ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಆರ್.ಎಲ್.ಜಾಲಪ್ಪನವರು ನೇರನಡೆ ಮತ್ತು ನಿಷ್ಠುರ ವ್ಯಕ್ತಿತ್ವದಿಂದಲೇ ಹೆಸರಾದ ಅಪರೂಪದ ರಾಜಕಾರಣಿಯಾಗಿದ್ದರು ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಂ.ಕೃಷ್ಣಮೂರ್ತಿ ಹೇಳಿದರು.
ಇಲ್ಲಿನ ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ನೇತೃತ್ವದಲ್ಲಿ ಶನಿವಾರ ಶ್ರೀ ದೇವರಾಜ ಅರಸ್ ಅಂತಾರಾಷ್ಟ್ರೀಯ ವಸತಿ ಶಾಲೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಜಾಲಪ್ಪ ಅವರು ಪರಿಸರ, ಶಿಕ್ಷಣ, ಗ್ರಾಮೀಣಾಭಿವೃದ್ದಿ, ಸಹಕಾರ ಸೇರಿದಂತೆ ವಿವಿಧ ವಲಯಗಳಲ್ಲಿ ಅನೇಕ ಸೇವಾ ಕಾರ್‍ಯಗಳನ್ನು ಜಾರಿಗೆ ತಂದ ಹೆಗ್ಗಳಿಕೆ ಹೊಂದಿದ್ದಾರೆ. ಅವರು ಸ್ಥಾಪಿಸಿರುವ ದೇವರಾಜ ಅರಸ್ ಶಿಕ್ಷಣ ಸಂಸ್ಥೆ ಹಿಂದುಳಿದ ವರ್ಗದ, ಗ್ರಾಮೀಣ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಮಹತ್ವದ ನೀಡುವ ಕೆಲಸ ಮಾಡುತ್ತಿದೆ ಎಂದರು.
ಶ್ರೀ ದೇವರಾಜ ಅರಸ್ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಜೆ.ರಾಜೇಂದ್ರ ಮಾತನಾಡಿ, ಜಾಲಪ್ಪ ಅವರ ಒತ್ತಾಸೆಯಿಂದ ರಾಜ್ಯದಲ್ಲಿ ಜಾರಿಗೆ ಬಂದ ಹಲವು ಯೋಜನೆಗಳು ಇಂದಿಗೂ ಜನಸ್ನೇಹಿಯಾಗಿವೆ. ದೊಡ್ಡಬಳ್ಳಾಪುರದ ಅಪರೆಲ್ ಪಾರ್ಕ್ ಸಾವಿರಾರು ಜನರಿಗೆ ಉದ್ಯೋಗಾವಕಾಶಗಳನ್ನು ನೀಡಿದೆ.
ಮುಖ್ಯವಾಗಿ ಮಹಿಳಾ ಉದ್ಯೋಗಿಗಳಿಗೆ ಆಸರೆಯಾಗಿದೆ. ಶೈಕ್ಷಣಿಕವಾಗಿಯೂ ಸಮಾಜವನ್ನು ಸದೃಢವಾಗಿ ಕಟ್ಟುವ ಉದ್ದೇಶದಿಂದ ಅನೇಕ ವಿದ್ಯಾ ಸಂಸ್ಥೆಗಳನ್ನು ದೇವರಾಜ ಅರಸ್ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಸ್ಥಾಪಿಸಿ ಗ್ರಾಮೀಣ ವಿದ್ಯಾರ್ಥಿಗಳ ಅಧ್ಯಯನಕ್ಕೆ ಪೂರಕ ವಾತಾವರಣ ನಿರ್ಮಿಸಿದ್ದಾರೆ ಎಂದರು.
ಪ್ರತಿಭಾ ಪುರಸ್ಕಾರ:
ಇದೇ ವೇಳೆ ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಯ ವಿವಿಧ ಶೈಕ್ಷಣಿಕ ಘಟಕಗಳ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಶ್ರೀದೇವರಾಜ ಅರಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಕೆ.ಜಿ.ಹನುಮಂತರಾಜು, ವಿಜಯಲಕ್ಷ್ಮಿ-ಆರ್.ಎಲ್.ಜಾಲಪ್ಪ ಶೈಕ್ಷಣಿಕ ದತ್ತಿ ಟ್ರಸ್ಟಿ ಎಂ.ಆರ್.ಶ್ರೀನಿವಾಸ್, ಲಯನ್ಸ್ ಕ್ಲಬ್ ಆಫ್ ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್ ಅಧ್ಯಕ್ಷ ಜೆ.ಆರ್.ರಾಕೇಶ್, ಆರ್‌ಎಲ್‌ಜೆಐಟಿ ಪ್ರಾಂಶುಪಾಲ ಡಾ.ವಿಜಯ್‌ಕಾರ್ತಿಕ್, ಅಕಾಡೆಮಿಕ್ ನಿರ್ದೇಶಕ ಡಾ.ಶ್ರೀನಿವಾಸರೆಡ್ಡಿ, ಎಒ ರಮೇಶ್‌ಕುಮಾರ್, ಕೃಷ್ಣಪ್ಪ, ವಿವಿಧ ಶೈಕ್ಷಣಿಕ ಘಟಕಗಳ ಪ್ರಾಂಶುಪಾಲರು, ಉಪಪ್ರಾಂಶುಪಾಲರು ವೇದಿಕೆಯಲ್ಲಿ ಉಪಸ್ಥಿತರಿದ್ದರು.