ಹಿರಿಯೂರು ಶಾಸಕರು ವಾರದೊಳಗೆ ದಿನ ನಿಗದಿ ಮಾಡಿದರೆ ಡಿಪೋ ಉದ್ಘಾಟನೆ ಮಾಡುವೆ-ರಾಮಲಿಂಗಾರೆಡ್ಡಿ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರಿನ ಕೆ ಎಸ್ ಆರ್ ಟಿ ಸಿ ಡಿಪೋ ಮುಂಭಾಗದಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಕೆಎಸ್ಆರ್ ಟಿಸಿ ವಿಭಾಗೀಯ ಕಚೇರಿಯ ಮುಖ್ಯಸ್ಥರು ಭೇಟಿ ನೀಡಿ ಹೋರಾಟಗಾರರ ಬೇಡಿಕೆ ಆಲಿಸಿದರು.

ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆ ಟಿ  ತಿಪ್ಪೇಸ್ವಾಮಿ ಧರಣಿ ಕುರಿತು ಮಾತನಾಡಿ ನಮ್ಮ ತಾಲೂಕಿನಲ್ಲಿ ಗ್ರಾಮೀಣ ಸಾರಿಗೆ ಡಿಪೋ ಪ್ರಾರಂಭಿಸಬೇಕು ಎಂದು ಸುಮಾರು 20 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಈ ಹಿಂದೆ ಹಿರಿಯೂರು ತಾಲೂಕಿಗೆ ಮುಂಜೂರಾಗಿದ್ದ ಡಿಪೋ ಚಳ್ಳಕೆರೆ ತಾಲೂಕಿಗೆ ವರ್ಗಾಯಿಸಲಾಗಿತ್ತು. ನಂತರ ಬಂದ ಸರ್ಕಾರದ ಮುಂದೆ ಅನೇಕ ಬಾರಿ ಹೋರಾಟ ಮಾಡಿ ಹಿರಿಯೂರು ತಾಲೂಕಿಗೆ ಮುಂಜೂರು ಮಾಡುವಂತೆ ಆಗ್ರಹ ಮಾಡಲಾಯಿತು.

ಸರ್ಕಾರ ಡಿಪೋ ಮಂಜೂರು ಮಾಡಿ ಕಾಮಗಾರಿ ಆಗಿದೆ. ಆದರೆ ಡಿಪೋ ಆರಂಭ ಮಾತ್ರ ಮಾಡುತ್ತಿಲ್ಲ. ಇದರಿಂದ ಜಿಲ್ಲಾ ಉಸ್ತುವಾರಿ ಸಚಿವರು, ಸಾರಿಗೆ ಅಧಿಕಾರಿಗಳು ಖಾಸಗಿ ಬಸ್ ಮಾಲೀಕರೊಂದಿಗೆ ಶಾಮೀಲು ಆಗಿರುವ ಶಂಕೆ ವ್ಯಕ್ತವಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಸುಧಾಕರ್ ಹಿರಿಯೂರು ವಿಧಾನಸಭಾ ಕ್ಷೇತ್ರದ ಬಗ್ಗೆ ತೀವ್ರ ನಿರ್ಲಕ್ಷ್ಯದಿಂದ ಮಾತನಾಡುತ್ತಾರೆ. ಹಿರಿಯೂರು ಕ್ಷೇತ್ರದ ಗ್ರಾಮೀಣ ಭಾಗದ ಜನರಿಗೆ ಬಸ್  ಸೌಲಭ್ಯ ಕಲ್ಪಿಸಲು, ಡಿಪೋ ಆರಂಭ ಮಾಡಲು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಅವರು ಆರೋಪಿಸಿದರು.

ಈ ಹಿಂದೆ ಧರಣಿ ಮಾಡಿದಾಗ ನವೆಂಬರ್ ತಿಂಗಳಲ್ಲಿ ಪ್ರಾರಂಭಿಸುತ್ತೇವೆ ಎಂದು ಸಚಿವರು ಭರವಸೆ ನೀಡಿದ್ದರು. ಆ ಭರವಸೆ ಈಡೇರಲಿಲ್ಲ. ಮತ್ತೆ ಭೇಟಿ ಆಗುವಂತ ಹೋರಾಟಗಾರರಿಗೆ ಈ ತಿಂಗಳು, ಮುಂದಿನ ತಿಂಗಳು, ಯುಗಾದಿ ಹಬ್ಬಕ್ಕೆ ಡಿಪೋ ಆರಂಭಿಸಲಾಗುತ್ತದೆ ಎಂದು ಬರೀ ಸಬೂಬು ಹೇಳಿದ್ದು ಬಿಟ್ಟರೆ ಡಿಪೋ ಆರಂಭಕ್ಕೆ ಯಾವುದೇ ಶ್ರಮ ಹಾಕಲಿಲ್ಲ ಎಂದು ಸಚಿವರ ವಿರುದ್ಧ ತಿಪ್ಪೇಸ್ವಾಮಿ ಹರಿಹಾಯ್ದರು.
ಪ್ರತಿ ತಿಂಗಳು ಒಂದೊಂದು ನೆಪವೊಡ್ಡಿ ಮುಂದಕ್ಕೆ ಹಾಕುತ್ತಿದ್ದೀರೆ, ದಿನಾಂಕ ನಿಗದಿ ಮಾಡುವವರೆಗೂ ಧರಣಿ ವಾಪಸ್ ತೆಗೆಯುವುದಿಲ್ಲ ಎಂದು ಹೋರಾಟಗಾರರು ಪಟ್ಟು ಹಿಡಿದರು.

 ನಂತರ ಅಧಿಕಾರಿಗಳು ದೂರವಾಣಿ ಮೂಲಕ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಸಂಪರ್ಕಿಸಿ ಮಾತನಾಡಿಸಿದರು. ಆಗ ಹಿರಿಯೂರು ತಾಲೂಕಿನ ಗ್ರಾಮೀಣ ಸಾರಿಗೆ ಡಿಪೋ ವಿಚಾರವನ್ನು ಅಧಿಕಾರಿಗಳು ಸಂಕ್ಷಿಪ್ತವಾಗಿ ವಿವರಿಸಿದರು. ನಂತರ ಪ್ರತಿಕ್ರಿಯೆ ನೀಡಿದ ಸಚಿವ ರಾಮಲಿಂಗಾರೆಡ್ಡಿ ನಾನು ಈಗಾಗಲೇ ಆ ಡಿಪೋ ಬಗ್ಗೆ ಎಲ್ಲಾ ಮಾಹಿತಿ ತೆಗೆದುಕೊಂಡಿದ್ದೇನೆ. ನಿಮ್ಮ  ಕ್ಷೇತ್ರದ ಶಾಸಕರು ದಿನಾಂಕ ನಿಗದಿ ಮಾಡಿದ ತಕ್ಷಣ ಬಂದು ಉದ್ಘಾಟನೆ ಮಾಡುತ್ತೇನೆ. ಡಿಪೋ ಆರಂಭವಾದ ತಕ್ಷಣ ಹಿರಿಯೂರು ತಾಲೂಕಿನ ಗ್ರಾಮೀಣ ಭಾಗದಲ್ಲಿ ಬಸ್ ಓಡಿಸುತ್ತೇವೆ. ಅಲ್ಲದೆ ಕ್ಷೇತ್ರದ ಶಾಸಕರು ಒಂದು ವಾರದೊಳಗೆ ದಿನಾಂಕ ನಿಗದಿ ಮಾಡಿದರೂ ನಾವು ಉದ್ಘಾಟನೆ ಮಾಡಲು ಬದ್ಧವಾಗಿದ್ದೇವೆ ಎಂದು ತಿಳಿಸಿದರು.

ಸಚಿವರು ಮುಂದುವರೆದು ಮಾತನಾಡಿ ನಮ್ಮ ಮೇಲೆ ಭರವಸೆ ಇಟ್ಟು ಧರಣಿಯನ್ನು ವಾಪಸ್ ಪಡೆಯಿರಿ ಎಂದು ಮನವಿ ಮಾಡಿದರು. ಸಚಿವ ರಾಮಲಿಂಗಾರೆಡ್ಡಿ ಅವರು ನೀಡಿದ ಭರವಸೆಯಿಂದ ಧರಣಿಯನ್ನು ವಾಪಸ್ ಪಡೆಯಲಾಗುತ್ತದೆ ಎಂದು ಹೋರಾಟಗಾರರು ಘೋಷಿಸಿದರು.

ಧರಣಿಯಲ್ಲಿ ರೈತ ಮುಖಂಡರಾದ ಸಿದ್ದರಾಮಣ್ಣ, ಅರಳೀಕೆರೆ ತಿಪ್ಪೇಸ್ವಾಮಿ, ಎಂ.ಆರ್.ಈರಣ್ಣ, ಮೀಸೆ ರಾಮಣ್ಣ, ಗೌಡಪ್ಪ, ತಿಮ್ಮಾರೆಡ್ಡಿ, ರಂಗಸ್ವಾಮಿ, ಬಾಲಕೃಷ್ಣ, ಈರಣ್ಣ,  ಜಯಣ್ಣ, ಜಗದೀಶ್, ನಾರಾಯಣಪ್ಪ, ರಾಜಪ್ಪ, ರಮೇಶ್, ಚಿತ್ರಲಿಂಗಪ್ಪ, ಆರ್ ಕೆ ಗೌಡ್ರು, ನಾಗರಾಜ್ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.

Share This Article
error: Content is protected !!
";