿದೆ. ಕರ್ನಾಟಕದ ಕಾನೂನಿನ ಪ್ರಕಾರ ನಿಷೇಧವಾಗಿರುವ ದೇವದಾಸಿ ಪದ್ಧತಿ ಸರ್ಕಾರವೇ ಗುರುತಿಸಿರುವ ಹಾಗೆ 46,660 ದೇವದಾಸಿ ಮಹಿಳೆಯರು ಇದ್ದಾರೆ ಎಂದು ತಿಳಿದು ಬಂದಿದೆ. 1984ರಲ್ಲಿ ಕರ್ನಾಟಕ ದೇವದಾಸಿ ಸಮರ್ಪಣಾ ನಿಷೇಧ ಕಾಯ್ದೆಯಡಿಯಲ್ಲಿ ಈ ಕಾಯ್ದೆಯ ಮೂರನೆಯ ಬಿ ನಲ್ಲಿ ಸ್ಪಷ್ಟವಾಗಿ ಹೇಳಿದೆ ಇವರನ್ನೆಲ್ಲ ಗುರುತಿಸಿ ಪುನರ್ ವಸತಿ ಕೈಗೊಳ್ಳಬೇಕು ಎಂದು ಕಾಯ್ದೆಯಲ್ಲಿ ಹೇಳಿದೆ. ದೇವದಾಸಿಯ ಮಕ್ಕಳ ತಂದೆ ಯಾರು ಎಂದು ಗೊತ್ತಿಲ್ಲದರ ಸಲುವಾಗಿ ಶಾಲಾ ಕಾಲೇಜು ದಾಖಲೆಗಳಲ್ಲಿ ಹೆಸರು ನಮೂದಿಸಲು ಕಿರಿಕಿರಿ ಮುಜುಗರದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಸ್ನೇಹ ಸಂಸ್ಥೆ ದೇವದಾಸಿ ಮತ್ತು ಅವರ ಮಕ್ಕಳ ಶೈಕ್ಷಣಿಕ, ಆರ್ಥಿಕ ಮತ್ತು ಸಮಾಜದಲ್ಲಿ ಸಮಾನತೆ ತರುವ ಸಲುವಾಗಿ ಸಾಕಷ್ಟು ಕೆಲಸಗಳನ್ನು ಕೈಗೊಂಡಿದೆ ಮತ್ತು ಸರ್ಕಾರದ ಗಮನಕ್ಕೆ ತರಲು ನೂರಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದು ಅವರು ಹೇಳಿದರು.
ನಮ್ಮ ಸ್ನೇಹ ಸಂಸ್ಥೆಯು ಈಗಾಗಲೇ ಬಹಳಷ್ಟು ದೇವದಾಸಿ ಮತ್ತು ಮಕ್ಕಳ ಸಬಲೀಕರಣಕ್ಕಾಗಿ ಶೈಕ್ಷಣಿಕ ಕಾರ್ಯಕ್ರಮಗಳು ಮತ್ತು ಆರೋಗ್ಯ ಕಾರ್ಯಕ್ರಮಗಳು ಮಾಡುವುದರ ಜೊತೆಗೆ ನೂರಾರು ಸರ್ಕಾರದ ಯೋಜನೆಗಳನ್ನು ಕೊಡಿಸಿದ್ದೇವೆ ಎಂದು ನಿರ್ದೇಶಕ ರಾಮಾಂಜನೇಯ ವಿವರಣೆ ನೀಡಿದರು.
ದೇವದಾಸಿಯರಾದ ಎಲ್ಲಮ್ಮ ಮಲಪನಗುಡಿ, ಉಮಾದೇವಿ ಕೂಡ್ಲಿಗಿ, ಸೋಮಕ್ಕ ತಿಮ್ಮಲಾಪುರ ತಾವು ನಡೆದು ಬಂದ ಹಾದಿಯಲ್ಲಿ ಸಾಧಕ ಬಾಧಕಗಳ ಬಗ್ಗೆ ಭಾವೋದ್ರೇಕವಾಗಿ ವಿವರಿಸಿದರು.
ಶ್ರೀರಾಘವೇಂದ್ರ ಪ್ಯಾರಾ ಮೆಡಿಕಲ್ ನಲ್ಲಿ ಓದುತ್ತಿರುವ ರಂಜಿತಾ ಕೂಡ್ಲಿಗಿ ನನಗೆ ಡಾಕ್ಟರ್ ಆಗಬೇಕು ಎನ್ನುವ ಗುರಿಯಿದೆ. ಆದರೆ ನನ್ನ ತಾಯಿ ದೇವದಾಸಿ ಆಕೆಗೆ ಅಷ್ಟೊಂದು ಫೀಸ್ ಕಟ್ಟಲು ಆಗುವುದಿಲ್ಲ. ಸರ್ಕಾರದ ಸೌಲಭ್ಯಗಳು ಸಿಕ್ಕಲ್ಲಿ ಓದು ಮುಂದುವರಿಸುತ್ತೇನೆ ಸಭಿಕರ ಮನಕುಲಕುವಂತೆ ಹೇಳಿದಳು.
ಈ ಸಂದರ್ಭದಲ್ಲಿ ಸ್ನೇಹ ಸಂಸ್ಥೆಯ ಪದಾಧಿಕಾರಿಗಳು, ಎನ್‌ಜಿಓ ಸಂಸ್ಥೆಯ ಕಾರ್ಯಕರ್ತರು ಹಾಗೂ ಕರ್ನಾಟಕ ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ಕೆ ಬಿ ಹಿರೇಮಠ್, ಎ ಬಸವರಾಜ್, ವಿಜಯವಾಣಿ, ಎ ಚಿದಾನಂದ, ಶೇಖರ್, ಇತರರು ಇದ್ದರು.