ಬಡವರಿಗೆ ಸರ್ಕಾರಿ ಸೌಲಭ್ಯ ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ-ರಾಮಪ್ಪ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಬಡತನದ ಬೇಗೆಯಲ್ಲಿ ಬೇಯುತ್ತಿರುವವರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆಂದು ಕರ್ನಾಟಕ ರಾಜ್ಯ ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷ ನೇರ್‍ಲಗುಂಟೆ ರಾಮಪ್ಪ ಭರವಸೆ ನೀಡಿದರು.

ಭೋವಿ ಅಭಿವೃದ್ದಿ ನಿಮಗದ ಅಧ್ಯಕ್ಷರಾಗಿ ಬೆಂಗಳೂರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಪ್ರಥಮ ಬಾರಿಗೆ ಶನಿವಾರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.

- Advertisement - 

ನಾನು ಬಯಸಿದ್ದೆ ಬೇರೆ, ಸಿಕ್ಕಿದ್ದೆ ಬೇರೆ. ನಾನು ಬೇರೆ ಜಾತಿಯಲ್ಲಿ ಹುಟ್ಟಿದ್ದರೆ ಇಷ್ಟೊತ್ತಿಗೆ ಎರಡು ಮೂರು ಸಾರಿ ಶಾಸಕನಾಗಿರುತ್ತಿದ್ದೆ. ಜಿಲ್ಲೆಯ ಶಾಸಕರು ಹಾಗು ಜಿಲ್ಲಾ ಉಸ್ತುವಾರಿ ಸಚಿವರು ಮುಖ್ಯಮಂತ್ರಿಯನ್ನು ಭೇಟಿ ಮಾಡಿ ನನ್ನ ಬಗ್ಗೆ ಚರ್ಚಿಸಿದ್ದರ ಫಲವಾಗಿ ನನಗೆ ಕರ್ನಾಟಕ ರಾಜ್ಯ ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷ ಸ್ಥಾನ ಸಿಕ್ಕಿದೆ.

ಅನೇಕ ವರ್ಷಗಳಿಂದಲೂ ಪಕ್ಷಕ್ಕೆ ಪ್ರಾಮಾಣಿಕವಾಗಿ ದುಡಿಯುತ್ತಿದ್ದೇನೆ. ರಾಣೆಬೆನ್ನೂರು, ಹೆಚ್.ಡಿ.ಕೋಟೆ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನನ್ನನ್ನು ಉಸ್ತುವಾರಿಯಾಗಿ ನೇಮಕ ಮಾಡಿದಾದ ಇಬ್ಬರು ಅಭ್ಯರ್ಥಿಗಳ ಗೆಲುವಿಗೆ ಶಕ್ತಿ ಮೀರಿ ಶ್ರಮಿಸಿದೆ. ಸ್ವಂತ ಹಣ ಖರ್ಚು ಮಾಡಿಕೊಂಡು ಪಕ್ಷದ ಕೆಲಸ ಮಾಡುತ್ತಿದ್ದೇನೆಂದರು.

- Advertisement - 

ಭೋವಿ ಅಭಿವೃದ್ದಿ ನಿಗಮದಲ್ಲಿ ಅನೇಕ ಸಮಸ್ಯೆ, ಸವಾಲುಗಳಿವೆ. ಎಲ್ಲವನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ದಲ್ಲಾಲಿಗಳನ್ನು ದೂರವಿಟ್ಟು, ನಿಜವಾದ ಬಡವರು, ಶೋಷಿತರಿಗೆ ಸರ್ಕಾರದ ಯೋಜನೆಗಳನ್ನು ಮುಟ್ಟಿಸುತ್ತೇನೆ. ಅದಕ್ಕಾಗಿ ಧೈರ್ಯ, ಶಕ್ತಿ, ಸಾಮರ್ಥ್ಯವಿದೆ. ಎಲ್ಲರ ಸಲಹೆ, ಸಹಕಾರ ಪಡೆದು ನನ್ನ ಇತಿಮಿತಿಯೊಳಗೆ ಕೆಲಸ ಮಾಡುತ್ತೇನೆಂದು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಮಾತನಾಡಿ ಕಾಂಗ್ರೆಸ್ ಪಕ್ಷ ಬಡವರು, ಶೋಷಿತರು, ರೈತರು, ಎಲ್ಲಾ ವರ್ಗದವರ ಪರವಾಗಿದೆ. ಸಾಮಾಜಿಕ ನ್ಯಾಯ ನೀಡುವಲ್ಲಿ ಮೊದಲಿನಿಂದಲೂ ಮುಂಚೂಣಿಯಲ್ಲಿದೆ. ರಾಮಪ್ಪ ನೇರ್‍ಲಗುಂಟೆರವರು ನಿರಂತರವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿರುವುದರಿಂದ ನಾಯಕರುಗಳು ಗುರುತಿಸಿ ಕರ್ನಾಟಕ ರಾಜ್ಯ ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಸರ್ಕಾರದಿಂದ ಸಿಗುವ ಯೋಜನೆಗಳನ್ನು ಭೋವಿ ಸಮಾಜದಲ್ಲಿನ ಕಟ್ಟಕಡೆಯವರಿಗೆ ತಲುಪಿಸಲಿ. ಕಾರ್ಯಕರ್ತರು, ಮುಖಂಡರುಗಳಿಗೂ ಯೋಜನೆಯ ಅರಿವು ಮೂಡಿಸಲಿ ಎಂದರು.

ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ ಮಾತನಾಡುತ್ತ ಚಳ್ಳಕೆರೆ ಎಂಎಲ್‌ಎ. ಟಿ.ರಘುಮೂರ್ತಿ ಮೂರನೆ ಬಾರಿ ಗೆಲ್ಲಲು ನೇರ್‍ಲಗುಂಟೆ ರಾಮಪ್ಪನವರ ಪರಿಶ್ರಮವಿದೆ. ಶೋಷಿತ ಸಮುದಾಯಗಳಿಗೆ ನ್ಯಾಯ ನೀಡಬೇಕಾಗಿರುವುದರಿಂದ ಮುಂದಿನ ದಿನಗಳಲ್ಲಿ ಇನ್ನು ದೊಡ್ಡ ಅಧಿಕಾರ ಸಿಗಲಿ ಎಂದು ಹಾರೈಸಿದರು.

ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್, ಜಿ.ವಿ.ಮಧುಗೌಡ, ಮುದಸಿರ್ ನವಾಜ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಪಿ.ಸಂಪತ್, ಮಹಡಿ ಶಿವಮೂರ್ತಿ, ನೇತ್ರಾವತಿ, ರೇಣುಕಾ, ಪರಿಶಿಷ್ಟ ಪಂಗಡ ವಿಭಾಗದ ಅಧ್ಯಕ್ಷ ಹೆಚ್.ಅಂಜಿನಪ್ಪ,

ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್.ಡಿ.ಕುಮಾರ್, ಲಕ್ಷ್ಮಿಕಾಂತ್, ಲೋಕೇಶ್‌ನಾಯ್ಕ, ನ್ಯಾಯವಾದಿ ಸುದರ್ಶನ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೀತಾ ನಂದಿನಿಗೌಡ, ಸೈಯದ್ ಅಲ್ಲಾಭಕ್ಷಿ, ಖುದ್ದೂಸ್, ದಲಿತ ಮುಖಂಡ ರಾಜಪ್ಪ ಇವರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.

 

 

Share This Article
error: Content is protected !!
";