ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಶ್ರೀರಾಮಕೃಷ್ಣ ಪರಮಹಂಸರ ಆಧ್ಯಾತ್ಮಿಕ-ಮಾನಸ ಪುತ್ರ ಸ್ವಾಮಿ ಬ್ರಹ್ಮಾನಂದರು ಎಂದು ಚಳ್ಳಕೆರೆಯ ತ್ಯಾಗರಾಜನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥೆ ಎಚ್ ಲಕ್ಷ್ಮೀದೇವಮ್ಮ ಅಭಿಪ್ರಾಯಪಟ್ಟರು.
ತ್ಯಾಗರಾಜನಗರದ ಸದ್ಭಕ್ತರಾದ ನಂಜಮ್ಮ ಕೆಂಚಪ್ಪ ಶಿಕ್ಷಕರ ಸವಿತಾ ನಿವಾಸದಲ್ಲಿ “ಸ್ವಾಮಿ ಬ್ರಹ್ಮಾನಂದ”ರ ಜಯಂತ್ಯುತ್ಸವದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಸ್ವಾಮಿ ಬ್ರಹ್ಮಾನಂದರ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ರಾಖಾಲ ಮತ್ತು ರಾಜ್ ಮಹಾರಾಜ್ ಎಂದೇ ಪ್ರಸಿದ್ಧರಾದ ಸ್ವಾಮಿ ಬ್ರಹ್ಮಾನಂದರು ಶ್ರೀರಾಮಕೃಷ್ಣರ ಹದಿನಾರು ಮಂದಿ ನೇರ ಸಂನ್ಯಾಸಿ ಶಿಷ್ಯರಲ್ಲಿ ಮೊದಲಿಗರಾಗಿ ಶ್ರೀರಾಮಕೃಷ್ಣ ಮಹಾಸಂಘದ ಮೊದಲ ಸಂಘ ಗುರುಗಳಾಗಿ ಸದಾ ಬ್ರಹ್ಮಭಾವದಲ್ಲಿ ಇರುತ್ತಿದ್ದವರು ಇವರು ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ಅವರು ಮಕರ ಸಂಕ್ರಾಂತಿ ಹಬ್ಬದ ವಿಶೇಷತೆಗಳ ಬಗ್ಗೆ ಮಾತನಾಡುತ್ತಾ ಸಂಕ್ರಾಂತಿ ಹಬ್ಬವು ಕೇವಲ ಎಳ್ಳು ಬೆಲ್ಲ ಹಂಚುವ ಹಬ್ಬವಲ್ಲ,ಇದು ಭಾರತೀಯ ಸನಾತನ ವಿಜ್ಞಾನ, ಖಗೋಳಶಾಸ್ತ್ರದ ಅದ್ಭುತ ಸಂಗಮ ಮತ್ತು ಬ್ರಹ್ಮಾಂಡದ ವಿಸ್ಮಯ, ಸೂರ್ಯನು ‘ದಕ್ಷಿಣಾಯನದಿಂದ ಉತ್ತರಾಯಣ‘ಕ್ಕೆ ಪಥ ಬದಲಿಸುವ ಕಾಲವಾಗಿದೆ ಎಂದರು.
ಈ ಜಯಂತ್ಯುತ್ಸವದ ಪ್ರಯುಕ್ತ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ಶ್ರೀರಾಮಕೃಷ್ಣರ ನಾಮಸ್ಮರಣೆ, ವಿಶೇಷ ಭಜನೆ ಮತ್ತು ಯತೀಶ್ ಎಂ ಸಿದ್ದಾಪುರ ಅವರು “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಮಾಡುತ್ತ “ಲೋಕದಾಚೆಯ ಬೆಳಕು” ಎಂಬ ಅಧ್ಯಾಯವನ್ನು ವಾಚಿಸಿ ಅರ್ಥ ವಿವರಣೆ ನೀಡಿದರು.
ಜಯಂತ್ಯುತ್ಸವದಲ್ಲಿ ಎಂ ಲಕ್ಷ್ಮೀದೇವಮ್ಮ, ಸುವರ್ಣಮ್ಮ, ಸುನೀತಾ, ಅನುಸೂಯ ರಾಘವೇಂದ್ರ, ಸರಸ್ವತಿ ರಾಜು, ಸರಸ್ವತಿ, ಗೀತಾ ಸುಂದರೇಶ್ ದೀಕ್ಷಿತ್ ಪಾಲ್ಗೊಂಡಿದ್ದರು.

